ಗಾಂಧಿ-ತಿಲಕರ ವಿರುದ್ಧ ಬಳಕೆಯಾದ ಕಾನೂನು ಈಗೇಕೆ?: ದೇಶದ್ರೋಹ ಕಾಯ್ದೆ ದುರ್ಬಳಕೆ ವಿರುದ್ಧ ಸುಪ್ರೀಂಕೋರ್ಟ್ ಗರಂ

CJ
Published on

ನವದೆಹಲಿ: ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ, ಬಾಲಗಂಗಾಧರ ತಿಲಕರಂಥ ಮಹಾನ್ ವ್ಯಕ್ತಿಗಳ ಚಳವಳಿಗಳನ್ನು ಹತ್ತಿಕ್ಕಲು ಬಳಸಲಾಗುತ್ತಿದ್ದ ವಸಾಹತು ಕಾಲದ ಕಾನೂನನ್ನು ಈಗಲೂ ಈ ದೇಶದಲ್ಲಿ ಏಕೆ ಬಳಸಲಾಗುತ್ತಿದೆ? ಸ್ವಾತಂತ್ರ್ಯ ಬಂದು 75 ವರ್ಷ ಪೂರ್ಣಗೊಂಡರೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 124 (ಎ) ಅಡಿಯ ದೇಶದ್ರೋಹ ನಿಬಂಧನೆ ಈಗ ಅಗತ್ಯವಿದೆಯೇ?

ದೇಶದ್ರೋಹ ಕಾನೂನಿನ ದುರ್ಬಳಕೆ ಹಾಗೂ ಅದರ ಹೆಸರಲ್ಲಿ ಹಲವರನ್ನು ಬಂಧಿಸಿ ಶೋಷಿಸುತ್ತಿರುವುದನ್ನು ಪ್ರಶ್ನಿಸಿ ನಿವೃತ್ತ ಮೇಜರ್ ಜನರಲ್ ಎಸ್.ಜಿ. ವೆಂಬಟ್ಕೆರೆ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾ.ಎಸ್.ಬೋಪಣ್ಣ ಮತ್ತು ನ್ಯಾ. ಹೃಷಿಕೇಶ್ ರಾಯ್ ತ್ರಿಸದಸ್ಯ ಪೀಠವು ಈ ಪ್ರಶ್ನೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದೆ.

ಐಪಿಸಿಯ 124 (ಎ) ದೇಶದ್ರೋಹವನ್ನುಅಪರಾಧೀಕರಿಸುತ್ತದೆ. ಭಾರತದಲ್ಲಿ ಸರ್ಕಾರದ ವಿರುದ್ಧ ಭಾಷಣ ಅಥವಾ ಅಭಿವ್ಯಕ್ತಿಯ ಮೂಲಕ ದ್ವೇಷ ಅಥವಾ ತಿರಸ್ಕಾರದ ಮನೋಭಾವ ಪ್ರದರ್ಶಿಸುವುದು ಮತ್ತು ಇತರರನ್ನು ಪ್ರಚೋದಿಸುವುದು ಸೆಕ್ಷನ್ ಪ್ರಕಾರ ಅಪರಾಧಿಕ ಕೃತ್ಯವಾಗಿದ್ದು, ಅಪರಾಧಿಗೆ ಗರಿಷ್ಠ ಎಂದರೆ ಜೀವಾವಧಿ ಶಿಕ್ಷೆ ಕೂಡ ನೀಡಬಹುದಾಗಿದೆ. ಇಂಥದ್ದೊಂದು ಕಾನೂನು ಈಗಲೂ ಚಾಲ್ತಿಯಲ್ಲಿರುವುದು ಅಸಾಂವಿಧಾನಿಕವಾಗಿದ್ದು, ನಿರ್ದಾಕ್ಷಿಣ್ಯವಾಗಿ ವಜಾಗೊಳ್ಳಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.

ಪೊಲೀಸರು ಯಾರನ್ನಾದರೂ ಸಿಲುಕಿಸಲು ಬಯಸಿದರೆ, ಅವರು ಐಪಿಸಿ ಸೆಕ್ಷನ್ 124 ಎ ಬಳಸಿಕೊಳ್ಳಬಹುದು ಮತ್ತು ಇದನ್ನು ಪ್ರಯೋಗಿಸಿದಾಗ ಆತಂಕಕ್ಕೊಳಗಾಗುವುದು ಸಹಜವೇ. ಈ ಸೆಕ್ಷನ್ ಅಡಿಯಲ್ಲಿ ದಾಖಲಾಗಿರುವ ದೂರುಗಳನ್ನು ಗಮನಿಸಿದಾಗ, ಆರೋಪಿಗಳನ್ನು ತಪ್ಪಿತಸ್ಥರು ಎಂದು ಗುರುತಿಸಿರುವ ಪ್ರಮಾಣ ತೀರಾ ಕಡಿಮೆಯಿದೆ. ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಅಸಮಾಧಾನ ಹೊರಹಾಕಿದ ಸಿಜೆಐ ರಮಣ್, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66 ಎ ಅನ್ನು 2015ರಲ್ಲಿ ರದ್ದು ಮಾಡಿದರೂ, ದೇಶದೆಲ್ಲೆಡೆ ಸಾವಿರಾರು ಪ್ರಕರಣಗಳನ್ನು ದಾಖಲಿಸುತ್ತಿರುವ ಬಗ್ಗೆಯೂ ಸಿಜೆಐ ಕೇಂದ್ರ ಸರ್ಕಾರದ ಗಮನಸೆಳೆದರು.

ಸಿಜೆಐ ಹೇಳಿದ್ದೇನು?

