ಅರಸೀಕೆರೆ ಎಕ್ಸ್​ಪ್ರೆಸ್​ ಎಂದು ಕರೆಯಲ್ಪಡುತ್ತಿದ್ದ ಡೇವಿಡ್​ ಜಾನ್ಸನ್​ಗೆ ಈ ಹೆಸರು ಬಂದಿದ್ದು ಹೇಗೆ ಗೊತ್ತಾ?

David Johnson
Published on

ಬೆಂಗಳೂರು: ಕರ್ನಾಟಕ ಮೂಲದ ಟೀಮ್​ ಇಂಡಿಯಾ ಮಾಜಿ ಆಟಗಾರ, ಅರಸೀಕೆರೆ ಎಕ್ಸ್​ಪ್ರೆಸ್​ ಎಂದೇ ಖ್ಯಾತಿ ಪಡೆದಿದ್ದ ಡೇವಿಡ್​ ಜಾನ್ಸನ್ (52)​ ತಾವು ವಾಸಿಸುತ್ತಿದ್ದ ಅಪಾರ್ಟ್​ಮೆಂಟ್​ನಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಕೊತ್ತನೂರು ಪೊಲೀಸ್​ ಠಾಣಾ ವ್ಯಾಪ್ತಿಯ ಕನಕಶ್ರೀ ಲೇಔಟ್‌ನ SLV ಪ್ಯಾರಡೈಸ್​ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತ ಡೇವಿಡ್​ ಜಾನ್ಸನ್​ ಅವರ ನಿಧನಕ್ಕೆ ಮಾಜಿ ಕ್ರಿಕೆಟಿಗರಾದ ಅನಿಲ್​ ಕುಂಬ್ಳೆ, ಗೌತಮ್​ ಗಂಭೀರ್​, ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಅವರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

1971ರ ಅಕ್ಟೋಬರ್ 16ರಂದು ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಜನಿಸಿದ ಡೇವಿಡ್ ಜಾನ್ಸನ್, ಟೀಂ ಇಂಡಿಯಾ ಪರ ಎರಡು ಟೆಸ್ಟ್ ಪಂದ್ಯಗಳನ್ನಾಡಿ ಮೂರು ವಿಕೆಟ್ ಪಡೆದಿದ್ದಾರೆ. ಆ ಕಾಲಘಟ್ಟದಲ್ಲಿ ಟೀಂ ಇಂಡಿಯಾ ಪರ ಅತಿವೇಗದ ಬೌಲಿಂಗ್ ಮಾಡಿದ ದಾಖಲೆ ಡೇವಿಡ್ ಜಾನ್ಸನ್ ಅವರ ಹೆಸರಿನಲ್ಲಿತ್ತು. 1996ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಡೇವಿಡ್ ಜಾನ್ಸನ್, ಆಸ್ಟ್ರೇಲಿಯಾ ತಂಡವು ಭಾರತ ಪ್ರವಾಸ ಮಾಡಿದ್ದಾಗ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಆ ಸರಣಿಯಲ್ಲಿ ಡೇವಿಡ್ ಜಾನ್ಸನ್ ಗಂಟೆಗೆ 157.8 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಆಸ್ಟ್ರೇಲಿಯಾದ ಮೈಕಲ್ ಸ್ಲೇಟರ್ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಆ ಬಳಿಕ ಅವರನ್ನು ಸಹ ಆಟಗಾರರು ಅರಸೀಕೆರೆ ಎಕ್ಸ್​ಪ್ರೆಸ್​ ಎಂದು ಕರೆಯುತ್ತಿದ್ದರು. ಈ ವಿಚಾರ ಕ್ರಿಕೆಟ್​ ವಲಯದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಇನ್ನು ಡೇವಿಡ್ ಜಾನ್ಸನ್‌ ಒಟ್ಟು 39 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿ 125 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಕೆಳಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಜಾನ್ಸನ್ 437 ರನ್ ಬಾರಿಸಿದ್ದಾರೆ.

ದೇಶೀಯ ಕ್ರಿಕೆಟ್​ನ ಯಶಸ್ಸಿನ ಹೊರತಾಗಿಯೂ, ಸ್ಥಿರತೆ ಮತ್ತು ನಿಖರತೆಯ ಸಮಸ್ಯೆಗಳಿಂದಾಗಿ ಜಾನ್ಸನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮವನ್ನು ಬೀರುವಲ್ಲಿ ವಿಫಲರಾದರು. ಅವರ ಅನಿಯಮಿತ ಪ್ರದರ್ಶನಗಳು ಅವರ ಅವಕಾಶಗಳನ್ನು ತಪ್ಪಿಸಿದವು. ಇದರ ಹೊರತಾಗಿಯೂ ಜಾನ್ಸನ್ ಅವರ ಕೊಡುಗೆಗಳು ಮತ್ತು ಸ್ಮರಣೀಯ ದೇಶೀಯ ಪ್ರದರ್ಶನಗಳಿಗಾಗಿ ಕರ್ನಾಟಕ ಕ್ರಿಕೆಟ್‌ನಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net