ನಿನಗೆ ಯಾವ ಬೂಟಿನಲ್ಲಿ ಹೊಡೆಯಲಿ ಎಂದು ಕೇಳಿದ ನೆಟ್ಟಿಗನಿಗೆ ನಟಿ ರಶ್ಮಿ ಕೊಟ್ಟ ಉತ್ತರ ವೈರಲ್​!

Rashmi
Published on

ಹೈದರಾಬಾದ್​: ಟಾಲಿವುಡ್​ ಕಿರುತೆರೆ ಲೋಕದಲ್ಲಿ ನಿರೂಪಕಿ ಹಾಗೂ ನಟಿ ರಶ್ಮಿ ಗೌತಮ್​ ಅವರಿಗೆ ಸಖತ್​ ಕ್ರೇಜ್​ ಇದೆ. ತಮ್ಮ ಸೌಂದರ್ಯ, ನಟನೆ ಮತ್ತು ಆಕರ್ಷಕ ಮಾತುಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಾರೆ. ರಶ್ಮಿ ಅವರು ಜನಪ್ರಿಯ ರಿಯಾಲಿಟಿ ಶೋ ಜಬರ್ದಸ್ತ್ ಕಾರ್ಯಕ್ರಮದ ಮೂಲಕ ಜನಪ್ರಿಯ ಆ್ಯಂಕರ್ ಆಗಿ ಖ್ಯಾತಿ ಪಡೆದರು. ಅಲ್ಲದೆ, ಹಲವು ಸಿನಿಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡರು.

ರಶ್ಮಿ ಅವರು ಪ್ರಾಣಿ ಪ್ರೇಮಿಯೂ ಹೌದು. ಕರೊನಾ ಸಂದರ್ಭದಲ್ಲಿ ನಾಯಿಗಳಿಗೆ ಆಹಾರ, ನೀರು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ನಾಯಿಗೆ ಏನಾದರೂ ಆಪತ್ತು ಬಂದರೆ ಮೊದಲು ಮುಂದೆ ಬರುತ್ತಾರೆ. ಮೂಕ ಜೀವಿಗಳಿಗೆ ಹಿಂಸೆ ನೀಡುವವರ ಮೇಲೆ ಆಕ್ರೋಶ ಹೊರಹಾಕುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ, ಸಾಮಾಜಿಕ ಮತ್ತು ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ, ಅದಕ್ಕೆ ಕಾರಣರಾದವರ ವಿರುದ್ಧ ಧ್ವನಿ ಎತ್ತುತ್ತಾರೆ. ರಶ್ಮಿ ಅವರು ಸಸ್ಯಾಹಾರಿಯಾಗಿ ಬದಲಾಗಿದ್ದಾರೆ. ಯಾವುದೇ ರೂಪದಲ್ಲಿ ಜೀವಿಗಳಿಗೆ ಹಾನಿ ಮಾಡಬಾರದು ಎಂಬುದನ್ನು ಅವರು ನಂಬುತ್ತಾರೆ. ಹಾಲು, ಹಾಲಿನ ಉತ್ಪನ್ನಗಳು ಹಾಗೂ ಮೊಟ್ಟೆಯನ್ನು ರಶ್ಮಿ ತಿನ್ನುವುದಿಲ್ಲ. ಆದರೆ, ಮೂಕ ಜೀವಿಗಳನ್ನು ಬೆಂಬಲಿಸಿ ರಶ್ಮಿ ಅವರು ಮಾಡುವ ಕಾಮೆಂಟ್‌ಗಳು ಕೆಲವೊಮ್ಮೆ ಟ್ರೋಲ್ ಆಗುತ್ತವೆ.

ಕಳೆದ ವರ್ಷ ಹೈದರಾಬಾದ್‌ನಲ್ಲಿ ಬೀದಿ ನಾಯಿಗಳು ಬಾಲಕನೊಬ್ಬನ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದವು. ಈ ಘಟನೆಯಲ್ಲಿ ಬಾಲಕನ ಪೋಷಕರದ್ದೇ ತಪ್ಪು ಎಂದು ರಶ್ಮಿ ಗೌತಮ್ ವಾದಿಸಿದ್ದರು. ಈ ವೇಳೆ ರಶ್ಮಿಯನ್ನು ಕೆಟ್ಟದಾಗಿ ಟ್ರೋಲ್ ಮಾಡಲಾಗಿತ್ತು. ಅಲ್ಲದೆ, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋಹತ್ಯೆಯನ್ನು ವಿರೋಧಿಸಿ ವಿವಾದಕ್ಕೀಡಾಗಿದ್ದರು.

ಇತ್ತೀಚೆಗಷ್ಟೇ ರಶ್ಮಿ ಗೌತಮ್, ವ್ಯಕ್ತಿಯೊಬ್ಬ ಗೂಳಿಗೆ ಗುಂಡು ಹಾರಿಸುವ ವಿಡಿಯೋವನ್ನು ಶೇರ್ ಮಾಡಿ, ಇದು ಅತಿರೇಕದ ಸಂಗತಿಯಾಗಿದೆ. ಇಂತಹ ಘಟನೆಗಳು ನಡೆಯದಂತೆ ನಾವು ಏಕೆ ತಡೆಯಬಾರದು ಎಂದು ಪ್ರಶ್ನಿಸಿದ್ದರು. ಈ ವೇಳೆ ರಶ್ಮಿ ಪೋಸ್ಟ್‌ಗೆ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಬಾಲಕಿಯ ಮೇಲೆ ಅತ್ಯಾಚಾರ ನಡೆಯುತ್ತಿದೆ. ಬಟ್ಟೆಗಳನ್ನು ಬಿಚ್ಚಿಸಿ ಬೆತ್ತಲೆ ಮಾಡಿ, ಅತ್ಯಾಚಾರ ಎಸಗಿ ಕೊಲ್ಲುತ್ತಿದ್ದಾರೆ. ಇಂತಹ ದೌರ್ಜನ್ಯದ ಬಗ್ಗೆ ಮಾತನಾಡದ ನೀವು ಗೂಳಿ ಕೊಲ್ಲುವ ಬಗ್ಗೆ ಕಾಮೆಂಟ್​ ಮಾಡುತ್ತಿದ್ದೀರಿ. ನಿಮಗೆ ಯಾವ ಬೂಟಿನಿಂದ ಹೊಡೆಯಲಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದರು.

ನೆಟ್ಟಿಗನ ಕಾಮೆಂಟ್​ಗೆ ಉತ್ತರಿಸಿದ ರಶ್ಮಿ, ಇಂದು ಗೂಳಿಯನ್ನು ಕೊಂದವನು ನಾಳೆ ನಿಮ್ಮ ಮಕ್ಕಳನ್ನು ಕೊಲ್ಲುತ್ತಾನೆ. ಮನುಷ್ಯ ಮತ್ತು ಪ್ರಾಣಿ ಎಂಬ ಭೇದವನ್ನು ಮಾಡದೇ ಉತ್ತಮ ವ್ಯಕ್ತಿಯಾಗಿ ಎಂದು ತೀಕ್ಷ್ಣವಾಗಿ ಉತ್ತರಿಸಿದರು. ರಶ್ಮಿ ಗೌತಮ್ ಅವರ ಕಾಮೆಂಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net