ಬಂಧಿತ ವೈದ್ಯನ ಸುಳಿವು: ಬರೋಬ್ಬರಿ 300 ಕೆಜಿ RDX, ಎಕೆ-47 ಸೀಜ್​, ತಪ್ಪಿದ ಭಾರಿ ಅನಾಹುತ! Jammu and Kashmir Police

Jammu and Kashmir Police
Published on

ಶ್ರೀನಗರ: ಬಂಧಿತ ವೈದ್ಯ ನೀಡಿದ ಸುಳಿವಿನ ಮೇರೆಗೆ​​ ನ್ಯಾಷನಲ್​ ಕ್ಯಾಪಿಟಲ್​ ರೀಜನ್​ (ಎನ್​ಸಿಆರ್​) ವ್ಯಾಪ್ತಿಯಲ್ಲಿ ಬರುವ ಫರಿದಾಬಾದ್​ನಲ್ಲಿ ಬರೋಬ್ಬರಿ 300 ಕೆಜಿ ತೂಕದ ಆರ್​ಡಿಎಕ್ಸ್​ ಮತ್ತು ಒಂದು ಎಕೆ-47 ರೈಫಲ್​ ಸೇರಿದಂತೆ ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ( Jammu and Kashmir Police ) ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದಾಗಿ ಸಂಭವನೀಯ ಭಾರಿ ಅನಾಹುತ ತಪ್ಪಿದಂತಾಗಿದೆ.

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ವಿಚಾರಣೆಯ ಸಂದರ್ಭದಲ್ಲಿ ಕಾಶ್ಮೀರದ ವೈದ್ಯ ಡಾ. ಆದಿಲ್ ಅಹ್ಮದ್ ರಾಥರ್ ನೀಡಿದ ಮಾಹಿತಿ ಆಧಾರದ ಮೇಲೆ ಈ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದಕ್ಕೂ ಮೊದಲು, ಪೊಲೀಸರು ಕಾಶ್ಮೀರ ಕಣಿವೆಯಲ್ಲಿ ವೈದ್ಯನಿಗೆ ಸೇರಿದ ಲಾಕರ್‌ನಿಂದ ಎಕೆ -47 ರೈಫಲ್ ಮತ್ತು ಇತರ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಇನ್ನು ಪುಲ್ವಾಮಾ ಜಿಲ್ಲೆಯ ಕೊಯಿಲ್ ನಿವಾಸಿಯಾಗಿರುವ ಶಕೀಲ್ ಅಹ್ಮದ್ ಗನೈ ಎಂಬುವರ ಪುತ್ರ ಮುಜಾಮಿಲ್ ಶಕೀಲ್ ಎಂದು ಗುರುತಿಸಲಾದ ಮತ್ತೊಬ್ಬ ವೈದ್ಯನ ಪಾತ್ರವು ಕೂಡ ಈ ಪ್ರಕರಣದಲ್ಲಿರುವುದು ತನಿಖೆಯಿಂದ ಬಹಿರಂಗಗೊಂಡಿದೆ. ಫರಿದಾಬಾದ್‌ನಲ್ಲಿ ವಶಪಡಿಸಿಕೊಂಡ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಡಾ. ಮುಜಾಮಿಲ್ ಸಹಾಯ ಮಾಡಿದ್ದಾನೆಂದು ಶಂಕಿಸಲಾಗಿದೆ.

ಸದ್ಯ ಇಬ್ಬರು ವೈದ್ಯರು ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಶದಲ್ಲಿದ್ದಾರೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಕಣಿವೆ ರಾಜ್ಯದಲ್ಲಿ ಭಾರಿ ಸ್ಫೋಟಕಗಳನ್ನು ವಶಪಡಿಸಿಕೊಂಡ ಪ್ರಕರಣ ಇದೇ ಆಗಿದೆ. ಈ ಬಗ್ಗೆ ಅಧಿಕಾರಿಗಳು ಸಮಗ್ರ ತನಿಖೆಯನ್ನು ಮುಂದುವರೆಸಿದ್ದು, ಕೇಂದ್ರಾಡಳಿತ ಪ್ರದೇಶದ ಹೊರಗೆ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಕಳ್ಳಸಾಗಣೆ ಮತ್ತು ಸಂಗ್ರಹಿಸುವ ಜಾಲವನ್ನು ಪತ್ತೆಹಚ್ಚಿ ಹೆಚ್ಚಿನ ಸ್ಫೋಟಕಗಳನ್ನು ವಶಪಡಿಸಿಕೊಳ್ಳುವ ಮತ್ತು ಬಂಧಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net