  • ಮರವೊಂದನ್ನು ಕಡಿ ಎಂದು ಬಡಗಿಗೆ ಗರಗಸ ಕೊಟ್ಟರೆ ಆತ ಅದೇ ಗರಗಸ ಬಳಸಿ ಇಡೀ ಅರಣ್ಯ ನಾಶ ಮಾಡುತ್ತಾನೆ. ನಮ್ಮ ದೇಶದಲ್ಲಿ ದೇಶದ್ರೋಹ ಕಾನೂನಿನ ಬಳಕೆಯೂ ಹೀಗೆಯೇ ಆಗುತ್ತಿದೆ.
  • ಹಳೆಯ ಕಾನೂನುಗಳನ್ನು ಸರ್ಕಾರ ರದ್ದುಗೊಳಿಸುತ್ತಿದೆ. ಹೀಗಿರುವಾಗ, ದೇಶದ್ರೋಹ ಕಾನೂನನ್ನು ರದ್ದುಗೊಳಿಸಿಲ್ಲ ಏಕೆ?
  • ನಾವು ಖಂಡಿತವಾಗಿಯೂ ಅಪರಾಧ ದಂಡ ಸಂಹಿತೆಯ (ಐಪಿಸಿ) 124 (ಎ)ನ್ನು ಪುನರ್ ಪರಿಶೀಲಿಸುತ್ತೇವೆ. ಇದರಿಂದ ಸೃಷ್ಟಿಯಾಗಿರುವ ಪರಿಸ್ಥಿತಿ ಗಂಭೀರವಾಗಿದೆ. ಒಂದು ಪಕ್ಷಕ್ಕೆ ಮತ್ತೊಂದು ಪಕ್ಷದ ಮಾತುಗಳು ಹಿಡಿಸದಿದ್ದರೆ, ಸೆಕ್ಷನ್ 124 (ಎ) ಬಳಸಿ ಶಿಕ್ಷಿಸಲಾಗುತ್ತಿದೆ. ಇದು ವ್ಯಕ್ತಿಗಳ ಹಾಗೂ ಪಕ್ಷಗಳ ಕಾರ್ಯಚಟುವಟಿಕೆಗೆ ಗಂಭೀರ ಹಾನಿ ಮಾಡಿದೆ.
  • ಕಾನೂನಿನ ದುರುಪಯೋಗ ಮತ್ತು ಹೊಣೆಗಾರಿಕೆಯ ಕೊರತೆ ಬಗ್ಗೆ ನಮಗೆ ಕಳವಳವಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದ ಮೇಲೂ ಇಂಥದ್ದೊಂದು ಸೆಕ್ಷನ್ ಕಾನೂನು ಪುಸ್ತಕದಲ್ಲಿ ಏಕೆ ಮುಂದುವರಿಯುತ್ತಿದೆ?

1870ರಲ್ಲಿ ಐಪಿಸಿಗೆ ಸೇರ್ಪಡೆ: ದೇಶದ್ರೋಹದ ಬಗ್ಗೆ ಪ್ರಸ್ತಾಪಿಸುವ ಐಪಿಸಿಯ ಸೆಕ್ಷನ್ 124 (2)ನ ಕರಡನ್ನು ಮೊದಲು ಸಿದ್ಧಪಡಿಸಿದ್ದು ಭಾರತದಲ್ಲಿ ಪಾಶ್ಚಿಮಾತ್ಯ ಮಾದರಿ ಶಿಕ್ಷಣ ಪರಿಚಯಿಸಿದ ಥಾಮಸ್ ಬಾಬಿಂಗ್ಟನ್ ಮೆಕಾಲೆ. 1870ರಲ್ಲಿ ಈ ಸೆಕ್ಷನ್​ನ್ನು ಐಪಿಸಿಯಲ್ಲಿ ಸೇರಿಸಲಾಯಿತು.

124 (ಎ) ಸೆಕ್ಷನ್ ರದ್ದಾಗುವುದೇ?: ಗಾಂಧಿಯವರು ಹಿಂದೆ ಸೆಕ್ಷನ್ 124 (ಎ) ನಾಗರಿಕರ ಸ್ವಾತಂತ್ರ್ಯ ನಿಗ್ರಹಿಸಲು ವಿನ್ಯಾಸಗೊಳಿಸಲಾದ ಕಾನೂನು ಎಂದು ಟೀಕಿಸಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಈ ಸೆಕ್ಷನ್ ಅಸಹ್ಯಕರ ಮತ್ತು ಆಕ್ಷೇಪಾರ್ಹ ಎಂದಿದ್ದರು. ಶೀಘ್ರದಲ್ಲಿ ಇದನ್ನು ತೊಡೆದುಹಾಕುತ್ತೇವೆ ಎಂದು ಹೇಳಿದ್ದರು. 2019ರ ಜುಲೈ ತಿಂಗಳಲ್ಲಿ ಗೃಹ ಇಲಾಖೆಯ ಅಂದಿನ ರಾಜ್ಯ ಸಚಿವರಾಗಿದ್ದ ನಿತ್ಯಾನಂದ್ ರಾಯ್, ಈ ಸೆಕ್ಷನ್ ರದ್ದುಗೊಳಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ. ರಾಷ್ಟ್ರ ವಿರೋಧಿ, ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಶಕ್ತಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಈ ನಿಬಂಧನೆ ಉಳಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ರಾಜ್ಯಸಭೆಗೆ ತಿಳಿಸಿದ್ದರು. ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಕೇಂದ್ರದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಸೆಕ್ಷನ್​ನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಕಾನೂನಿನ ಪುಸ್ತಕದಲ್ಲೂ ಉಳಿದುಕೊಳ್ಳಲಿದೆ ಎಂದಿದ್ದಾರೆ. ಆದರೆ ದುರ್ಬಳಕೆ ತಡೆಗೆ ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ತಿಳಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net