More

    ಪತಿ, ಪ್ರೇಮಿ ಹಾಗೂ ಪಾಲಕರ ಚಾಯ್ಸ್​… ಆಯ್ಕೆ ಮಾಡಲಾಗದೇ ಕುಗ್ಗಿಹೋಗಿದ್ದೇನೆ… ಏನು ಮಾಡಲಿ?

    ಪತಿ, ಪ್ರೇಮಿ ಹಾಗೂ ಪಾಲಕರ ಚಾಯ್ಸ್​... ಆಯ್ಕೆ ಮಾಡಲಾಗದೇ ಕುಗ್ಗಿಹೋಗಿದ್ದೇನೆ... ಏನು ಮಾಡಲಿ?ನನಗೆ 21 ವರ್ಷ. ನಾಲ್ಕು ವರ್ಷಗಳ ಹಿಂದೆ, ಪಿಯುಸಿ ಓದುತ್ತಿದ್ದಾಗ ನನಗಿಂತ 11 ವರ್ಷ ದೊಡ್ಡವನಾದ ಸೋದರಮಾವನ ಜತೆ ಮದುವೆಯಾಯಿತು. ಆತ ದಿನವೂ ಕುಡಿದು ಬಂದು ನನ್ನನ್ನು ಹೊಡೆಯುವುದು, ಬಯ್ಯುವುದು ನಡೆದೇ ಇತ್ತು. ಅವನಿಗೆ ಉದ್ಯೋಗವೂ ಇರಲಿಲ್ಲ. ನನ್ನ ತವರಿನಲ್ಲಿ ಕೊಟ್ಟ ಹಣವನ್ನು ಕುಡಿತಕ್ಕೆ ಬಳಸುತ್ತಿದ್ದ. ಒಂದು ವರ್ಷ ಸಹಿಸಿ ಕಡೆಗೆ ತವರಿಗೆ ಬಂದುಬಿಟ್ಟೆ. ಹಾಗೆ ಬರುವಾಗ ಯಾವುದೋ ಪತ್ರಕ್ಕೆ ಸಹಿಹಾಕು ಎಂದ. ಸದ್ಯ ನನಗೆ ಅಲ್ಲಿಂದ ಬಿಡುಗಡೆ ಸಿಕ್ಕರೆ ಸಾಕೆಂದು ಸಹಿ ಹಾಕಿದೆ.

    ಆತ ಮತ್ತೆ ಕರೆಯಲು ಬಂದಾಗ ನನ್ನ ಕಷ್ಟ ಅರಿತ ಹೆತ್ತವರು ಕಳಿಸಲಿಲ್ಲ. ಮತ್ತೆ ಕಾಲೇಜಿಗೆ ಸೇರಿ ಓದುತ್ತಿದ್ದೇನೆ. ನಾನು ಪಿಯುಸಿಯಲ್ಲಿದ್ದಾಗ ಒಬ್ಬ ಹುಡುಗ ನನ್ನನ್ನು ಪ್ರೀತಿಸುತ್ತಿದ್ದ. ಮದುವೆಯಾದ ನಂತರ ಅವನ ಜತೆ ಮಾತಾಡಿಲ್ಲ. ಆದರೆ ಅವನು ತುಂಬಾ ಒಳ್ಳೆಯ ಹುಡುಗ ಮತ್ತು ಒಳ್ಳೆಯ ಕೆಲಸದಲ್ಲಿದ್ದಾನೆ. ಈ ಮಧ್ಯೆ ನನ್ನ ಪದವಿ ಮುಗಿದ ಮೇಲೆ ನನ್ನ ತಂದೆತಾಯಿ ಮತ್ತೆ ನನಗೆ ಮದುವೆ ಮಾಡಲು ಹವಣಿಸುತ್ತಿದ್ದಾರೆ. ನನಗೀಗ ದ್ವಂದ್ವ ಕಾಡುತ್ತಿದೆ. ನಾನೂ ಕೆಲಸಕ್ಕೆ ಸೇರಿ ನನ್ನನ್ನು ಮೊದಲು ಪ್ರೀತಿಸುತ್ತಿದ್ದ ಹುಡುಗನೊಡನೆ ಮಾತಾಡಿ ಅವನು ಒಪ್ಪಿದರೆ ಅವನನ್ನೆ ಮದುವೆಯಾಗಲಾ ಅಥವಾ ನನ್ನ ತಂದೆತಾಯಿ ನೋಡಿದ ಹುಡುಗನನ್ನೇ ಮದುವೆಯಾಗಲಾ? ಒಮ್ಮೆ ಇವರು ನೋಡಿದವನನ್ನು ಮದುವೆಯಾಗಿ ಪಟ್ಟ ಕಷ್ಟ ನೆನೆಸಿಕೊಂಡರೆ, ಮತ್ತೊಮ್ಮೆ ಅದೇ ರೀತಿಯ ಗಂಡ ಸಿಕ್ಕಿಬಿಟ್ಟರೆ ಅಂತ ಹೆದರಿಕೆಯಾಗುತ್ತದೆ. ಈ ಚಿಂತೆಗಳಿಂದ ಓದುವುದೂ ಕಷ್ಟವಾಗುತ್ತಿದೆ.ಪರೀಕ್ಷೆಯಲ್ಲಿ ಫೇಲ್ ಆಗುವ ಭಯವೂ ಕಾಡುತ್ತಿದೆ. ಏನು ಮಾಡಲಿ ತಿಳಿಸಿ.

