ಹೊಸ ಸರ್ಕಾರದಲ್ಲಿ ಎಫ್‌ಡಿಐ ನಿಯಮಗಳು ಇನ್ನಷ್ಟು ಸಡಿಲ: ಡಿಪಿಐಐಟಿ ಕಾರ್ಯದರ್ಶಿ ಇಂಗಿತ

cii
Published on

ನವದೆಹಲಿ: ಭಾರತವು ಇತ್ತೀಚೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳನ್ನು ಸಡಿಲಗೊಳಿಸಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇತರ ಕೆಲವು ಕ್ಷೇತ್ರಗಳಲ್ಲಿ ಮತ್ತಷ್ಟು ಎಫ್‌ಡಿಐ ಉದಾರೀಕರಣದ ಸಾಧ್ಯತೆಯಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತವು ಹಲವು ವಿಭಾಗಗಳಲ್ಲಿ ಎಫ್‌ಡಿಐ ನೀತಿಯನ್ನು ಉದಾರಗೊಳಿಸಿದೆ ಎಂದು ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯ (ಡಿಪಿಐಐಟಿ) ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

ಭಾರತವು ವಿಶ್ವದಲ್ಲೇ ಅತ್ಯಂತ ಉದಾರ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಗಳನ್ನು ಹೊಂದಿದೆ. ವಾಸ್ತವವಾಗಿ ಆಗ್ನೇಯ ಏಷ್ಯಾದ ಅನೇಕ ದೇಶಗಳಿಗಿಂತ ಹೆಚ್ಚು ಉದಾರವಾಗಿದೆ ಎಂದು ಅವರು ಹೇಳಿದರು.

ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ವಾರ್ಷಿಕ ವ್ಯಾಪಾರ ಶೃಂಗದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬಾಹ್ಯಾಕಾಶ ವಲಯದಲ್ಲಿ ಎಫ್‌ಡಿಐ ನಿಯಮಾವಳಿಗಳನ್ನು ಸಡಿಲಿಸಲಾಗಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಾವು ಉಳಿದಿರುವ ವಲಯಗಳಲ್ಲಿ ಮತ್ತಷ್ಟು ಉದಾರೀಕರಣಗೊಳಿಸಲು ಪ್ರಯತ್ನಿಸಬಹುದು ಎಂದರು.

ಸಾಗರೋತ್ತರ ಮತ್ತು ಖಾಸಗಿ ಕಂಪನಿಗಳನ್ನು ಆಕರ್ಷಿಸುವ ಪ್ರಯತ್ನವಾಗಿ, ಉಪಗ್ರಹಗಳ ಘಟಕಗಳನ್ನು ತಯಾರಿಸಲು 100 ಪ್ರತಿಶತದಷ್ಟು ಸಾಗರೋತ್ತರ ಹೂಡಿಕೆ ಅನುಮತಿಸುವ ಮೂಲಕ ಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ ಎಫ್​ಡಿಐ ಮಾನದಂಡಗಳನ್ನು ಸರಾಗಗೊಳಿಸಿದೆ. 2023ರ ಏಪ್ರಿಲ್-ಡಿಸೆಂಬರ್‌ನಲ್ಲಿ ಭಾರತದಲ್ಲಿ ಎಫ್‌ಡಿಐ ಶೇಕಡಾ 13 ರಷ್ಟು ಕುಸಿದು 32.03 ಶತಕೋಟಿ ಡಾಲರ್​ಗೆ (2,66,806 ಕೋಟಿ ರೂಪಾಯಿ) ಇಳಿದಿದೆ, ಸರ್ಕಾರಿ ಅಂಕಿಅಂಶಗಳ ಪ್ರಕಾರ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್, ಟೆಲಿಕಾಂ, ಆಟೋ ಮತ್ತು ಫಾರ್ಮಾ ವಲಯಗಳಲ್ಲಿ ಎಫ್​ಡಿಐ ಒಳಹರಿವು ಕಡಿಮೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net