More

    ವಿದೇಶದಲ್ಲಿಯೂ ಪರಿಶುದ್ಧನಾಗಿದ್ದ ನಾನು ವಿವಾಹಿತೆಯ ಬಲೆಗೆ ಬಿದ್ದು ಏನೇನೋ ಮಾಡಿದೆ- ಹೇಗೆ ಹೊರಗೆ ಬರಲಿ?

    ವಿದೇಶದಲ್ಲಿಯೂ ಪರಿಶುದ್ಧನಾಗಿದ್ದ ನಾನು ವಿವಾಹಿತೆಯ ಬಲೆಗೆ ಬಿದ್ದು ಏನೇನೋ ಮಾಡಿದೆ- ಹೇಗೆ ಹೊರಗೆ ಬರಲಿ?ಪ್ರಶ್ನೆ: ನಾನು 29ವರ್ಷದ ತರುಣ. ಇನ್ನೂ ಮದುವೆಯಾಗಿಲ್ಲ. ನನ್ನ ಹಿನ್ನೆಲೆಯನ್ನು ಸ್ವಲ್ಪ ವಿವರಿಸಿ ಈಗಿನ ನನ್ನ ಸಮಸ್ಯೆಯನ್ನು ತಿಳಿಸುತ್ತೇನೆ. ನಾನು ಹತ್ತನೇ ತರಗತಿಯಿಂದಲೂ ಕರ್ನಾಟಕ ರಾಜ್ಯಕ್ಕೆ ಟಾಪರ್ ಆಗಿ ಅಂಕಗಳನ್ನು ಪಡೆದವನು. ನಂತರ ಪಿ.ಯು.ಸಿ ಆಮೇಲೆ ಬಿ.ಇ ಎಲ್ಲದರಲ್ಲೂ ಮೊದಲಸ್ಥಾನ ನನ್ನದೇ! ಅಮೆರಿಕದ ಐದು ವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಗೆ ಸೀಟು ಸಿಕ್ಕ ಅದೃಷ್ಟವಂತ ನಾನು.

    ನನ್ನದೇ ಆಯ್ಕೆಯಿಂದ ಅಲ್ಲಿಯ ಅತ್ಯುತ್ತಮ ವಿದ್ಯಾಲಯದಲ್ಲಿ ಎಂ.ಎಸ್ ಮಾಡಿ, ಅಲ್ಲಿ ನಾಲ್ಕಾರು ಉತ್ತಮ ನೌಕರಿ ದೊರೆತರೂ, ನನ್ನ ದೇಶ, ನನ್ನ ಜನ ಎನ್ನುವ ಅಭಿಮಾನದಿಂದ ಇಲ್ಲಿಗೆ ವಾಪಸ್ ಬಂದೆ. ಇಲ್ಲಿಯೂ ಮಲ್ಟಿ ನ್ಯಾಷನಲ್​ ಕಂಪನಿಯಲ್ಲಿ ಉತ್ತಮ ನೌಕರಿ ಸಿಕ್ಕು, ನನ್ನದೇ ಪ್ರತಿಭೆ, ಬದ್ಧತೆಯಿಂದ ಆರು ವರ್ಷಗಳಲ್ಲಿ ಐದು ಪ್ರಮೋಷನ್ ಪಡೆದು ಉತ್ತಮ ಸ್ಥಿತಿಯಲ್ಲಿದ್ದೇನೆ. ಇನ್ನೇನು ಕಂಪನಿಯ ಸಿ.ಇ.ಒ ಕುರ್ಚಿಯನ್ನೂ ಅಲಂಕರಿಸುವವನಿದ್ದೆ.

    ಅಷ್ಟರಲ್ಲಿ ಒಂದು ಎಡವಟ್ಟಾಗಿ ಹೋಯಿತು. ಕಳೆದವರ್ಷ ಹಳ್ಳಿಯಲ್ಲಿರುವ ನನ್ನ ತಂದೆತಾಯಿ ಮತ್ತು ಅಕ್ಕ ನನ್ನ ಮದುವೆಯ ಪ್ರಸ್ತಾಪ ಮಾಡಲು ಪ್ರಾರಂಭಿಸಿದರು. ನಾನು `ನನ್ನ ಗುರಿ ಮುಟ್ಟುವತನಕ ಮದುವೆಯ ಮಾತು ಬೇಡ ‘ ಎಂದು ಹಠಹಿಡಿದು ಅವರೆಲ್ಲರನ್ನು ಸುಮ್ಮನಾಗಿಸಿದ್ದೆ. ನನ್ನ ಫೇಸ್ ಬುಕ್ಕಿಗೆ ನನ್ನ ಶಾಲೆಯ ಗೆಳತಿಯೊಬ್ಬಳ ಫ್ರೆಂಡ್ ರಿಕ್ವೆಸ್ಟ್ ಬಂತು. ಒಪ್ಪಿದೆ. ಒಂದೆರಡು ವಾರಕ್ಕೆ ಅವಳದೇ ಒತ್ತಾಯದ ಮೇಲೆ ಹೋಟೆಲ್ ಒಂದರಲ್ಲಿ ಭೇಟಿಯಾದೆವು. ಅವಳು ತನಗೆ ಮದುವೆಯಾಗಿ ಏಳು ವರ್ಷವಾಯಿತೆಂದೂ ಮತ್ತು ತನ್ನ ಗಂಡ ಸರಿಯಿಲ್ಲವೆಂದೂ ಮೊದಲ ಭೇಟಿಯಾದಾಗ ಹೇಳಿದಳು.

    ನನಗೇನು ಆ ಹುಡುಗಿಯ ಬಗ್ಗೆ ಆಕರ್ಷಣೆ ಮೂಡಲಿಲ್ಲ. ಏನೋ ಹಳೆಯ ಗೆಳತನವೆಂದು ಭೇಟಿಯಾದೆ. ಅವಳ ಗಂಡನ ಸುದ್ದಿ ಕೇಳಿ ಕನಿಕರವೂ ಆಯಿತು. ಅವಳ ಬಲವಂತದಿಂದಲೇ ಮತ್ತೆಮತ್ತೆ ಭೇಟಿಯಾದೆವು. ಒಂದುದಿನ ಅವಳು ತನ್ನ ಮನೆಗೆ ಕರೆದಳು. ಅಲ್ಲಿಗೆ ಹೋದಮೇಲೆ `ಗಂಡ ಊರಿನಲ್ಲಿ ಇಲ್ಲ’ಎಂದಳು. ನಾನಿನ್ನು ಗೊಂದಲದ ಸ್ಥಿತಿಯಲ್ಲಿರುವಾಗಲೇ ನನ್ನೊಡನೆ ಬೇರೆ ಥರ ನಡೆದುಕೊಂಡಳು. ನಾನೂ ಸಂಯಮ ಕಳೆದುಕೊಂಡು ಬಿಟ್ಟೆ ಮೇಡಂ. ಪರದೇಶದಲ್ಲೂ ಎಷ್ಟೊಂದು ಪರಿಶುದ್ಧನಾಗಿದ್ದ ನಾನು ಇಲ್ಲಿ ವಿವಾಹಿತ ಮಹಿಳೆಯೊಡನೆ ತಪ್ಪಾಗಿ ನಡೆದುಕೊಂಡು ಬಿಟ್ಟೆ.

    ನಂತರ ತೀರಾ ಬೇಸರವಾಯಿತು. ಅವಳೇ ಸಮಾಧಾನ ಮಾಡಿದಳು. `ನಾನು ಹೇಗೂ ಗಂಡನಿಗೆ ಡಿವೋರ್ಸ್ ಕೊಡುತ್ತೇನೆ ನಂತರ ನಾವಿಬ್ಬರು ಮದುವೆಯಾಗೋಣ’ ಎಂದಳು. ನಾನು ನಂಬಿದೆ. ಹೀಗೆ ನಮ್ಮ ಸಂಬಂಧ ಹಲವು ತಿಂಗಳವರೆಗೆ ನಡೆಯಿತು. ನನಗೆ ಅವಳ ಮೇಲೆ ಅಪಾರವಾದ ಪ್ರೀತಿ ಬೆಳೆಯಿತು. ಆ ನಂತರ ಅವಳು ಇದ್ದಕ್ಕಿದ್ದಂತೆ ನನ್ನನ್ನು ಭೇಟಿಯಾಗುವುದನ್ನು ನಿಲ್ಲಿಸಿದಳು. ಫೋನ್​ ಮಾಡಿದರೂ ಸರಿಯಾಗಿ ಮಾತಾಡುತ್ತಿರಲಿಲ್ಲ. ಒಂದು ದಿನ ಬಲವಂತದಿಂದ ಭೇಟಿ ಮಾಡಿದೆ. ಆಗ ಅವಳು `ನಾನೀಗ ಐದು ತಿಂಗಳ ಗರ್ಭಿಣಿ. ನಿನ್ನ ಮಗುವಿಗೆ ತಾಯಿಯಾಗುತ್ತಿದ್ದೇನೆ. ನನ್ನ ಗಂಡ ಈಗ ಸರಿಯಾಗಿದ್ದಾನೆ. ಇದು ತನ್ನದೇ ಮಗುವೆಂದು ಭಾವಿಸಿದ್ದಾನೆ. ಆದ್ದರಿಂದ ನೀನು ನನ್ನ ಬದುಕಿನಿಂದ ದೂರ ಹೋಗು’ ಎಂದಳು. ನನಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಯಿತು. ಅಳುತ್ತ, ಅವಳ ಕಾಲು ಹಿಡಿದು’ ಹೀಗೇಕೆ ಮಾಡಿದೆ? ಸತ್ಯ ಹೇಳು’ ಎಂದು ಅಂಗಲಾಚಿದೆ. ಅವಳದ್ದು ಒಂದೇ ಉತ್ತರ `ನನ್ನನ್ನು ಮರೆತುಬಿಡು’. ನಾನೀಗ ಹುಚ್ಚನಂತಾಗಿದ್ದೇನೆ.

    ತಾನಾಗಿಯೇ ಮೇಲೆ ಬಿದ್ದು, ಮದುವೆಯ ಆಸೆಹುಟ್ಟಿಸಿ, ನನ್ನ ಮಗುವನ್ನು ಪಡೆಯಲಿರುವ ಅವಳು ಹೀಗೆ `ಮರೆತು ಬಿಡು’ ಅಂದರೆ ಹೇಗೆ? ಆ ಮಗು ನನ್ನದು ಅಲ್ಲವೇ? ಇದೇ ಚಿಂತೆಯಲ್ಲಿ ನನ್ನ ಕೆಲಸದಲ್ಲಿ ಹಿಂದೆಬಿದ್ದಿದ್ದೇನೆ. ಈಗ ನನಗೆ ಸಿಕ್ಕಬೇಕಾಗಿದ್ದ ಸಿ.ಇ .ಒ ಸ್ಥಾನ ಸಿಗುತ್ತದೋ ಇಲ್ಲವೋ ಅನುಮಾನ ಕಾಡುತ್ತಿದೆ. ಇತ್ತ ಇವಳೂ ಇಲ್ಲ, ಅತ್ತ ನನ್ನ ಗುರಿಯೂ ಹಾಳಾಯಿತು. ಏನು ಮಾಡಲಿ ದಯವಿಟ್ಟು ತಿಳಿಸಿ.

    ಉತ್ತರ: ನಿಮ್ಮ ಆರುಪುಟಗಳ ಸುಂದರ ಕನ್ನಡದ ಪತ್ರಕ್ಕೆ ನನ್ನ ಮೆಚ್ಚುಗೆಗಳು. ನಿಮ್ಮಂಥ ಜಾಣರು ನಿಮ್ಮ ಗೆಳತಿಯನ್ನು `ಸತ್ಯಹೇಳು’ ಎಂದು ಕೇಳುವ ಅಗತ್ಯವೇ ಇಲ್ಲವೆನಿಸುತ್ತದೆ.

    ಆ ನಿಮ್ಮ ಗೆಳತಿಗೆ ಮದುವೆಯಾಗಿ ಏಳುವರ್ಷವಾಯಿತು, ಮಕ್ಕಳಾಗಿಲ್ಲ ಮತ್ತು ಅವಳಿಗೂ ಅವಳ ಗಂಡನಿಗೂ ಐ.ವಿ.ಎಫ್ ಮುಂತಾದ ತಂತ್ರದಿಂದ ಮಗುವನ್ನು ಪಡೆಯಲು ಇಚ್ಛೆಯಿಲ್ಲ. ಎಂದು. ಹಾಗಾಗಿ ಗಂಡಹೆಂಡತಿ ಇಬ್ಬರು ಸೇರಿಯೇ ನಿಮ್ಮನ್ನು ಬಲೆಗೆ ಬೀಳಿಸಿರಬಹುದಲ್ಲವೇ?

    ಈಗ ನೀವೇ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಿ. ಗಂಡ ಸರಿಯೇ ಇಲ್ಲ ವಿಚ್ಛೇದನ ಕೊಟ್ಟು ನಿನ್ನನ್ನು ಮದುವೆಯಾಗುತ್ತೇನೆಂದವಳಿಗೆ ಇದ್ದಿಕ್ಕಿದ್ದಂತೆ ಗಂಡ ಸರಿಹೋದದ್ದು ಹೇಗೆ ? ಐ.ವಿ.ಎಫ್ ಸುದ್ದಿಯನ್ನು ಅವಳು ನಿಮಗೆ ಏಕೆ ಹೇಳಿದಳು? ಇದರರ್ಥ ಗಂಡಹೆಂಡತಿ ಇಬ್ಬರೂ ಮಕ್ಕಳಾಗಲು ತಮ್ಮ ತಪಾಸಣೆಯನ್ನು ಮಾಡಿಸಿಕೊಂಡಿರಬಹುದಲ್ಲವೇ? ಗಂಡನಿಗೆ ಸಹಜವಾಗಿ ಮಕ್ಕಳಾಗುವ ಸಾಧ್ಯತೆ ಇಲ್ಲದಾಗ ವೈದ್ಯರು ಐ.ವಿ.ಎಫ್ ಸಲಹೆ ನೀಡುತ್ತಾರಲ್ಲವೇ?

    ಈ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ `ಶೀಲಗೆಟ್ಟರೂ ಚಿಂತೆಯಿಲ್ಲ ಮಗುವನ್ನು ಪಡೆಯುಬೇಕು’ ಎನ್ನುವುದು. ನಿಮ್ಮ ಸುದೀರ್ಘ ಪತ್ರ ಓದಿದಮೇಲೆ ನನಗೆ ಇನ್ನೂ ಒಂದು ಅನುಮಾನ ಬರುತ್ತಿದೆ. ಅವಳೇನೋ ನನ್ನ ಶಾಲೆಯ ಸಹಪಾಠಿ ಎಂದು ಹೇಳಿಕೊಂಡಳು. ಆದರೆ ನನಗೆ ಎಷ್ಟು ನೆನೆಪಿಸಿಕೊಂಡರೂ ಅವಳ ಮುಖ ನೆನಪಿಗೆ ಬರಲಿಲ್ಲ, ಅವಳನ್ನು ನೋಡಿದಾಗಲೂ ಹಿಂದೆ ನೋಡಿದ್ದೇನೆಂದು ಅನಿಸಲಿಲ್ಲ ಎಂದು ಬರೆದಿದ್ದೀರಿ.

    ನಿಮ್ಮಂಥ ಬುದ್ಧಿವಂತರಿಗೆ ಕೆಲವೇ ವರ್ಷಗಳ ಹಿಂದೆ ಹೈಸ್ಕೂಲಿನಲ್ಲಿ ಓದಿದ ಗೆಳೆಯ ಗೆಳತಿಯರು ಸ್ವಲ್ಪವಾದರೂ ನೆನಪಿರಬೇಕಾಗಿತ್ತಲ್ಲವೇ? ಅಂದರೆ ಅದರರ್ಥ ಆಕೆ ನಿಮ್ಮ ಕ್ಲಾಸ್‍ಮೇಟ್ ಅಲ್ಲದೆಯೂ ಇರಬಹುದಲ್ಲವೇ? ನಿಮ್ಮ ಫೇಸ್‍ಬುಕ್ಕಿನ ಪ್ರೊಫೈಲ್​ ನೋಡಿ ನೀವು ತುಂಬ ಜಾಣರೆಂದು ತಿಳಿದು ತನಗೂ ನಿಮ್ಮಂದ ಒಂದು ಜಾಣ ಮಗು ಹುಟ್ಟಲಿ ಎಂದು ಈ ನಾಟಕವಾಡಿರಬಹುದಲ್ಲವೇ? ಇರಲಿ ಅತ್ಯಂತ ಬುದ್ಧಿವಂತರಾದ ನೀವು ಸಾಮಾನ್ಯರ ಹಾಗೆ `ಮೊದಲಪ್ರೀತಿ’ ಅದೂ, ಇದು ಎಂದು ಕೇವಲ ಭಾವನಾತ್ಮಕ ಮಟ್ಟದಲ್ಲಿ ಯೋಚಿಸಬಾರದು.

    ಹೌದು ನೀವೀಗ ಮೋಸ ಹೋಗಿದ್ದಿರಿ. ಅದನ್ನು ಮೊದಲು ಒಪ್ಪಿಕೊಂಡು ಬಿಡಿ. ಜೀವನದಲ್ಲಿ ಹೀಗೆ ಮೋಸಹೋಗುವುದು ಸಹಜವೇ ತಾನೇ? ಇನ್ನುನನ್ನ ಮಗು, ನನ್ನ ವಂಶ ಎಂದೆಲ್ಲ ಹಲುಬುವುದರಲ್ಲಿಅರ್ಥವಿದೆಯೇ? ಈಗ ಯಾರಿಗಾದರೂ ರಕ್ತ ದಾನಮಾಡಿದ್ದೀರಿ. ಆ ನಂತರವೂ `ನನ್ನ ರಕ್ತ ಯಾರಲ್ಲಿಹರಿಯುತ್ತಿದೆ? ಅವರು ನನ್ನ ರಕ್ತಸಂಬಂಧಿ ‘ ಎಂದೆಲ್ಲಭಾವಿಸುತ್ತೇವೆಯೇ? ಹಾಗೆ ಇದು ಒಂದು ರೀತಿಯಲ್ಲಿ
    `ದಾನ’ ಎಂದುಕೊಂಡುಬಿಡಿ. ಇನ್ನು ಈ ಘಟನೆಯನ್ನು`ಒಂದು ಅನುಭವ ‘ಎಂದುಕೊಂಡು ಪಕ್ಕಕ್ಕೆ ಇಡಿ. ನಿಮಗಿನ್ನೂವಯಸ್ಸೇನೂ ಹಾರಿಹೋಗಿಲ್ಲ. ಒಳ್ಳೆಯ ಹುಡುಗಿಯನ್ನುನೋಡಿ ಮದುವೆಯಾಗಿ. ಖಂಡಿತ ಸುಖದ ಬಾಳು ನಿಮ್ಮದಾಗುತ್ತದೆ.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ನನ್ನ ಕಾಮನೆಗಳನ್ನು ಬಾಯಿಬಿಟ್ಟು ಹೇಳಿದ್ರೂ ಪತಿ ದೂರ ಹೋಗ್ತಿದ್ದಾರೆ, ದಾರಿ ತೋಚದಾಗಿದೆ… ಏನು ಮಾಡಲಿ?

    ಪತಿಗೆ ಗೊತ್ತಿಲ್ಲದಂತೆ ಆಗಾಗ್ಗೆ ನನ್ನನ್ನು ಸೇರಲು ಒಪ್ಪಿದ್ದಾಳೆ- ಇದು ತಪ್ಪೋ, ಸರಿಯೊ?

    ಪತ್ನಿ ತಿಂಗಳಲ್ಲಿ 15-20 ದಿನ ಬೋಲ್ಟ್‌ ಹಾಕಿ ಒಬ್ಬಳೇ ಮಲಗ್ತಾಳೆ- ಜೀವನ ಸಾಕಾಗಿದೆ; ಏನ್‌ ಮಾಡ್ಲಿ ಮೇಡಂ…

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts