More

    ಅವಳಿಗಾಗಿ ನಾನ್ಯಾಕೆ ಸಾಯ್ಲಿ ಮೇಡಂ… ನಾನು ಬದುಕಬೇಕು… ಪ್ಲೀಸ್​ ಸಲಹೆ ಕೊಡಿ..

    ಅವಳಿಗಾಗಿ ನಾನ್ಯಾಕೆ ಸಾಯ್ಲಿ ಮೇಡಂ... ನಾನು ಬದುಕಬೇಕು... ಪ್ಲೀಸ್​ ಸಲಹೆ ಕೊಡಿ..ನಾನು 22ವರ್ಷದ, ಬಿ.ಕಾಂ ಮುಗಿಸಿ ಖಾಸಗಿ ಕಂಪನಿಯಲ್ಲಿ ಉದ್ಯೋಗಸ್ಥ. ಬಾಲ್ಯದಿಂದಲೂ ಒಳ್ಳೆಯ ನಡವಳಿಕೆಗೆ, ಒಳ್ಳೆಯ ಸ್ವಭಾವಕ್ಕೆ ಹೆಸರಾದವನು.

    ಹೆಣ್ಣುಮಕ್ಕಳನ್ನು ಸಹೋದರಿಯರಂತೆ ಗೌರವಿಸಿದವನು. ಇಂಥ ನಾನು ಒಂದು ಹುಡುಗಿಯ ಪ್ರೇಮಪಾಶಕ್ಕೆ ಬಿಟ್ಟಳು ಆರುತಿಂಗಳ ಹಿಂದೆ ಅವಳ ಪರಿಚಯ, ಫೋನ್​, ಮೆಸೇಜ್ ಮೂಲಕವಾಗಿ ನಂತರ ಸ್ನೇಹಿತರೂ ಆದೆವು. ನಾನು ನನ್ನ ಪ್ರೇಮ ನಿವೇದನೆಯನ್ನು ಮೆಸೇಜ್ ಮೂಲಕವೇ ಮಾಡಿದೆ. ಅದಕ್ಕವಳು ಈಗಲೇ ಪ್ರೇಮ ಪ್ರೀತಿ ಎಲ್ಲ ಬೇಡ. ಇನ್ನೂ ನಮಗೆ ಟೈಮ್​ ಇದೆ. ಮುಂದೆ ನಾನು ಪ್ರೀತಿಸುವುದೇ ಆಗಿದ್ದರೆ ನಿಮ್ಮನ್ನೇ ಪ್ರೀತಿಸುತ್ತೇನೆ ಎಂದು ಮೆಸೇಜ್​ ಕಳಿಸಿದಳು.

    ಇದನ್ನು ಕೇಳಿ ನಾನಂತೂ ಸ್ವರ್ಗದಲ್ಲೇ ತೇಲಾಡಿದೆ! ಈಗ ಕೆಲವೇ ದಿನಗಳ ಹಿಂದೆ ಅವಳು ಮತ್ತೆ ಮೆಸೇಜ್ ಮಾಡಿ ದಯವಿಟ್ಟು ಕ್ಷಮಿಸಿ ನಾನು ನಿಮ್ಮನ್ನು ಪ್ರೀತಿಸಲಾರೆ. ನನಗೆ ಆ ಭಾವನೆಯೇ ಬರುತ್ತಿಲ್ಲ. ಒಂದಂತೂ ನಿಶ್ಚಯ. ನಾನು ನನ್ನ ತಂದೆತಾಯಿ ನೋಡಿದ ಹುಡುಗನನ್ನೇ ಮದುವೆಯಾಗುತ್ತೇನೆ ಎಂದು ತಿಳಿಸಿದಾಗಿನಿಂದ ನನ್ನ ಬುದ್ಧಿಯೇ ಕೆಟ್ಟುಹೋಗಿದೆ ಮೇಡಂ. ಸಾಯುವ ಮನಸ್ಸಾಗುತ್ತಿದೆ, ಏನು ಮಾಡಲಿ ತಿಳಿಯದಾಗಿದೆ.

    ಒಮ್ಮೊಮ್ಮೆ ಯಾವಳೋ ಹುಡುಗಿಗಾಗಿ ಯಾಕೆ ಸಾಯಬೇಕು? ಚೆನ್ನಾಗಿ ಬದುಕಿ ತೋರಿಸಬೇಕು, ನನ್ನ ಅಪ್ಪ ಅಮ್ಮ ನನ್ನ ಮೇಲೆ ಪ್ರಾಣ ಇಟ್ಟುಕೊಂಡಿದ್ದಾರೆ, ಅವರಿಗೆ ಒಳ್ಳೆಯದನ್ನು ಮಾಡಬೇಕು’ ಎಂದೂ ಅನ್ನಿಸುತ್ತದೆ. ಆದರೂ ಒಮ್ಮೊಮ್ಮೆ ಒಂಟಿತನ ಕಾಡುತ್ತದೆ. ಒಳ್ಳೆಯ ಬದುಕು ಕಟ್ಟಿಕೊಳ್ಳಲು ಒಂದು ಸಮಂಜಸವಾದ ಉತ್ತರ ಕೊಡಿ ಮೇಡಂ.

    ಉತ್ತರ: ನಿಮ್ಮ ಎರಡು ದೊಡ್ಡ ಪುಟಗಳ, ಚೆನ್ನಾದ ಕನ್ನಡಭಾಷೆಯ ಪತ್ರ ಓದಿ ವಿಸ್ಮಯವಾಯಿತು. ಇರಲಿ, ಈಗ ನಿಮ್ಮ ಸಮಸ್ಯೆಗೆ ಬರೋಣ. ನಿಮ್ಮ ಪತ್ರದಲ್ಲಿ ಒಂದಂತೂ ಸ್ಪಷ್ಟವಾಗಿದೆ. ನೀವು ಯಾವುದೇ ಯೋಚನೆಯನ್ನು ವಿಪರೀತ ಭಾವನಾತ್ಮಕವಾಗಿ ಮಾಡುತ್ತೀರಿ. ಬರೀ ಭಾವನೆಗಳೇ ನಮ್ಮ ಬದುಕನ್ನು ನಡೆಸಬಾರದಲ್ಲವೇ? ನಮ್ಮ ಒಳಗೇ ಇರುವ ಬುದ್ಧಿಯನ್ನು ಸಹ ಸ್ವಲ್ಪ ಬಳಸಬೇಕು ತಾನೇ?

    ನೀವು ಎಲ್ಲಿ ನಿಮ್ಮನ್ನು ನೀವು ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವುದನ್ನು ಹೇಳುತ್ತೇನೆ. ನಿಮಗಿನ್ನೂ 22ವರ್ಷ. ಗಂಡಸರಿಗೆ ಕೆಲವರಿಗೆ ಪ್ರಬುದ್ಧತೆ ಎನ್ನುವುದು ಬೆಳೆಯಲು ಕಡೆಯ ಪಕ್ಷ 25 ವರ್ಷಗಳು ಬೇಕಾಗುತ್ತದೆ. ನೀವು ಆ ಹುಡುಗಿಯನ್ನು ಪರಿಚಯ ಮಾಡಿಕೊಂಡು ಮಾತಾಡಿದ್ದು ಬಸ್ಸಿನಲ್ಲಿ ಕಣ್ಣುಸನ್ನೆಯಲ್ಲಿ ಮತ್ತು ಮೊಬೈಲ್ ಮೂಲಕ ಮೆಸೇಜ್ ಮಾಡುತ್ತ ತಾನೇ? ಅಷ್ಟಕ್ಕೇ ಅವಳು ನಿಮ್ಮ ಬಾಳಸಂಗಾತಿಯಾಗಿ ಬಿಡುತ್ತಾಳೆಂದು ಹೇಗೆ ಊಹಿಸಿದಿರಿ? ಆಯಿತು, ನಿಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡಿರಿ.

    ಅವಳು ಅದಕ್ಕೆ ಎಷ್ಟು ಪ್ರಬುದ್ಧವಾದ ಉತ್ತರ ಕೊಟ್ಟಿದ್ದಾಳೆ, ಅದನ್ನಾದರೂ ಸರಿಯಾಗಿ ಅರ್ಥಮಾಡಿಕೊಂಡಿರಾ? ಅದೂ ಇಲ್ಲವಲ್ಲ? ಅವಳು ಹೇಳಿದ್ದರೂ ಎಷ್ಟು ಸ್ಪಷ್ಟವಾಗಿದೆ ನೋಡಿ. `ಪ್ರೇಮಕ್ಕೆ ನಾವಿಬ್ಬರೂ ಇನ್ನೂ ಚಿಕ್ಕವರು, ಮುಂದೆ ಪ್ರೀತಿಸುವುದೇ ಆಗಿದ್ದರೆ ನಿಮ್ಮನ್ನೇ ಪ್ರೀತಿಸುತ್ತೇನೆ’ ಅಂತ! ಆ ನಂತರ ಅವಳು ಚೆನ್ನಾಗಿಯೇ ಯೋಚನೆ ಮಾಡಿದ್ದಾಳೆ. ನೀವು ಅವಳಿಗೆ ಉತ್ತಮ ಸಂಗಾತಿಯಾಗಲಾರಿರಿ ಎನಿಸಿದೆ. ತಕ್ಷಣ ನಿಮಗೆ ತಿಳಿಸಿದ್ದಾಳೆ. ಅವಳು ಮತ್ತೆ ಯಾರನ್ನೂ ಪ್ರೀತಿಸಿಲ್ಲವಲ್ಲ? ಅದೂ ಮುಖ್ಯ!

