

ನವದೆಹಲಿ: ಜೂನ್ 19ರಂದು 54ನೇ ವಸಂತಕ್ಕೆ ಕಾಲಿಟ್ಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರಳವಾಗಿ ತಮ್ಮ ಜನುಮದಿನವನ್ನು ಆಚರಿಸಿಕೊಂಡಿದ್ದಾರೆ. ಎಐಸಿಸಿ ಕಚೇರಿಯಲ್ಲಿ ತಮ್ಮ ಜನುಮದಿನವನ್ನು ಆಚರಿಸಿಕೊಂಡ ಬಳಿಕ #WhiteTshirtArmy ಎಂಬ ಅಭಿಯಾನವನ್ನು ಶುರು ಮಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಚ್ಚಾಗಿ ಬಿಳಿ ಬಣ್ಣದ ಟೀ-ಶರ್ಟ್ಅನ್ನು ಧರಿಸುವುದನ್ನು ನೋಡಬಹುದಾಗಿದೆ. ಈ ಬಗ್ಗೆ ಅನೇಕರು ಪ್ರಶ್ನಿಸಿದ್ದು, ರಾಹುಲ್ ಗಾಂಧಿ ಈವರೆಗೆ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ಇದೀಗ ಈ ಬಗ್ಗೆ ಮಾತನಾಡಿರುವ ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಉತ್ತರಿಸಿದ್ದಾರೆ.
ಮೊದಲಿಗೆ ನನ್ನ ಜನುಮದಿನದ ಪ್ರಯುಕ್ತ ಶುಭಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾನು ಯಾವಾಗಲೂ 'ಬಿಳಿ ಟೀ-ಶರ್ಟ್' ಅನ್ನು ಏಕೆ ಧರಿಸುತ್ತೇನೆ ಎಂದು ಜನರು ನನ್ನನ್ನು ಆಗಾಗ್ಗೆ ಕೇಳುತ್ತಿರುತ್ತಾರೆ. ಬಿಳಿ ಬಣ್ಣದ ಟೀ-ಶರ್ಟ್ ನನಗೆ ಪಾರದರ್ಶಕತೆ, ಘನತೆ ಮತ್ತು ಸರಳತೆಯನ್ನು ಸಂಕೇತಿಸುತ್ತದೆ. ಹೀಗಾಗಿ ನಾನು ಹೆಚ್ಚು ಬಿಳಿ ಬಣ್ಣದ ಟಿ-ಶರ್ಟ್ಗಳನ್ನು ಧರಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ #WhiteTshirtArmy ಬಳಸಿ ಮತ್ತು ವೀಡಿಯೋ ಮಾಡುವ ಮೂಲಕ ನನಗೆ ತಿಳಿಸಿ. ನಾನು ನಿಮಗೆ ಬಿಳಿ ಟೀ-ಶರ್ಟ್ ಅನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
1970 ರ ಜೂನ್ 19 ರಂದು ಜನಿಸಿದ ರಾಹುಲ್ ಗಾಂಧಿ ಅವರು 5 ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ. 2004ರಲ್ಲಿ ಚುನಾವಣಾ ರಾಜಕೀಯ ಪ್ರವೇಶಿಸಿದ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಥಿಯಿಂದ ಮೊದಲ ಬಾರಿಗೆ ಸ್ಪರ್ಧಿಸಿ ಚುನಾವಣೆಯಲ್ಲಿ ಗೆದ್ದರು. 2022 ರ ಸೆಪ್ಟೆಂಬರ್ ನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಯನ್ನು ನಡೆಸಿದ್ದರು. ಲೋಕಸಭೆ ಚುನಾವಣೆಗೂ ಮುನ್ನ ಭಾರತ್ ಜೋಡೋ ನ್ಯಾಯ್ ಯಾತ್ರಾ ನಡೆಸಿದ್ದರು.