

ನವದೆಹಲಿ: ಭಾರತದ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಹಾಗೂ ಉಪನಾಯಕಿ ಸ್ಮೃತಿ ಮಂಧಾನ ಅವರು ದಾಖಲೆಗಳ ಸರದಾರ, ರನ್ ಮೆಷಿನ್ ಹಾಗೂ ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿಯಾಗಿರುವ ವಿರಾಟ್ ಕೊಹ್ಲಿ (Virat Kohli ) ಅವರ ದಾಖಲೆಯೆಯನ್ನು ಹಿಂದಿಕ್ಕಿದ್ದಾರೆ ಎಂಬ ಬರಹವುಳ್ಳ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಗಾದರೆ, ನಿಜಕ್ಕೂ ಸ್ಮೃತಿ, ಕೊಹ್ಲಿ ದಾಖಲೆಯನ್ನು ಹಿಂದಿಕ್ಕಿದ್ರಾ? ಈ ಪೋಸ್ಟ್ ಎಷ್ಟು ಸತ್ಯ? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
‘iasworldofficial’ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಕ್ಟೋಬರ್ 13ರಂದು ಪೋಸ್ಟ್ ಮಾಡಲಾಗಿದೆ. ಅದರಲ್ಲಿ, ಭಾರತೀಯ ಮಹಿಳಾ ಕ್ರಿಕೆಟರ್ ಸ್ಮೃತಿ ಅವರು ಮಹಿಳಾ ಏಕದಿನ ಪಂದ್ಯಗಳಲ್ಲಿ 5,000 ರನ್‌ಗಳನ್ನು ತಲುಪಿದ ಅತ್ಯಂತ ಕಿರಿಯ ಮತ್ತು ವೇಗದ ಆಟಗಾರ್ತಿಯಾಗಿದ್ದಾರೆ. ವೇಗವಾಗಿ 5000 ರನ್ ಗಳಿಸಿದ ವಿಚಾರದಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆಯನ್ನೂ ಸ್ಮೃತಿ ಮುರಿದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಭಾರತದ ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ ಪಂದ್ಯದ ನಂತರ ಈ ಸುದ್ದಿ ಹರಿದಾಡಲು ಪ್ರಾರಂಭವಾಯಿತು. ಅಲ್ಲದೆ, ಅನೇಕ ಇನ್ಸ್ಟಾಗ್ರಾಂ ಬಳಕೆದಾರರು ಸ್ಮೃತಿ ಅವರ ಸಾಧನೆಯನ್ನು ಎತ್ತಿ ತೋರಿಸುವ ಗ್ರಾಫಿಕ್ಸ್‌ನೊಂದಿಗೆ ಅಭಿನಂದನಾ ಪೋಸ್ಟ್‌ಗಳನ್ನು ಹಂಚಿಕೊಂಡರು. ಇದರ ನಡುವೆ ಕೆಲವರು ಸಂದೇಹವನ್ನು ಸಹ ವ್ಯಕ್ತಪಡಿಸಿದರು. ಏಕೆಂದರೆ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನಕಲಿ ಸುದ್ದಿಗಳು ಹರಿದಾಡುವುದರಿಂದ ಸ್ಮೃತಿ ಕುರಿತಾದ ಪೋಸ್ಟ್ ಕೂಡ ಅನೇಕರಲ್ಲಿ ಪ್ರಶ್ನೆ ಹುಟ್ಟುಹಾಕಿತು.
ಸ್ಮೃತಿ ಅವರು ಕೇವಲ 112 ಇನ್ನಿಂಗ್ಸ್‌ಗಳಲ್ಲಿ 5,000 ಏಕದಿನ ರನ್‌ಗಳನ್ನು ತಲುಪಿದರೆ, ಪುರುಷರ ಏಕದಿನ ಪಂದ್ಯಗಳಲ್ಲಿ 5,000 ರನ್‌ಗಳ ಗಡಿಯನ್ನು ದಾಟಲು ಕಿಂಗ್ ಕೊಹ್ಲಿ 114 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ ಎಂದು ಪೋಸ್ಟ್‌ಗಳು ಹೇಳುತ್ತವೆ. ಹಾಗಾದರೆ, ಈ ಪೊಸ್ಟ್ನಲ್ಲಿ ಹೇಳುತ್ತಿರುವುದು ಸತ್ಯವೇ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಹೌದು, ವೈರಲ್ ಆಗುತ್ತಿರುವ ಪೋಸ್ಟ್ನಲ್ಲಿ ಹೇಳಿರುವುದು ನೂರಕ್ಕೆ ನೂರು ಸತ್ಯ. ಈ ಕುರಿತು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ಫ್ಯಾಕ್ಟ್ಚೆಕ್ ಮಾಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಯ ವೆಬ್ಸೈಟ್ನಲ್ಲಿ ದಾಖಲಾಗಿರುವ ದತ್ತಾಂಶ ಮತ್ತು ಬಿಸಿಸಿಐ ಪ್ರಕಟಿಸಿರುವ ಅಧಿಕೃತ ಪಂದ್ಯದ ಡೇಟಾವನ್ನು ಪರಿಶೀಲಿಸು ಮೂಲಕ ವೈರಲ್ ಪೋಸ್ಟ್ನ ನಿಜಾಂಶವನ್ನು ಪರಿಶೀಲಿಸಿದೆ. ಅದರ ಪ್ರಕಾರ ಸ್ಮೃತಿ ಅವರು 112 ಇನ್ನಿಂಗ್ಸ್‌ಗಳಲ್ಲಿ 5,000 ಏಕದಿನ ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಅಸ್ತಿತ್ವದಲ್ಲಿರುವ ದಾಖಲೆಗಳು ದೃಢಪಡಿಸುತ್ತವೆ. ಹೀಗಾಗಿ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ವೇಗದ 5000 ರನ್ ಮಾಡಿದ ಸಾಧನೆ ಸ್ಮೃತಿ ಹೆಸರಿನಲ್ಲಿದೆ. (ಏಜೆನ್ಸೀಸ್)