ಕಚೇರಿಗೆ ಕುದುರೆ ಏರಿ ಬರಲು ಅನುಮತಿ ಕೋರಿದ ಸರ್ಕಾರಿ ಉದ್ಯೋಗಿ: ಇಂಧನ ದರ ಏರಿಕೆ ಕಾರಣವಲ್ಲ!

Horse 1
Published on

ಮುಂಬೈ: ಮಹಾರಾಷ್ಟ್ರದ ನಾಂದೇಡ್​ ಮೂಲದ ಸರ್ಕಾರಿ ಉದ್ಯೋಗಿಯೊಬ್ಬರು ಕಚೇರಿಗೆ ಕುದುರೆ ಏರಿ ಬರಲು ಅನುಮತಿ ಕೋರಿದ್ದಾರೆ. ಅಂದಹಾಗೆ ಇದಕ್ಕೆ ಕಾರಣ ಪೆಟ್ರೋಲ್​ ದರ ಜಾಸ್ತಿ ಆಗಿರುವುದಲ್ಲ. ಉದ್ಯೋಗಿಯ ನೋವು ಬೇರೇನೆ ಇದೆ. ಅದು ಏನೆಂದು ತಿಳಿಯಲು ಮುಂದೆ ಓದಿ.

ಸತೀಶ್​ ದೇಶ್​ಮುಖ್​​ ಎಂಬುವರು ತಮ್ಮ ಬಾಸ್​ ಅನುಮತಿಯನ್ನು ಕೋರಿದ್ದಾರೆ. ದೇಶ್​ಮುಖ್​ ಅವರು ನಾಂದೇಡ್ ಜಿಲ್ಲಾಧಿಕಾರಿ ಕಚೇರಿಯ ಉದ್ಯೋಗ ಖಾತರಿ ಯೋಜನಾ ವಿಭಾಗದಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಕಚೇರಿಗೆ ಕುದುರೆ ಏರಿ ಬರಲು ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರಬರೆದಿದ್ದಾರೆ.

ದೇಶ್​ಮುಖ್​ ಕೊಟ್ಟಿರುವ ಕಾರಣ ಹೀಗಿದೆ... ನಾನು ಬೆನ್ನು ನೋವಿನಿಂದ ಬಳಲುತ್ತಿದ್ದೇನೆ. ಪ್ರತಿದಿನ ಕೆಲಸಕ್ಕೆ ತೆರಳಲು ಅನುಕೂಲಕರ ಮಾರ್ಗವನ್ನು ನೋಡುತ್ತಿದ್ದೇನೆ. ಸದ್ಯ ನನ್ನ ವೈದ್ಯಕೀಯ ಸ್ಥಿತಿಯಿಂದಾಗಿ ಬೈಕ್​ ಚಲಾಯಿಸಲು ತುಂಬಾ ಕಷ್ಟವಾಗುತ್ತಿದೆ. ಕಾರು ತೆಗೆದುಕೊಂಡು ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಾನೊಂದು ಕುದುರೆಯನ್ನು ಖರೀದಿಸಲು ನಿರ್ಧರಿಸಿದ್ದೇನೆ. ಹೀಗಾಗಿ ನನಗೆ ಅನುಮತಿ ನೀಡಿ ಎಂದು ದೇಶ್​ಮುಖ್​ ಮನವಿ ಮಾಡಿಕೊಂಡಿದ್ದಾರೆ.

ಸದ್ಯ ದೇಶ್​ಮುಖ್​ ಅವರ ಪತ್ರ ಜಿಲ್ಲಾಧಿಕಾರಿ ಅಂಗಳದಲ್ಲಿದ್ದು, ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆಂಬ ಕುತೂಹಲವಿದೆ. ಆದರೆ, ಅವರ ಪತ್ರ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ದೇಶ್​ಮುಖ್​ ಬೆಂಬಲಕ್ಕೆ ನಿಂತಿರುವ ಅನೇಕರು ಅನುಮತಿ ಕೊಟ್ಟುಬಿಡಿ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net