ಆ ಇಬ್ಬರು ಸ್ಟಾರ್​ ಆಟಗಾರರಿಗಾಗಿ ಸ್ಯಾಮ್ಸನ್​ ಬೇಡವಾದ್ರಾ? ಏನಿದು ಆರ್​ಆರ್​ ಟ್ರೇಡ್​ ಲೆಕ್ಕಾಚಾರ? | IPL Trade

Untitled design (66)
Published on

ನವದೆಹಲಿ: ಐಪಿಎಲ್ 2026ರ ಹರಾಜು ಪ್ರಕ್ರಿಯೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ ಎನ್ನುವಾಗ ಇತ್ತ 10 ಬಲಿಷ್ಠ ತಂಡಗಳಿಗೆ​ ರಿಟೆನ್ಶನ್​ ಪ್ರಕ್ರಿಯೆಗೆ ಡೆಡ್​ಲೈನ್​ ಸಮೀಪಿಸುತ್ತಿದೆ (IPL Trade). ಮತ್ತೊಂದೆಡೆ, ಸಂಜು ಸ್ಯಾಮ್ಸನ್ ಸಿಎಸ್​ಕೆ ಬರುವ ವಿಚಾರ ಜಾಲತಾಣಗಳಲ್ಲಿ ಬಲು ಜೋರಾಗಿದೆ. ಆರ್​ಆರ್​ ತಂಡ ಅವರನ್ನು ಉಳಿಸಿಕೊಳ್ಳುವ ಬದಲಿಗೆ ಕೈಬಿಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ರಾಜಸ್ಥಾನ ತಂಡದ ಕ್ಯಾಪ್ಟನ್ ಆಗಿರುವ ಸ್ಯಾಮ್ಸನ್​ರನ್ನು ಟ್ರೇಡ್​ ಮೂಲಕ​ ಚೆನ್ನೈ ಸೂಪರ್ ಕಿಂಗ್ಸ್ ಸೇರಿಸಲು ಫ್ರಾಂಚೈಸಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ. ಸಂಜುರನ್ನು ಕಳಿಸುವ ಮುಖೇನ ಸಿಎಸ್​ಕೆ ತಂಡದ ಇಬ್ಬರು ಸ್ಟಾರ್ ಆಟಗಾರರನ್ನು ಕರೆದುಕೊಳ್ಳಲು ಆರ್​ಆರ್​ ಮಾಸ್ಟರ್​ಪ್ಲ್ಯಾನ್​ ಮಾಡುತ್ತಿದೆ.

ರವೀಂದ್ರ ಜಡೇಜಾ, ಸ್ಯಾಮ್ ಕರನ್

ತೆರೆಮರೆಯಲ್ಲಿ ಸಿಎಸ್​ಕೆ ಜತೆಗೆ ಟ್ರೇಡ್​ ಕುರಿತಾಗಿ ಮಾತಾಡಿಕೊಂಡಿರುವ ರಾಜಸ್ಥಾನ ರಾಯಲ್ಸ್, ತಮ್ಮ ತಂಡದ ವಿಕೆಟ್​ ಕೀಪರ್​-ಬ್ಯಾಟರ್​ ಆಗಿರುವ ಸಂಜು ಸ್ಯಾಮ್ಸನ್​ರನ್ನು ಕಳಿಸಿಕೊಡಲು ಸಿದ್ಧ. ನಮಗೆ ಜಡೇಜಾ ಮತ್ತು ಸ್ಯಾಮ್ ಕರನ್​ ಬೇಕು ಎಂದು ಕೇಳಿದ್ದಾಗಿ ಕ್ರಿಕೆಟ್​ ಮೂಲಗಳು ತಿಳಿಸಿವೆ. ಈ ಬಗ್ಗೆ ಎಲ್ಲಿಯೂ ಬಾಯ್ಬಿಡದ ಎರಡು ಫ್ರಾಂಚೈಸಿಗಳು, ಐಪಿಎಲ್​ ಆಡಳಿತ ಮಂಡಳಿ ನೀಡಿರುವ ಡೆಡ್​ಲೈನ್​ನೊಳಗೆ ತಮ್ಮ ನಿರ್ಧಾರಗಳನ್ನು ಸ್ಪಷ್ಟಪಡಿಸಬೇಕಿದೆ.

ಸಿಎಸ್​ಕೆ ತಂಡಕ್ಕೆ ದೊಡ್ಡ ಶಕ್ತಿಯಾಗಿರುವ ರವೀಂದ್ರ ಜಡೇಜಾ, 2012ರಿಂದ ಚೆನ್ನೈ ಪರ ಆಡಿದ್ದಾರೆ. ಧೋನಿ ನಾಯಕತ್ವದಲ್ಲಿ ಐಪಿಎಲ್​ ಟ್ರೋಫಿ ಎತ್ತಿಹಿಡಿದಿರುವ ಸಿಎಸ್​ಕೆಗೆ ಜಡೇಜಾ ಹಲವು ಬಾರಿ ಭರ್ಜರಿ ಗೆಲುವುಗಳಿಗೆ ಪ್ರಮುಖ ಕಾರಣರಾಗಿದ್ದಾರೆ. ಇನ್ನು 11 ಆವೃತ್ತಿಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸಂಜು ಪ್ರತಿನಿಧಿಸಿದ್ದಾರೆ. ಟೀಮ್ ಪರ ಉತ್ತಮ ಇನ್ನಿಂಗ್ಸ್​ ಹಾಗೂ ನಾಯಕತ್ವವನ್ನು ಮೆರೆದಿದ್ದಾರೆ. ಆದರೂ ಅವರನ್ನು ಟ್ರೇಡ್​ ಮೂಲಕ ಕಳಿಸಲು ಆರ್​​ಆರ್​ ಫ್ರಾಂಚೈಸಿ ಮುಂದಾಗಿರುವುದು ಸದ್ಯ ಅಚ್ಚರಿಯ ನಡೆ ಎಂದೇ ಹೇಳಬಹುದು. ಈ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದರೆ, ಪ್ರಸ್ತುತ, ಹರಿದಾಡುತ್ತಿರುವ ಟ್ರೇಡ್​ ವದಂತಿ ನಿಜ ಎಂಬುದು ಸ್ಪಷ್ಟವಾಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net