

ನವದೆಹಲಿ: ಬೆಳೆದು ನಿಂತಿರುವ ಮಕ್ಕಳು ತಪ್ಪು ಮಾಡಿದಾಗ ಪೋಷಕರು ಅವರಿಗೆ ಬುದ್ದಿವಾದ ಹೇಳುವುದು ಸಹಜ. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋದಾಗ ಪೋಷಕರು ತಮ್ಮ ಮಕ್ಕಳಿಗೆ ಒಂದೆರಡು ಏಟು ಹೊಡೆದು ಬೈದು ಬುದ್ದಿವಾದ ಹೇಳುವ ಮೂಲಕ ತಮ್ಮ ಮಕ್ಕಳನ್ನು ಸರಿ ದಾರಿಗೆ ತರುವ ಕೆಲಸ ಮಾಡುತ್ತಾರೆ. ಆದರೆ, ಇಲ್ಲೊಬ್ಬ ತಂದೆ ತನ್ನ ಮಗ ಕ್ಲೀನ್ ಶೇವ್ ಮಾಡಿಸಿಕೊಂಡು ಬಂದ ಎಂಬ ಕಾರಣಕ್ಕೆ ಮಗನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಲ್ಲಿಯರೆವಗೂ 12.6 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಇದಲ್ಲದೆ ಆ ಯುವಕನ ತಂದೆಯ ಅತಿರೇಕದ ವರ್ತನೆಗೆ ನೆಟ್ಟಿಗರು ಕಿಡಿಕಾರಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ, ಈ ಘಟನೆ ಯಾವ ರಾಜ್ಯದಲ್ಲಿ ನಡೆದಿದೆ ಎಂಬುದು ಈವರೆಗೆ ತಿಳಿದು ಬಂದಿಲ್ಲ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಕ್ಲೀನ್ ಶೇವ್ ಮಾಡಿಸಿಕೊಂಡು ಬರುವ ಯುವಕನೋರ್ವ ತನ್ನ ತಂದೆಗೆ ಸರ್ಪ್ರೈಸ್ ನೀಡಲು ಬಾಗಿಲಿಗೆ ಹಿಮ್ಮುಖವಾಗಿ ನಿಂತಿರುವುದನ್ನು ನೋಡಬಹುದಾಗಿದೆ. ಮಗನ ಕೂಗನ್ನು ಕೇಳಿ ಬರುವ ತಂದೆ ಆತನ ಹೊಸ ಲುಕ್ ನೋಡಿ ಗಡ್ಡ ಮೀಸೆ ಯಾಕೆ ಬೋಳಿಸಿದ್ದೀಯಾ ಎಂದು ಹೇಳುತ್ತಾ ಏಕಾಏಕಿ ಅವನ ಕಪಾಳಕ್ಕೆ ಬಾರಿಸುತ್ತಾನೆ. ಬಳಿಕ ಆತನ ಕುತ್ತಿಗೆ ಹಿಡಿದು ಹಲ್ಲೆ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಯುವಕನ ತಂದೆಯ ನಡೆಗೆ ಕಿಡಿಕಾರಿದ್ದು, ಮಕ್ಕಳಿಗೆ ತಮ್ಮಿಷ್ಟದಂತೆ ಕ್ಲೀನ್ ಶೇವ್ ಮಾಡಿಸಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲವೇ. ಈ ರೀತಿಯ ತಂದೆಯನ್ನು ನಾವು ಎಲ್ಲಿಯೂ ನೋಡಿಲ್ಲ. ಕೂಡಲೇ ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸುವುದು ವಾಸಿ ಎಂದು ಕಮೆಂಟ್ ಹಾಕಿ ಕಿಡಿಕಾರಿದ್ದಾರೆ.