

ಮುಂಬೈ: ಭಾರತಕ್ಕೆ ಈಗಾಗಲೇ ಬಂದಿಳಿದಿರುವ ಎಲಾನ್ ಮಸ್ಕ್ (Tesla Cars) ಒಡೆತನದ ಟೆಸ್ಲಾ ಕಾರುಗಳು, ಮೊದಲು ಮುಂಬೈಗೆ ಲಗ್ಗೆಯಿಟ್ಟಿತು. ಆರಂಭದಲ್ಲಿ ಈ ಲಕ್ಸುರಿ ಕಾರುಗಳಿಗೆ ನಿರೀಕ್ಷೆಗೂ ಮೀರಿದ ಬುಕ್ಕಿಂಗ್ಗಳು ಬಂದಿವೆ ಎಂದು ಹೇಳಲಾಯಿತು. ಪ್ರಚಾರಗಳು ಕೂಡ ದೊಡ್ಡ ಮಟ್ಟದಲ್ಲಿಯೇ ಸಿಕ್ಕಿತು. ಆದರೆ, ಇಲ್ಲಿಯವರೆಗೆ ಎಷ್ಟು ಕಾರುಗಳು ಸೇಲ್ ಆಗಿವೆ ಎಂಬುದರ ವಿವರ ದೊರತಿರಲಿಲ್ಲ. ಇದೀಗ ಅಕ್ಟೋಬರ್ ತಿಂಗಳಲ್ಲಿ ಮಸ್ಕ್ ಸಂಸ್ಥೆಯ ಮಸ್ತ್ ಕಾರುಗಳ ಮಾರಾಟದ ಸಂಖ್ಯೆ ಲಭಿಸಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಮಾರುಕಟ್ಟೆ ವೇಗವಾಗಿ ವಿಸ್ತರಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಅವಕಾಶಗಳನ್ನು ಬಳಸಿಕೊಳ್ಳಲು, ವಿಯೆಟ್ನಾಂ ಕಂಪನಿ ವಿನ್‌ಫಾಸ್ಟ್ ಮತ್ತು ಈ ವರ್ಷ ಭಾರತವನ್ನು ಪ್ರವೇಶಿಸಿದ ಅಮೇರಿಕನ್ ಕಂಪನಿ ಟೆಸ್ಲಾ ದೊಡ್ಡ ಬಿಜಿನೆಸ್ ಪ್ಲ್ಯಾನ್ನೊಂದಿಗೆ ಗ್ರಾಹಕರನ್ನು ಆಕರ್ಷಿಸುವ ಕೆಲಸದಲ್ಲಿ ಸಖತ್ ಬಿಜಿಯಾಗಿವೆ. ಆದಾಗ್ಯೂ, ವಿನ್‌ಫಾಸ್ಟ್ ತನ್ನ ಕಾರುಗಳನ್ನು ಭಾರತ್ ಮೊಬಿಲಿಟಿ ಎಕ್ಸ್‌ಪೋ-2025ರಲ್ಲಿ ಪ್ರದರ್ಶಿಸಿತು. ನಂತರ, ಸೆಪ್ಟೆಂಬರ್ 6ರಂದು, 16.49ರಿಂದ 25.49 ಲಕ್ಷ ರೂ.ವರೆಗಿನ ಬೆಲೆಯಲ್ಲಿ VF6 ಮತ್ತು VF7 ಎಸ್ಯುವಿಗಳನ್ನು ರಿಲೀಸ್ ಮಾಡಿತು.
ವಿನ್‌ಫಾಸ್ಟ್ ಕಂಪನಿಯು ಕೇವಲ ಅಕ್ಟೋಬರ್‌ನಲ್ಲಿ 131 ವಾಹನಗಳನ್ನು ಮಾರಾಟ ಮಾಡಿದೆ ಮತ್ತು ಸರ್ಕಾರಿ ವಾಹನ ನೋಂದಣಿ ಪೋರ್ಟಲ್ 'ವಾಹನ್' ಪ್ರಕಾರ, ಇದುವರೆಗೆ ಒಟ್ಟು 204 ಕಾರುಗಳು ನೋಂದಾಯಿಸಲ್ಪಟ್ಟಿವೆ. ಆದಾಗ್ಯೂ, ತಮಿಳುನಾಡಿನಲ್ಲಿ ತಯಾರಿಕ ಘಟಕ ಮತ್ತು 27 ನಗರಗಳಲ್ಲಿ 35 ಶೋರೂಮ್‌ಗಳನ್ನು ಹೊಂದಿರುವ ಸಂಸ್ಥೆಯು ತನ್ನ ಬ್ರ್ಯಾಂಡ್ ಮನ್ನಣೆಯನ್ನು ತ್ವರಿತವಾಗಿ ಹೆಚ್ಚಿಸುವ ಕಾರ್ಯದಲ್ಲಿ ಮುಂದಿದೆ. ವಿನ್‌ಫಾಸ್ಟ್ ಸ್ಥಳೀಯವಾಗಿ ಇವಿಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಕಾರುಗಳನ್ನು ಮಾರಾಟ ಮಾಡಲು ಯೋಜಿಸಿದೆ.
ಆದಾಗ್ಯೂ, ಟೆಸ್ಲಾ ಸಂಪೂರ್ಣವಾಗಿ ಆಮದುಗಳ ಮೇಲೆ ಅವಲಂಬಿತವಾಗಿದೆ. ಈ ವರ್ಷದ ಮಧ್ಯದಲ್ಲಿ ಮಾಡೆಲ್ ವೈ ಮೂಲಕ ಭಾರತವನ್ನು ಪ್ರವೇಶಿಸಿದ ಕಂಪನಿಯು ಅಕ್ಟೋಬರ್‌ನಲ್ಲಿ ಕೇವಲ 40 ಕಾರುಗಳನ್ನು ಮಾತ್ರ ಸೇಲ್ ಮಾಡಿದೆ. ಪ್ರಸ್ತುತ, ಟೆಸ್ಲಾ ಕೇವಲ ಮಾಡೆಲ್ ವೈ ಕಾರನ್ನು ಮಾತ್ರ ಮಾರಾಟ ಮಾಡುತ್ತಿದೆ. ಇದರ ಬೆಲೆ 59.89ರಿಂದ 67.89 ಲಕ್ಷ ರೂ.ವರೆಗಿದೆ. ಟೆಸ್ಲಾ ಇನ್ನೂ ಸ್ಥಳೀಯವಾಗಿ ಜೋಡಣೆ ಮಾಡಲು ಪ್ರಾರಂಭಿಸಿಲ್ಲ ಮತ್ತು ಕಂಪನಿಯ ಮಳಿಗೆಗಳು ಮುಂಬೈ ಮತ್ತು ದೆಹಲಿಗೆ ಮಾತ್ರ ಸೀಮಿತವಾಗಿದೆ.
ವಿನ್‌ಫಾಸ್ಟ್‌ನಷ್ಟು ವೇಗವಾಗಿ ವಿಸ್ತರಿಸಲು ಟೆಸ್ಲಾಗೆ ಸಾಧ್ಯವಾಗಿಲ್ಲ ಎಂಬುದು ಇಲ್ಲಿ ಗಮನಾರ್ಹ. ಆಮದು ಮೂಲಕ ಮಾತ್ರ ಟೆಸ್ಲಾ ಕಾರುಗಳ ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು. ಜಿಎಸ್‌ಟಿ ಬದಲಾವಣೆಗಳೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಾಗಿದ್ದರೂ, ಇವಿ ಕಾರುಗಳ ಮೇಲಿನ ಶೇ.5ರಷ್ಟು ಸುಂಕ ಮುಂದುವರೆದಿದೆ. ಇದರ ಪರಿಣಾಮವಾಗಿ, ಜಿಎಸ್‌ಟಿ 2.0ರ ಪರಿಣಾಮವು ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿನ ಕಡಿತದ ಮೇಲೆ ತೋರಿಸಲಾಗಿಲ್ಲ. ಮತ್ತೊಂದೆಡೆ, ಭಾರತೀಯ ಕಂಪನಿಗಳು ಸ್ಥಳೀಯವಾಗಿ ಇವಿ ಮಾರಾಟವನ್ನು ಹೆಚ್ಚಿಸಲು ಹೊಸ ತಂತ್ರಗಳ ಮೊರೆ ಹೋಗಿವೆ.
ವರದಿಗಳ ಪ್ರಕಾರ, ಈ ವರ್ಷದ ಅಕ್ಟೋಬರ್‌ನಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟವು 18,055 ಯೂನಿಟ್‌ಗಳಿಗೆ ಏರಿದೆ. 2023ರ ಅಕ್ಟೋಬರ್ಗೆ ಹೋಲಿಸಿದರೆ ಮಾರಾಟವು ಶೇ.57.5ರಷ್ಟು ಹೆಚ್ಚಾಗಿದೆ (11,464 ಎಲೆಕ್ಟ್ರಿಕ್ ಕಾರುಗಳು). ಆದಾಗ್ಯೂ, ಕಳೆದ ತಿಂಗಳು, ಟಾಟಾ ಮೋಟಾರ್ಸ್ 7,239, ಜೆಎಸ್‌ಡಬ್ಲ್ಯೂ ಎಂಜಿ 4,549 ಮತ್ತು ಮಹೀಂದ್ರಾ 3,911 ಎಲೆಕ್ಟ್ರಿಕ್ ಕಾರುಗಳನ್ನು ಸೇಲ್ ಮಾಡಿವೆ. ಅಕ್ಟೋಬರ್‌ನಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಮಾರಾಟವೂ ಶೇ.105.9ರಷ್ಟು ಹೆಚ್ಚಾಗಿದೆ,(ಏಜೆನ್ಸೀಸ್).