    ಉತ್ತರ: ನಿಮ್ಮ ದ್ವಂದ್ವ ಮತ್ತು ಭಯವನ್ನು ನೋಡಿದರೆ ನೀವಿನ್ನೂ ಆ ಕೆಟ್ಟ ದಿನಗಳನ್ನು ಮರೆತಿಲ್ಲವೆನಿಸುತ್ತದೆ. ಆದರೂ ಪದವಿಯಲ್ಲಿ ಓದುತ್ತಿದ್ದೀರಲ್ಲ ಅದಕ್ಕೆ ಅಭಿನಂದನೆಗಳು. ನೀವು ಸ್ವಲ್ಪ ಕಾನೂನಿನ ಅರಿವು ಬೆಳೆಸಿಕೊಂಡರೆ ಇಷ್ಟೊಂದು ಭಯ ಪಡುವ ಅಗತ್ಯ ಬರುವುದಿಲ್ಲ. ಮೊದಲನೆಯದಾಗಿ, ನಿಮ್ಮದು ಬಾಲ್ಯವಿವಾಹವಾಗಿತ್ತು. ಆಗಿನ್ನೂ ನಿಮಗೆ 18 ತುಂಬಿರಲಿಲ್ಲ. ಆದ್ದರಿಂದ ಮದುವೆ ಮಾಡಿಕೊಟ್ಟ ತಂದೆತಾಯಿ ಮತ್ತು ಮದುವೆಯಾದ ಗಂಡ ಇಬ್ಬರೂ ಅಪರಾಧಿಗಳೇ. ನಿಮ್ಮ ಗಂಡ ವರದಕ್ಷಿಣೆ ತೆಗೆದುಕೊಂಡಿರುವುದು,

    ಹೊಡೆದು ಹಿಂಸಿಸಿರುವುದು, ಅಪ್ರಾಪ್ತಳನ್ನು ಮದುವೆಯಾಗಿರುವುದು ಎಲ್ಲವೂ ಅಪರಾಧವೇ! ಅವರು ಯಾವುದಕ್ಕೇ ಸಹಿ ಮಾಡಿಸಿಕೊಂಡಿದ್ದರೂ ಅದೇನೂ ಊರ್ಜಿತವಾಗುವುದಿಲ್ಲ. ಎಷ್ಟೊಂದು ತಪ್ಪುಗಳನ್ನು ಅವರು ಮಾಡಿದ್ದಾರೆ. ನೀವೇಕೆ ಅದರ ಭಯದ ಶಿಕ್ಷೆಯನ್ನು ಅನುಭವಿಸಬೇಕು? ಇಂಥಾ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಂಡು ಧೈರ್ಯವನ್ನು ಬೆಳೆಸಿಕೊಳ್ಳಬೇಕು. ನೀವು ಗಂಡನ ವಿಚಾರದಲ್ಲಿ ಕಾನೂನಿನ ಮೊರೆ ಹೊಕ್ಕರೆ ಜಯ ನಿಮಗೇ ಸಿಗುತ್ತದೆ.

    ಈ ವಿಷಯ ಮತ್ತು ಗಟ್ಟಿತನಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮೊದಲು ಪದವಿಯ ಓದಿನ ಕಡೆ ಗಮನ ಕೊಡಿ. ಓದು ಮುಗಿಸಿ ಒಂದು ಉದ್ಯೋಗವನ್ನು ಸಂಪಾದಿಸಿಕೊಳ್ಳಿ. ಇಂದಿನ ಹೆಣ್ಣು ಮಕ್ಕಳಿಗೆ ಆರ್ಥಿಕಬಲ ಖಂಡಿತಾ ಗಟ್ಟಿತನವನ್ನು ತಂದುಕೊಡುತ್ತದೆ. ನಿಮಗಿನ್ನೂ ಕೇವಲ 21 ವರ್ಷ. ಇನ್ನೂ 2-3 ವರ್ಷ ಮದುವೆಯ ಚಿಂತೆ ಬೇಡ. ನಿಮ್ಮ ತಂದೆತಾಯಿಗೆ ಇದನ್ನು ಸ್ಪಷ್ಟವಾಗಿ ಮತ್ತು ನಿರ್ಧಾರಯುತವಾಗಿ ತಿಳಿಸಿ. ಅವರಿಗೂ ತಾವು ಮಾಡಿದ ಮೊದಲ ಪ್ರಯತ್ನ ಸೋಲು ಕಂಡಿರುವುದರಿಂದ ನೋವು ಇದ್ದೇ ಇರುತ್ತದೆ. ಆದ್ದರಿಂದ ನಿಮ್ಮ ಮಾತನ್ನು ಅವರು ಗೌರವಿಸುತ್ತಾರೆ. ಇನ್ನು ನಿಮ್ಮ ಪಿಯುಸಿಯ ಗೆಳೆಯ.

