

ನವದೆಹಲಿ: ಕಾಲಕಾಲಕ್ಕೆ ಹೊಸ ಹೊಸ ಅಪ್ಡೇಟ್ ಬಿಡುತ್ತಿರುವ ವಾಟ್ಸ್ಆ್ಯಪ್ ಮತ್ತೊಂದು ಅಪ್ಡೇಟ್ ಬಿಟ್ಟಿದ್ದು, ಅದರ ಬೀಟಾ ಯೂಸರ್ಸ್ ಇನ್ನುಮುಂದೆ ಸ್ಮಾರ್ಟ್ಫೋನ್ ಇರದಿದ್ದರೂ ವಾಟ್ಸ್ಆ್ಯಪ್ ಬಳಸಬಹುದಾಗಿದೆ. ಟೆಲಿಗ್ರಾಮ್ನಂತೆ ಒಂದಕ್ಕಿಂತ ಹೆಚ್ಚು ಉಪಕರಣದಲ್ಲಿ ವಾಟ್ಸ್ಆ್ಯಪ್ ಬಳಸುವಂತೆ ಅಪ್ಡೇಟ್ ಮಾಡಿರುವ ಸಂಸ್ಥೆ ಅದರ ಜತೆಗೆ ಮತ್ತೊಂದು ವಿಶೇಷ ಸೌಲಭ್ಯವನ್ನೂ ಕಲ್ಪಿಸಿದೆ.
ಸದ್ಯ ಸ್ಮಾರ್ಟ್ಫೋನ್ ಹೊರತಾಗಿ ಡೆಸ್ಕ್ಟಾಪ್ ಇತ್ಯಾದಿಯಲ್ಲಿ ವಾಟ್ಸ್ಆ್ಯಪ್ ಬಳಸುವಾಗ ಏಕಕಾಲಕ್ಕೆ ಒಂದು ಸಿಸ್ಟಮ್ನಲ್ಲಿ ಮಾತ್ರ ಬಳಸಲು ಅವಕಾಶವಿದೆ. ಆದರೆ ಈ ವಿಷಯದಲ್ಲಿ ಹೊಸತನ ತಂದಿರುವ ಸಂಸ್ಥೆ ಮಲ್ಟಿಡಿವೈಸ್ ಆಪ್ಷನ್ ಕೊಟ್ಟಿದೆ. ಅಂದರೆ ಸ್ಮಾರ್ಟ್ಫೋನ್ ಹೊರತಾಗಿಯೂ ಇನ್ನೂ 3 ಡೆಸ್ಕ್ಟಾಪ್ನಲ್ಲಿ ವಾಟ್ಸ್ಆ್ಯಪ್ ಬಳಸಬಹುದು ಎಂದು ವಾಟ್ಸ್ಆ್ಯಪ್ ಮುಖ್ಯಸ್ಥ ವಿಲ್ ಕ್ಯಾಚ್ಕಾರ್ಟ್ ತಿಳಿಸಿದ್ದಾರೆ.
ಮತ್ತೊಂದೆಡೆ ಡೆಸ್ಕ್ಟಾಪ್ನಲ್ಲಿ ವಾಟ್ಸ್ಆ್ಯಪ್ ಬಳಕೆಗೆ ಸ್ಮಾರ್ಟ್ಫೋನ್ ಸಕ್ರಿಯವಾಗಿರಬೇಕಾದ್ದು ಅಗತ್ಯ. ಆದರೆ ಹೊಸ ಅಪ್ಡೇಟ್ ಪ್ರಕಾರ ಮೂಲ ಸ್ಮಾರ್ಟ್ಫೋನ್ ಆಫ್ ಆಗಿದ್ದರೂ ಡೆಸ್ಕ್ಟಾಪ್ ಸೇರಿ ಇತರ ಉಪಕರಣಗಳಲ್ಲಿ ವಾಟ್ಸ್ಆ್ಯಪ್ ಚಾಲನೆಯಲ್ಲೇ ಇರಲಿದೆ. ಮಾತ್ರವಲ್ಲ, ಈ ಹಂತದಲ್ಲೂ ಎಂಡ್ ಟು ಎಂಡ್ ಎನ್ಕ್ರಿಪ್ಟ್ ಸಕ್ರಿಯವಾಗಿರಲಿದ್ದು, ಖಾಸಗಿತನಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ಸದ್ಯ ಇದು ಕೆಲವರಿಗಷ್ಟೇ ಲಭ್ಯವಿದ್ದು, ಶೀಘ್ರದಲ್ಲೇ ಎಲ್ಲರಿಗೂ ಈ ಅಪ್ಡೇಟ್ ಸಿಗಲಿದೆ. ವಾಟ್ಸ್ಆ್ಯಪ್ನ ಲಿಂಕ್ಡ್ ಡಿವೈಸಸ್ನಲ್ಲಿ ಈ ಆಪ್ಷನ್ ಕಾಣಿಸಿಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.