ಶತಕ ಬಾರಿಸಿದ್ರೂ, ಗೆದ್ರೂ ಸುನೀಲ್​ ನಾರಾಯಣ್​ ನಗುವುದಿಲ್ಲ ಏಕೆ? ಅಸಲಿ ಕಾರಣ ಬಿಚ್ಚಿಟ್ಟ ಆಂಡ್ರೆ ರಸೆಲ್!

Sunil Narine
Published on

ನವದೆಹಲಿ: ಕೋಲ್ಕತ ನೈಟ್​ ರೈಡರ್ಸ್ (ಕೆಕೆಆರ್​)​ ತಂಡದ ಸ್ಫೋಟಕ ಆಟಗಾರ ಸುನೀಲ್​ ನಾರಾಯಣ್​, ಎದುರಾಳಿ ಬೌಲರ್​ಗಳತ್ತ ನೋಡದೆ ಹಿಗ್ಗಾಮುಗ್ಗಾ ದಾಳಿ ಮಾಡುವುದಷ್ಟೇ ತಿಳಿದಿದೆ. ಭಾನುವಾರವಷ್ಟೇ (ಏಪ್ರಿಲ್​ 05) ಲಖನೌ ಸೂಪರ್​ ಜೇಂಟ್ಸ್​ (ಎಲ್​ಎಸ್​ಜಿ) ವಿರುದ್ಧದ ಪಂದ್ಯದಲ್ಲಿ ಸುನೀಲ್​ ನಾರಯಣ್​​ ಅವರು ತಮ್ಮ ಸಾರ್ವತ್ರಿಕ ಫಾರ್ಮ್ ಅನ್ನು ತೋರಿದರು. ಈ ಸ್ಟಾರ್ ಆಟಗಾರ ಕೇವಲ 39 ಎಸೆತಗಳಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ 81 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದರು.

ಆದರೆ, ನಾರಯಣ್​ ಅವರು ಎಷ್ಟೇ ಶತಕ ಬಾರಿಸಲಿ ಅಥವಾ ವಿಕೆಟ್ ಪಡೆಯಲಿ ನಗುವುದೇ ಇಲ್ಲ. ನಕ್ಕರು ಅದು ತುಂಬಾ ವಿರಳ. ನಾರಾಯಣ್​ ನಗುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ಪ್ರಶ್ನೆ ಕೇಳಿದರೆ ಇಲ್ಲ ಎಂದು ಉತ್ತರಿಸುವವರೇ ಹೆಚ್ಚು. ಅಂದಹಾಗೆ ನಾರಾಯಣ್​ ನಗದೇ ಇರಲು ಕಾರಣವೂ ಇದೆ. ಆ ಕಾರಣ ಏನೆಂಬುದನ್ನು ಸಹ ಆಟಗಾರ ಆಂಡ್ರೆ ರಸೆಲ್ ಬಹಿರಂಗಪಡಿಸಿದ್ದಾರೆ.

ಕೆಕೆಆರ್​​ ತಂಡದ ಸ್ಟಾರ್ ಆಟಗಾರ ಸುನಿಲ್ ನಾರಾಯಣ್​ ಬೌಲಿಂಗ್ ಮಾತ್ರವಲ್ಲ, ಅವರ ವ್ಯಕ್ತಿತ್ವವೂ ಕೂಡ ಯಾರಿಗೂ ಅರ್ಥವಾಗುತ್ತಿಲ್ಲ. ಬ್ಯಾಟ್‌ನಲ್ಲಿ ಅಬ್ಬರಿಸಲಿ ಅಥವಾ ಬೌಲಿಂಗ್​ನಲ್ಲಿ ವಿಕೆಟ್​ಗಳನ್ನು ಉರುಳಿಸಲಿ ಅಥವಾ ತಮ್ಮ ತಂಡವು ಅದ್ಭುತ ವಿಜಯಗಳನ್ನು ಸಾಧಿಸುತ್ತಿರಲಿ ನಾರಾಯಣ್​ ಮುಖದಲ್ಲಿ ಮಾತ್ರ ಯಾವುದೇ ಭಾವನೆ ಇರುವುದಿಲ್ಲ. ತಂಡ ಎಂತಹ ಪರಿಸ್ಥಿತಿಯಲ್ಲಿದ್ದರೂ ಒಂದೇ ಮೂಡ್​ನಲ್ಲಿರುವುದು ನಾರಾಯಣ್​ ವಿಶೇಷ.

ಇದರ ನಡುವೆ ಕೆಕೆಆರ್ ತಂಡದ ಮ್ಯಾನೇಜ್​ಮೆಂಟ್, ನಾರಾಯಣ್​ ನಗದೇ ಇರಲು ಕಾರಣ ಹುಡುಕಲು ಪ್ರಯತ್ನಿಸಿದೆ. ಇದಕ್ಕಾಗಿ ಫಿಲ್ ಸಾಲ್ಟ್, ಯುವ ಆಟಗಾರ ರಘುವಂಶಿ ಮತ್ತು ಆಂಡ್ರೆ ರಸೆಲ್ ಜೊತೆ ಮ್ಯಾನೇಜ್​ಮೆಂಟ್​ ಚಿಟ್ ಚಾಟ್ ಮಾಡಿದ್ದು, ಇದರಲ್ಲಿ ಆಸಕ್ತಿದಾಯಕ ಕಾಮೆಂಟ್​ಗಳನ್ನು ಮಾಡಿದ್ದಾರೆ.

ನಾರಾಯಣ್​ ಓರ್ವ ಮೋಜಿನ ಆಟಗಾರ ಎಂದು ಫಿಲ್ ಸಾಲ್ಟ್ ಹೇಳಿದರೆ, ಅವರು ಡ್ರೆಸ್ಸಿಂಗ್ ರೂಂನಲ್ಲಿ ನಗುತ್ತಾರೆ ಎಂದು ಯುವ ಆಟಗಾರ ರಘುವಂಶಿ ಹೇಳಿದರು. ಆದರೆ, ಇವರಿಬ್ಬರಿಗಿಂತ ಆಂಡ್ರೆ ರಸೆಲ್​ ಕೊಂಚ ವಿಭಿನ್ನ ಹೇಳಿಕೆ ನೀಡಿದರು. ಅದೇನೆಂದರೆ, ನಾರಾಯಣ್​ ನಗುವುದನ್ನು ನಾವೆಲ್ಲ ನೋಡಬೇಕು. ಆದರೆ ಅದು ಸಂಭವಿಸಿದರೆ ಪವಾಡವೇ ಆಗುತ್ತದೆ. 500 ಪಂದ್ಯಗಳನ್ನು ಆಡಿ ದಣಿದ ಆಟಗಾರನಿಗೆ ನಗುವುದು ಸ್ವಲ್ಪ ಕಷ್ಟ. ಅದು ಕೂಡ ಸುನಿಲ್ ನಾರಾಯಣ್​ ಅವರಂತಹ ಆಟಗಾರನಿಗೆ ತುಂಬಾ ಕಷ್ಟ ಎಂದು ರಸೆಲ್​ ಹೇಳಿದರು.

ಇಲ್ಲಿ ಮತ್ತೊಂದು ಟ್ವಿಸ್ಟ್ ಏನೆಂದರೆ, ಡ್ರೆಸ್ಸಿಂಗ್ ರೂಂನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರನೆಂಬ ಪ್ರಶಸ್ತಿಯನ್ನು ಸ್ವೀಕರಿಸುವಾಗಲೂ ನಾರಾಯಣ್​ ನಗಲಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net