    ನಾಲ್ಕು ವರ್ಷಗಳಿಂದ ನಿಮ್ಮ ಸಂಪರ್ಕದಲ್ಲಿಯೇ ಇಲ್ಲದ ಆತ ಈಗ ಏನು ಮಾಡುತ್ತಿದ್ದಾನೆೆ? ಅವನಿಗಿನ್ನೂ ಮದುವೆಯಾಗಿಲ್ಲವೆ? ನಿಮ್ಮ ಮದುವೆಯ ಬಗ್ಗೆ ತಿಳಿದಿದೆಯೆ? ಮೊದಲಿನಂತೆ ಈಗಲೂ ಇಷ್ಟಪಡುತ್ತಾನೆಯೆ? ಇಷ್ಟೆಲ್ಲಾ ಪ್ರಶ್ನೆಗಳಿವೆಯಲ್ಲ? ಇವಕ್ಕೆಲ್ಲಾ ಉತ್ತರಗಳು ನಿಮ್ಮ ಬಳಿಯಲ್ಲಿವೆಯೆ? ಇದನ್ನೆಲ್ಲಾ ಮೊದಲು ನೀವು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಆತನ ಜತೆಯಲ್ಲಿ ಮುಖತಃ ಮಾತಾಡಬೇಕಾಗುತ್ತದೆ. ಆತನೂ ಪಾಸಿಟಿವ್ ಆಗಿ ಭಾವಿಸಿದರೆ ಮಾತ್ರ ನೀವು ಮುಂದುವರೆಯಬೇಕಾಗುತ್ತದೆ. ಅದು ಬಿಟ್ಟು ಒಬ್ಬರೇ ಮದುವೆಯಂತಹ ವಿಷಯವನ್ನು ನಿರ್ಧರಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ನಿಮಗೆ ತಿಳಿದಿರಬೇಕು.

    ಈಗ ನೀವು ಪದವಿ ಮುಗಿಸಿ ಕೆಲಸಕ್ಕೆ ಸೇರುವುದರ ಬಗ್ಗೆಯೇ ಗಮನಕೊಡಿ. ಮುಂದೆ ಒಂದು ವೇಳೆ ನಿಮ್ಮ ತಂದೆತಾಯಿ ಹುಡುಗನನ್ನು ಹುಡುಕಿದರೆ ಕೆಟ್ಟವನೇ ಸಿಗುತ್ತಾನೆಂದು ಹೇಗೆ ಹೇಳುತ್ತೀರಿ? ಅವರು ಒಮ್ಮೆ ಮಾಡಿರುವ ತಪ್ಪನ್ನು ಮತ್ತೆ ಮಾಡಲಾರರು ಅಲ್ಲವೆ? ನೀವು ಗಂಡನ ಮನೆಬಿಟ್ಟು ತವರಿಗೆ ಬಂದಾಗ ಅವರು ನಿಮ್ಮನ್ನು ರಕ್ಷಿಸಿದ್ದಾರೆ ತಾನೆ? ಇಂಥ ತಂದೆತಾಯಿ ಮತ್ತೆ ನಿಮ್ಮನ್ನು ಕಷ್ಟಕ್ಕೆ ದೂಡುತ್ತಾರೆಯೆ? ಆದ್ದರಿಂದ ಒಳ್ಳೆಯದನ್ನೇ ಯೋಚನೆ ಮಾಡಿ, ಆಗ ಮಾಡಿದ್ದೆಲ್ಲವೂ ಒಳ್ಳೆಯದೇ ಆಗುತ್ತದೆ.

    ಅವಳಿಗಾಗಿ ನಾನ್ಯಾಕೆ ಸಾಯ್ಲಿ ಮೇಡಂ… ನಾನು ಬದುಕಬೇಕು… ಪ್ಲೀಸ್​ ಸಲಹೆ ಕೊಡಿ..

    ಅವನ ಮದುವೆಯಾದ್ರೆ ನನ್ನ ಕೊಲೆಯಾಗುತ್ತೆ, ಆಗದಿದ್ರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗತ್ತೆ! ಯಾವ ದಾರಿ ಆಯ್ಕೆ ಮಾಡಲಿ?

    ಪ್ರತಿ ರಾತ್ರಿ ಮಲಗುವಾಗ ಇದನ್ನು ತಪ್ಪದೇ ಮಾಡಿ… ಸುಳ್ಳು ಖುಷಿ ಕೊಟ್ಟಿತಾ ನೋಡಿಕೊಳ್ಳಿ…

    ವೇಶ್ಯೆಯ ಸಹವಾಸ ಮಾಡಿ 33 ವರ್ಷಗಳ ದಾಂಪತ್ಯ ಮುರಿದುಹೋಗಿದ್ದಾರೆ- ಒಂಟಿ ಜೀವಕ್ಕೊಂದು ದಾರಿತೋರಿ ಪ್ಲೀಸ್‌…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts