ಸೋತರೂ, ಗೆದ್ದರೂ ಅದೇ ಹಾಡು... ಹರ್ಮನ್​ಪ್ರೀತ್​ ಬೆನ್ನಿಗೆ ನಿಂತ ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​! Harmanpreet Kaur

Harmanpreet Kaur
Published on

ನವದೆಹಲಿ: ಹರ್ಮನ್​ಪ್ರೀತ್​ ಕೌರ್ ( Harmanpreet Kaur ) ನೇತೃತ್ವದ ಭಾರತ ತಂಡವು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಜಯ ದಾಖಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿದ್ದು ಎಲ್ಲರಿಗೂ ಗೊತ್ತೇ ಇದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್‌ಗಳಿಂದ ಸೋಲಿಸಿದ ನಮ್ಮ ನಾರಿ ಪಡೆ ತನ್ನ ಚೊಚ್ಚಲ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಹರ್ಮನ್​ಪ್ರೀತ್​, ಸ್ಮೃತಿ ಮಂಧಾನ, ಜೆಮಿಮಾ ರೊಡ್ರಿಗಸ್, ದೀಪ್ತಿ ಶರ್ಮಾ ಹಾಗೂ ರಿಚಾ ಘೋಷ್​ ಅವರಂತಹ ಆಟಗಾರ್ತಿಯರ ಅದ್ಭುತ ಪ್ರದರ್ಶನದಿಂದ ಭಾರತ ಈ ಪ್ರತಿಷ್ಠಿತ ಟ್ರೋಫಿಯನ್ನು ಗೆದ್ದುಕೊಂಡಿತು. ಈ ಐತಿಹಾಸಿಕ ವಿಜಯವನ್ನು ಇಡೀ ದೇಶವೇ ಭರ್ಜರಿಯಿಂದ ಸಂಭ್ರಮಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದಾಗಿ ಭಾರತೀಯ ಮಹಿಳಾ ಕ್ರಿಕೆಟಿಗರನ್ನು ಭೇಟಿಯಾಗಿ ಅಭಿನಂದಿಸಿದರು.

ಈ ಗೆಲುವಿನ ಸಂಭ್ರಮಾಚರಣೆಯ ನಡುವೆಯೇ ಭಾರತದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರು ನೀಡಿದ ಹೇಳಿಕೆಗಳು ಎಲ್ಲರನ್ನೂ ಒಮ್ಮೆ ಅಚ್ಚರಿಗೊಳಿಸಿದವು. ಅದೇನೆಂದರೆ, ಹರ್ಮನ್‌ಪ್ರೀತ್ ಅವರು ತಮ್ಮ ನಾಯಕತ್ವ ತ್ಯಜಿಸಿ, ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನತ್ತ ಗಮನಹರಿಸಬೇಕು. ಭಾರತದ ಕ್ರಿಕೆಟ್​ ಭವಿಷ್ಯಕ್ಕಾಗಿ ನಾಯಕತ್ವದಲ್ಲಿ ಬದಲಾವಣೆ ಅನಿವಾರ್ಯ ಎಂದು ಶಾಂತಾ ರಂಗಸ್ವಾಮಿ ಸಲಹೆ ನೀಡಿದ್ದಾರೆ.

ಆದರೆ, ಶಾಂತಾ ರಂಗಸ್ವಾಮಿ ಅವರ ಹೇಳಿಕೆಯ ವಿರುದ್ಧ ಭಾರತದ ಮಾಜಿ ನಾಯಕಿ ಅಂಜುಮ್ ಚೋಪ್ರಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಎನ್​ಡಿಟಿವಿ ಜತೆ ಮಾತನಾಡಿದ ಅವರು, ಪ್ರತಿ ವಿಶ್ವಕಪ್ ನಂತರವೂ ಇಂತಹ ಹೇಳಿಕೆಗಳು ಬರುತ್ತಲೇ ಇರುತ್ತವೆ. ಕಳೆದ ನಾಲ್ಕು ಅಥವಾ ಐದು ವಿಶ್ವಕಪ್‌ಗಳನ್ನು ನೋಡಿದರೆ, ಅದು ಸ್ಪಷ್ಟವಾಗುತ್ತದೆ. ಭಾರತ ಸೋತರೆ, ಅವರು ಹರ್ಮನ್ ಅವರನ್ನು ನಾಯಕತ್ವದಿಂದ ತೆಗೆದುಹಾಕಬೇಕೆಂದು ಒತ್ತಾಯಿಸುತ್ತಾರೆ. ಈಗ, ಅವರು ಗೆದ್ದರು ಕೂಡ ಅದೇ ಹಾಡನ್ನು ಹಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ರೀತಿ ಹೇಳುವುದಲ್ಲಿ ನ್ಯಾಯ ಎಲ್ಲಿದೆ? ನಾವು ಚೊಚ್ಚಲ ವಿಶ್ವಕಪ್ ಗೆದ್ದ ಕ್ಷಣಗಳನ್ನು ಆನಂದಿಸುತ್ತಿರುವಾಗ ಇಂತಹ ಹೇಳಿಕೆಗಳನ್ನು ನೀಡುವುದು ನೋವಿನ ಸಂಗತಿ. ಆದ್ದರಿಂದ ನಾನು ಅದರ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ನನಗೆ ಹರ್ಮನ್ ಜೊತೆ ಉತ್ತಮ ಸಂಬಂಧವಿದೆ. ಅವರು ದೇಶೀಯ ಕ್ರಿಕೆಟ್‌ನಲ್ಲಿ ನಮ್ಮೊಂದಿಗೆ ಆಡಿದ್ದಾರೆ. ಆಗ ನಾನು ಅವಳ ಪ್ರತಿಭೆಯನ್ನು ನೋಡಿದ್ದೇನೆ. 19 ವರ್ಷದೊಳಗಿನ ಆಟಗಾರ್ತಿಯಾಗಿದ್ದಾಗಲೂ ಆಕೆ ದೊಡ್ಡ ಹೊಡೆತಗಳನ್ನು ಆಡುತ್ತಿದ್ದಳು. ಆಕೆ ಪಂದ್ಯ ವಿಜೇತೆ. ಅದಕ್ಕಾಗಿಯೇ ಹರ್ಮನ್ ನಾಯಕಿಯಾಗಿ ಮುಂದುವರಿಯಬೇಕೆಂದು ನಾನು ಹೇಳುತ್ತಿದ್ದೆ ಎಂದು ಚೋಪ್ರಾ ಎನ್​ಡಿಟಿವಿ ಸಂದರ್ಶನದಲ್ಲಿ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net