    ತನ್ನ ಭವಿಷ್ಯವನ್ನು ಹೆತ್ತವರ ಕೈಗೆ ಒಪ್ಪಿಸಿ ನಿರಾತಂಕವಾಗಿದ್ದಾಳೆ. ನಿಜಕ್ಕೂ ಅವಳನ್ನು ಅಭಿನಂದಿಸಬೇಕು. ನೀವು ಯಾವ ಕಾರಣಕ್ಕೂ ಬಯ್ಯುವ ಅಗತ್ಯವಿಲ್ಲ. ಅವಳಿಗೆ ಬುದ್ಧಿಕಲಿಸಲು ನೀವು ಚೆನ್ನಾಗಿ ಬಾಳಿ ಅವಳಿಗೆ ತೋರಿಸಬೇಕಾಗಿಯೂ ಇಲ್ಲ. ನೀವು ನಿಮಗಾಗಿ ಚೆನ್ನಾಗಿ ಬದುಕಬೇಕು.

    ಬದುಕು ಎನ್ನುವುದು ದೇವರು ಮನುಷ್ಯನಿಗೆ ಕೊಟ್ಟಿರುವ ಸುಂದರವಾದ ವರ! ಅದರ ಜತೆಗೆ `ಬುದ್ಧಿ ಎನ್ನುವ ಸಲಕರಣೆಯನ್ನೂ ಕೊಟ್ಟಿದ್ದಾನೆ. ಅದನ್ನು ಸಮಂಜಸವಾಗಿ ಉಪಯೋಗಿಸಿ. ಇನ್ನೂ ನಾಲ್ಕುವರ್ಷ ಕಷ್ಟಪಟ್ಟು ದುಡಿಯಿರಿ. ಒಳ್ಳೆಯ ಅನುಭವವನ್ನು ಗಳಿಸಿ. ಹೆತ್ತವರಿಗೆ ಹೆಮ್ಮೆಯಾಗುವಂತೆ ನಡೆದುಕೊಳ್ಳಿ.

    26 ಅಥವಾ 27ನೇ ವರ್ಷದಲ್ಲಿ ಮದುವೆಯ ಬಗ್ಗೆ ಯೋಚಿಸಿ. ಇಷ್ಟು ಚಿಕ್ಕವಯಸ್ಸಿಗೆ `ಒಂಟಿತನ’ದ ಬಗ್ಗೆ ಮಾತಾಡಬಾರದು. ಈಗಿನ ಒಂಟಿತನ ಒಂದು ವರವೆಂದು ಭಾವಿಸಬೇಕು. ಸಕಾರಾತ್ಮಕವಾದ ಚಿಂತೆಗಳನ್ನು ಮಾಡಲು ನಿಮ್ಮನ್ನು ಯಾರೂ `ಡಿಸ್ಟರ್ಬ್’ ಮಾಡುವುದಿಲ್ಲ ಎಂದು ಖುಷಿ ಪಡಿ. ಒಳ್ಳೆಯ ಬದುಕು ತನ್ನಷ್ಟಕ್ಕೆ ತಾನೇ ಕಟ್ಟಿಕೊಳ್ಳುತ್ತದೆ.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

    ವೇಶ್ಯೆಯ ಸಹವಾಸ ಮಾಡಿ 33 ವರ್ಷಗಳ ದಾಂಪತ್ಯ ಮುರಿದುಹೋಗಿದ್ದಾರೆ- ಒಂಟಿ ಜೀವಕ್ಕೊಂದು ದಾರಿತೋರಿ ಪ್ಲೀಸ್‌…

    ವಿದೇಶದಲ್ಲಿಯೂ ಪರಿಶುದ್ಧನಾಗಿದ್ದ ನಾನು ವಿವಾಹಿತೆಯ ಬಲೆಗೆ ಬಿದ್ದು ಏನೇನೋ ಮಾಡಿದೆ- ಹೇಗೆ ಹೊರಗೆ ಬರಲಿ?

    ನನ್ನ ಕಾಮನೆಗಳನ್ನು ಬಾಯಿಬಿಟ್ಟು ಹೇಳಿದ್ರೂ ಪತಿ ದೂರ ಹೋಗ್ತಿದ್ದಾರೆ, ದಾರಿ ತೋಚದಾಗಿದೆ… ಏನು ಮಾಡಲಿ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts