More

    ಪತ್ನಿ ತಿಂಗಳಲ್ಲಿ 15-20 ದಿನ ಬೋಲ್ಟ್‌ ಹಾಕಿ ಒಬ್ಬಳೇ ಮಲಗ್ತಾಳೆ- ಜೀವನ ಸಾಕಾಗಿದೆ; ಏನ್‌ ಮಾಡ್ಲಿ ಮೇಡಂ…

    ಪತ್ನಿ ತಿಂಗಳಲ್ಲಿ 15-20 ದಿನ ಬೋಲ್ಟ್‌ ಹಾಕಿ ಒಬ್ಬಳೇ ಮಲಗ್ತಾಳೆ- ಜೀವನ ಸಾಕಾಗಿದೆ; ಏನ್‌ ಮಾಡ್ಲಿ ಮೇಡಂ...ನಾನೊಬ್ಬ ಉಪನ್ಯಾಸಕ. 50 ವರ್ಷ. ನನ್ನ ಹೆಂಡತಿಗೆ 47 ವರ್ಷ. ಅವಳು ನನ್ನ ಅಕ್ಕನ (ನನ್ನ ತಂದೆಯ ದೊಡ್ಡ ಹೆಂಡತಿ) ಮಗಳೇ. ಮದುವೆಯಾಗಿ 20ವರ್ಷಗಳಾಗಿವೆ. ನನಗೀಗ ಬಿ.ಇ ಓದುತ್ತಿರುವ ಮಗಳೂ ಪಿ.ಯು.ಸಿ ಓದುತ್ತಿರುವ ಮಗನೂ ಇದ್ದಾರೆ. ನನ್ನ ಹೆಂಡತಿ ಮದುವೆಯಾದ ದಿನದಿಂದ ನನಗೆ ಹೊಂದಿಕೊಂಡಿಲ್ಲ. ಸದಾ ಜಗಳ, ಕೋಪ. ನಾನು ಒಳ್ಳೆಯ ಮಾತನ್ನೇ ಹೇಳಿದರೂ ಅವಳು ಅದರಲ್ಲಿ ತಪ್ಪು ಕಾಣುತ್ತಾಳೆ.

    ತಿಂಗಳಿಗೆ 15 ರಿಂದ 20 ದಿವಸ ರೂಮಿನ ಬೋಲ್ಟ್ ಹಾಕಿಕೊಂಡು ಒಬ್ಬಳೇ ಮಲಗುತ್ತಾಳೆ. ಹಿಂದೆ ವಿಪರೀತ ಕೋಪ ಬಂದಾಗ ಅವಳು ನನ್ನನ್ನು ಸೌಟಿನಲ್ಲೂ, ಕಾಲಿನಲ್ಲೂ ಹೊಡೆದ, ಒದ್ದ ನಿದರ್ಶನಗಳು ಇವೆ. ಕೋಪ ಬಂದಾಗ ಒಂದು ಹುಲ್ಲು ಕಡ್ಡಿಯನ್ನೂ ಎತ್ತಿಡುವುದಿಲ್ಲವಾದ್ದರಿಂದ ಮಕ್ಕಳಿಗೆ ತೊಂದರೆಯಾಗಬಾರದು ಎಂದು ನಾನೇ ಅಡುಗೆ ಕೆಲಸ ಎಲ್ಲಾ ನೋಡಿಕೊಂಡು ಕೆಲಸಕ್ಕೆ ಹೋಗುತ್ತೇನೆ. ಈಗೀಗ ನನ್ನ ಮಕ್ಕಳೂ ನನಗೆ ಸಹಾಯ ಮಾಡುತ್ತಾರೆ. ನನಗೆ ಈ ಜೀವನ ಸಾಕಾಗಿ ಹೋಗಿದೆ ಮೇಡಂ. ನನ್ನಲ್ಲಿ ಹುಡುಕಿದರೂ ಒಂದು ದುರ್ನಡತೆಯಿಲ್ಲ. ಇವಳನ್ನು ಬಿಟ್ಟು ಮತ್ತೊಬ್ಬ ಹೆಣ್ಣಿನ ಕಡೆ ತಿರುಗಿಯೂ ನೋಡಿಲ್ಲ. ಆದರೂ ನನ್ನಮೇಲೆ ಇವಳಿಗೆ ಯಾಕೆ ಈ ಮಟ್ಟದ ಕೋಪವೋ ದ್ವೇಷವೋ ತಿಳಿಯುತ್ತಿಲ್ಲ. ಈಗ ನಾನು ವಿಚ್ಛೇದನವನ್ನು ಕೊಡಬಹುದೇ ತಿಳಿಸಿ. ನನ್ನ ನೋವಿನ ಬದುಕಿಗೊಂದು ಪರಿಹಾರ ತಿಳಿಸಿ.

    ನೀವು ಉಪನ್ಯಾಸಕರು. ಸಾಕಷ್ಟು ವರ್ಷ ಕೆಲಸ ಮಾಡಿರುವವರು. ಜನರ ರೀತಿನೀತಿಗಳನ್ನು ಕಣ್ಣಾರೆ ಕಂಡಿರುವವರು. ಇಂಥಾ ನಿಮಗೆ, ನಿಮ್ಮ ಹೆಂಡತಿಗೆ ಮಾನಸಿಕ ಸಮಸ್ಯೆ ಇದೆ ಎಂದು ತಿಳಿಯಲಿಲ್ಲವೇ? ಮಾನಸಿಕವಾಗಿ ಆರೋಗ್ಯವಾಗಿರುವ ಯಾರಾದರೂ 20 ದಿನಗಟ್ಟಲೇ ಕೋಪದಲ್ಲಿರುತ್ತಾರೆಯೇ? ಅದು ತೀರಾ ಅಸಹಜವೆಂದು ನಿಮಗೆ ಮದುವೆಯಾದಾಗಲೇ ಗೊತ್ತಾಗಬೇಕಿತ್ತು ಅಲ್ಲವೇ? ನಮ್ಮ ಸಮಾಜದಲ್ಲಿ ಇದೊಂದು ಅವಜ್ಞೆಯಿದೆ.

    ಕೋಪ, ಅಳು, ದ್ವೇಷ, ತಿರಸ್ಕಾರ, ಅತಿ ನಿಧಾನ ಇವೆಲ್ಲವನ್ನೂ ವ್ಯಕ್ತಿಯ ಸ್ವಭಾವಗಳು ಎಂದು ಪರಿಗಣಿಸಿಬಿಡುತ್ತೇವೆ. ಆದರೆ ಇವೆಲ್ಲವೂ ಸ್ವಲ್ಪ ಹದದಲ್ಲಿದ್ದರೆ ಮಾತ್ರ ಸ್ವಭಾವ. ಸ್ವಲ್ಪ ಅತಿಯಾದರೂ ಅದೊಂದು ಮೆಂಟಲ್ ಡಿಸಾರ್ಡರ್. ಅತಿಯಾಗಿ ಕೋಪಿಸಿಕೊಳ್ಳುವುದು, ತನ್ನ ಕರ್ತವ್ಯಗಳನ್ನು ಮತ್ತು ದಿನನಿತ್ಯದ ಕೆಲಸಗಳನ್ನು ಮಾಡದಿರುವುದು, ವಿನಾ ಕಾರಣ ದ್ವೇಷವನ್ನು ಸಾಧಿಸುವುದು, ಆಡಿದ ಮಾತನ್ನು ಸರಿಯಾಗಿ ಗ್ರಹಿಸದಿರುವುದು ಇವೆಲ್ಲವೂ ನಿಮ್ಮ ಹೆಂಡತಿಗೆ ಇದೆ. ಇವು ಆಕೆಗೆ ಇರಬಹುದಾದ ಹಲವು ಡಿಸಾರ್ಡರ್​ಗಳನ್ನು ಸೂಚಿಸುತ್ತಿವೆ.

    ಇದಕ್ಕೆ ಕಾರಣಗಳನ್ನು ನಿಮ್ಮ ಪತ್ರದ ಆಧಾರದಿಂದಲೇ ಹುಡುಕುವ ಪ್ರಯತ್ನ ಮಾಡುತ್ತೇನೆ. ನಿಮ್ಮ ತಂದೆಗೆ ನಿಮ್ಮ ತಾಯಿ ಎರಡನೇ ಹೆಂಡತಿ. ಬಹುಶಃ ಅವರ ಮೊದಲ ಹೆಂಡತಿ ಇರಲಿಕ್ಕಿಲ್ಲವಾದ್ದರಿಂದ ಅವರು ಎರಡನೇ ಮದುವೆಯಾಗಿರಬಹುದು. ನಿಮ್ಮ ಅಕ್ಕ ( ಈಗ ಅವರು ನಿಮ್ಮ ಅತ್ತೆ ) ನನ್ನು ನಿಮ್ಮ ತಾಯಿಯೇ ಸಾಕಿರಬಹುದು. ಅವರಿಬ್ಬರ ಸಂಬಂಧ ಸುಮುಖವಾಗಿತ್ತೋ ಅಥವಾ ಮಲತಾಯಿ ಮಲಮಗಳ ವಿಚಿತ್ರ ರೀತಿಯಲ್ಲಿತ್ತೋ ಗೊತ್ತಿಲ್ಲ. ನಿಮ್ಮ ಅಕ್ಕ ಅವರ ಮದುವೆಯಾದ ನಂತರ ತಮ್ಮ ಮಕ್ಕಳಲ್ಲಿ ನಿಮ್ಮ ತಾಯಿಯ ಬಗ್ಗೆ ಮತ್ತು ಮಲ ತಮ್ಮನಾದ ನಿಮ್ಮ ಬಗ್ಗೆಯೂ ಯಾವ ಅಭಿಪ್ರಾಯಗಳನ್ನು ಮೂಡಿಸಿದ್ದಾರೋ ಗೊತ್ತಿಲ್ಲ.

    ಸ್ವಲ್ಪ ಕಡಿಮೆ ಬುದ್ಧಿಶಕ್ತಿಯಿರುವ ನಿಮ್ಮ ಹೆಂಡತಿ ತಮ್ಮ ಬಾಲ್ಯದ ಅಹಿತಕರವಾದ ವಿಷಯಗಳನ್ನು ಇನ್ನೂ ಮನಸ್ಸಿನಲ್ಲಿ ತುಂಬಿಕೊಂಡು ಈ ರೀತಿ ವರ್ತಿಸುತ್ತಿರಬಹುದು. ಏನೇ ಆದರೂ ಇದು ಅಸಹಜ ಮತ್ತು ಅನಾರೋಗ್ಯ ಮನಸ್ಸಿನ ವ್ಯಾಪಾರವೇ. ನಿಮ್ಮ ಮುಂದೆ ನಿಮ್ಮ ಮುಂದಿನ ಜೀವನವನ್ನು ಸುಗಮ ಮಾಡಿಕೊಳ್ಳಲು ಹಲವು ದಾರಿಗಳಿವೆ. ನಿಮ್ಮ ಹೆಂಡತಿಗೆ ಇಷ್ಟೊಂದು ಮಾನಸಿಕ ವ್ಯತ್ಯಯಗಳಿದ್ದರೂ ಬುದ್ಧಿವಂತ ಮಕ್ಕಳು ನಿಮಗಿದ್ದಾರೆ. ಅವರು ನಿಮಗೆ ಸಹಾಯಕವಾಗಿ ನಿಂತಿದ್ದಾರೆ. ಆದರೆ ಒಮ್ಮೆ ಯೋಚಿಸಿ. ಎಷ್ಟೇ ಕೆಟ್ಟವರಾದರೂ ನಿಮ್ಮ ಹೆಂಡತಿ ಅವರಿಗೆ ತಾಯಿಯಲ್ಲವೇ? ನೀವು ಈ ವಯಸ್ಸಿನಲ್ಲಿ ವಿಚ್ಛೇದನ ತೆಗೆದುಕೊಳ್ಳುವುದಾದರೆ ಮಕ್ಕಳ ಅಭಿಪ್ರಾಯವನ್ನೂ ಒಮ್ಮೆ ನೀವು ಕೇಳಬೇಕಲ್ಲವೇ? ಅವರೊಂದಿಗೂ ಮಾತನಾಡಿ ಈ ವಿಷಯವನ್ನು ನಿರ್ಧರಿಸಿ.

    ಮತ್ತೊಂದು ವಿಷಯವೆಂದರೆ, ನಿಮ್ಮ ಹೆಂಡತಿ ಕೆಟ್ಟವರೋ ಒಳ್ಳೆಯವರೋ ಆದರೂ ನಿಮ್ಮೊಡನೆ 20 ವರ್ಷಗಳ ಕಾಲ ಬದುಕಿದ ಮತ್ತು ನಿಮಗೆ ಇಬ್ಬರು ಮಕ್ಕಳನ್ನು ಹೆತ್ತುಕೊಟ್ಟ ಆ ಹೆಣ್ಣುಜೀವವನ್ನು ಒಮ್ಮೆಲೇ ವಿಚ್ಛೇದನವನ್ನು ಕೊಟ್ಟು ಹೊರಗೆ ಹಾಕಿದರೆ ಅವರು ಎಲ್ಲಿಗೆ ಹೋಗಬೇಕು? ಅವರ ಮುಂದಿನ ಜೀವನದ ಬಗ್ಗೆಯೂ ನೀವು ಯೋಚಿಸಬೇಕಾಗುತ್ತದೆ. ಮೂರನೆಯ ದಾರಿಯೂ ನಿಮಗಿದೆ. ನಿಮ್ಮ ಹೆಂಡತಿಗೆ ಮಕ್ಕಳಿಂದ ಹೇಳಿಸಿ, ಅಥವಾ ದೊಡ್ಡವರಿಂದ ಹೇಳಿಸಿ. ಪರಿಣಿತರಾದ ಮನೋವೈದ್ಯರ ಹತ್ತಿರ ತೋರಿಸಿನೋಡಿ.

    ಔಷಧಿ ಮತ್ತು ಥೆರಪಿಗಳ ಸಹಾಯದಿಂದ ಅವರ ಮಾನಸಿಕ ಆರೋಗ್ಯವನ್ನು ಸ್ವಲ್ಪಮಟ್ಟಿಗೆ ಹತೋಟಿಗೆ ತರಬಹುದು. ಇದನ್ನೂ ನೀವು ಪ್ರಯತ್ನಪೂರ್ವಕವಾಗಿ ಬಹಳ ಜಾಣತನದಿಂದ ನಿಭಾಯಿಸಬೇಕಾಗುತ್ತದೆ. ವಿಚ್ಛೇದನವೊಂದೇ ಎಲ್ಲಕ್ಕೂ ಪರಿಹಾರವಲ್ಲ. ನಿಮಗೆ 50ವರ್ಷ. ಈ ಕಾಲದಲ್ಲಿ ಈ ವಯಸ್ಸಿನಲ್ಲಿ ಮರುಮದುವೆಯಾಗುವುದೂ ಕಷ್ಟ. ಮತ್ತು ಇನ್ನು ಐದಾರುವರ್ಷಗಳಲ್ಲಿ ನಿಮ್ಮ ಮಕ್ಕಳು ತಮ್ಮ ನೆಲೆಗಳನ್ನು ಕಂಡುಕೊಂಡು ಹಕ್ಕಿಯ ಹಾಗೆ ಮನೆಯಿಂದ ಹಾರಿದರೆ ನೀವು ಒಂಟಿಯಾಗಿ ಹೇಗೆ ಬದುಕುತ್ತೀರಿ? ಈ ಬಗ್ಗೆಯೂ ನೀವು ಯೋಚಿಸಬೇಕಲ್ಲವೇ?

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಪತಿಗೆ ಗೊತ್ತಿಲ್ಲದಂತೆ ಆಗಾಗ್ಗೆ ನನ್ನನ್ನು ಸೇರಲು ಒಪ್ಪಿದ್ದಾಳೆ- ಇದು ತಪ್ಪೋ, ಸರಿಯೊ?

    ಉದ್ಯೋಗ- ಮದುವೆಯ ನಡುವೆ ಮನಸ್ಸು ಗೊಂದಲದ ಗೂಡಾಗಿದೆ- ಪ್ಲೀಸ್‌ ಪರಿಹಾರ ಹೇಳಿ…

    ಅವಳೇ ಸರ್ವಸ್ವ ಎಂದು ಎಲ್ಲಾ ಕೊಟ್ಟೆ: ಈಗ ನೋಡಿದ್ರೆ ನೀನು ಆರನೆಯವ ಅಂತಿದ್ದಾಳೆ- ನನಗ್ಯಾಕೆ ಈ ಶಿಕ್ಷೆ?

    ಒಂದೆಡೆ ಹೆತ್ತಾಕೆ… ಇನ್ನೊಂದೆಡೆ ಜೀವದ ಗೆಳತಿ… ಇಬ್ಬರನ್ನೂ ಒಟ್ಟಿಗೆ ಆಯ್ಕೆ ಮಾಡುವಂತಿಲ್ಲ: ಏನು ಮಾಡಲಿ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts