More

    ಇಂಡಿಗನತ್ತ ಪರಿಸ್ಥಿತಿ ತಿಳಿಯಾಗಲಿ

    ಹನೂರು: ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಘಟನೆಯಿಂದ ಮಂದಾರೆ ಹಾಗೂ ಇಂಡಿಗನತ್ತ ಗ್ರಾಮದ ಜನರಲ್ಲಿ ಕದಡಿರುವ ಶಾಂತಿ, ಸಹಬಾಳ್ವೆಯನ್ನು ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ತಿಳಿಗೊಳಿಸುವುದರ ಮೂಲಕ ಗ್ರಾಮದಲ್ಲಿ ಹಿಂದಿನ ವಾತಾವರಣ ಮರುಕಳಿಸುವ ಕೆಲಸವಾಗಬೇಕಿದೆ.


    ಮ.ಬೆಟ್ಟದಿಂದ 7 ಕಿ.ಮೀ. ದೂರದಲ್ಲಿರುವ ಇಂಡಿಗನತ್ತ ಗ್ರಾಮದಲ್ಲಿ ಬೇಡಗಂಪಣ ಸಮುದಾಯಕ್ಕೆ ಸೇರಿದ 132 ಕುಟುಂಬಗಳಿದ್ದು, 541 ಜನಸಂಖ್ಯೆಯನ್ನು ಹೊಂದಿದ್ದರೆ, ಸೋಲಿಗ ಸಮುದಾಯಕ್ಕೆ ಸೇರಿದ ಮೆಂದಾರೆ ಗ್ರಾಮದಲ್ಲಿ 63 ಕುಟುಂಬಗಳಿದ್ದು, 233 ಜನಸಂಖ್ಯೆಯನ್ನು ಹೊಂದಿದೆ. ಮ.ಬೆಟ್ಟ ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿರುವ ಈ 2 ಗ್ರಾಮಗಳು ಮಲೆಮಹದೇಶ್ವರ ವನ್ಯಜೀವಿ ವಲಯದ ಅರಣ್ಯ ಪ್ರದೇಶದೊಳಗಿವೆ. ಇಲ್ಲಿನ ಜನರು ಮುಖ್ಯವಾಗಿ ಕೃಷಿ ಹಾಗೂ ಕೂಲಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ.


    ಈ 2 ಗ್ರಾಮಗಳು ಸಮೀಪವೇ ಇರುವುದರಿಂದ ಜನರು ಮ.ಬೆಟ್ಟಕ್ಕೆ ಆಗಮಿಸಬೇಕಾದರೆ ಅರಣ್ಯ ಪ್ರದೇಶದಲ್ಲಿನ ಒಂದೇ ರಸ್ತೆಯಲ್ಲಿ ಸಾಗಬೇಕು. ಜತೆಗೆ ಇಂಡಿನಗತ್ತದಲ್ಲಿ ಅಂಗಡಿ, ಮುಂಗಟ್ಟುಗಳು ಇರುವುದರಿಂದ ಮೆಂದಾರೆ ಗ್ರಾಮದ ಜನರು ವ್ಯಾಪಾರ ನಡೆಸುತ್ತಿದ್ದರು. ಕಷ್ಟ, ಸುಖಗಳಲ್ಲಿ ಭಾಗಿಯಾಗುತ್ತಿದ್ದರು. ಸ್ನೇಹ, ಸೌಹಾರ್ದತೆ, ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದರು.


    ಮೂಲಸೌಕರ್ಯವನ್ನು ಪಡೆಯುವ ಸಂಬಂಧ ಈ ಭಾಗದ ಜನರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆಯೇ ವಿನಾ ಚುನಾವಣೆಯನ್ನು ಬಹಿಷ್ಕರಿಸುವ ಪ್ರಮೇಯವೆ ಇರಲಿಲ್ಲ. ಆದರೆ ಈ ಬಾರಿ ಇಂಡಿಗನತ್ತ ಗ್ರಾಮಸ್ಥರು ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಿದ್ದು, ಏ.26 ರಂದು ನಡೆದ ಚುನಾವಣೆಯಲ್ಲಿ ಮತಗಟ್ಟೆಯನ್ನೇ ಧ್ವಂಸಗೊಳಿಸಿದ್ದರು. ಇದರಿಂದ ಅಧಿಕಾರಿಗಳು ಹಾಗೂ ಮೆಂದಾರೆ ಗ್ರಾಮದ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 3 ಪ್ರತ್ಯೇಕ ದೂರಿನಲ್ಲಿ ಇಂಡಿಗನತ್ತ ಗ್ರಾಮದ 41 ಜನರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಈಗಾಗಲೇ ಪೊಲೀಸರು 30ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.


    ಬಂಧನದ ಭೀತಿಯಲ್ಲಿ ಊರನ್ನೇ ತೊರೆದಿದ್ದು ಅರಣ್ಯ ಪ್ರದೇಶದ ಹಾಗೂ ಸಂಬಂಧಿಕರ ಮನೆಯಲ್ಲಿದ್ದ ಬಹುತೇಕ ಜನರು ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರ ಆತ್ಮಸ್ಥೈರ್ಯದಿಂದ ಇದೀಗ ಗ್ರಾಮಕ್ಕೆ ಮರಳಿದ್ದಾರೆ. ಆದರೆ ಘಟನೆಯಿಂದಾಗಿ 2 ಗ್ರಾಮದ ಜನರಲ್ಲೂ ಈ ಹಿಂದೆ ಇದ್ದ ಸೌಹಾರ್ದ ಸಂಬಂಧ ಇದೀಗ ಮಂಕಾಗಿದೆ. ಆದ್ದರಿಂದ ಗ್ರಾಮದಲ್ಲಿ ಹಿಂದಿನ ವಾತಾವರಣ ಮರುಕಳುಹಿಸಬೇಕಾದರೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರ ಪಾತ್ರ ಮುಖ್ಯವಾಗಿದೆ.

    ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಕದಡಿತ್ತು. ಗ್ರಾಮದಲ್ಲಿದ್ದ ಜನರಲ್ಲಿ ಭಯದ ವಾತಾವರಣ ಮನೆ ಮಾಡಿತ್ತು. ಹಾಗಾಗಿ, ಗ್ರಾಮವನ್ನು ತೊರೆದಿದ್ದ ಜನರನ್ನು ಗ್ರಾಮಕ್ಕೆ ಕರೆತರುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿತ್ತು. ಹೀಗಾಗಿ ಸ್ಥಳೀಯ ಮುಖಂಡರ ಜತೆ ಅಧಿಕಾರಿಗಳು ಶಾಂತಿ ಸಭೆ ನಡೆಸಿ ಜನರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಜನರಲ್ಲಿ ಮನಸ್ತಾಪ ಇರುವ ಕಾರಣ ಎಂದಿನಂತೆ ಜೀವನ ನಡೆಸಲು ಸಾಧ್ಯವಾಗಿಲ್ಲ. ಹಾಗಾಗಿ ಜನರು ಇನ್ನೂ ಭಯದ ವಾತಾವರಣದಲ್ಲಿದ್ದಾರೆ. ಮೆಂದಾರೆ ಗ್ರಾಮದ ಗಿರಿಜನರು ಕೆಲಸ ಕಾರ್ಯಗಳ ನಿಮಿತ್ತ ಮ.ಬೆಟ್ಟಕ್ಕೆ ತೆರಳಲು ಇಂದಿಗೂ ಹೆದರುವಂತಾಗಿದೆ. ಹೀಗಾಗಿ ಬೇಡಗಂಪಣ ಮುಖಂಡ ಕೆ.ವಿ.ಮಾದೇಶ್ ಹಾಗೂ ಇನ್ನಿತರ ಸ್ಥಳೀಯ ಮುಖಂಡರು ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

    ಈಗಾಗಲೇ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಎಸಿ ಶಿವಮೂರ್ತಿ, ಡಿವೈಎಸ್ಪಿ ಧರ್ಮೇಂದ್ರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಲಾಗಿದ್ದು, ಇಂಡಿಗನತ್ತ ಗ್ರಾಮಕ್ಕೆ ಮರಳಿರುವ ಜನರಿಗೆ ಧೈರ್ಯ ತುಂಬಲಾಗಿದೆ. ಯಾವುದೇ ಕಾರಣಕ್ಕೂ ಅಹಿತಕರ ಘಟನೆಗಳು ಮರುಕಳುಹಿಸದಂತೆ ಸಲಹೆಯನ್ನು ನೀಡಲಾಗಿದ್ದು, ಎಂದಿನಂತೆ ಹೊಂದಿಕೊಂಡು ಜೀವನ ನಡೆಸಿಕೊಂಡು ಹೋಗುವಂತೆ ತಿಳಿಸಲಾಗಿದೆ. ಅಧಿಕಾರಿಗಳು ಸ್ಥಳೀಯ ಮುಖಂಡರ ಸಹಕಾರ ಪಡೆದು 2 ಗ್ರಾಮದ ಜನರನ್ನು ಒಟ್ಟಿಗೆ ಸೇರಿಸಿ ಶಾಂತಿ ಸಭೆಯನ್ನು ನಡೆಸುವುದರ ಮೂಲಕ ಇರುವ ವೈಮನಸ್ಸನ್ನು ತೊಡೆದು ಹಾಕಿ ಮನಸ್ಥಿತಿಯನ್ನು ಬದಲಾಯಿಸಬೇಕಿದೆ. ಜತೆಗೆ ಎಂದಿನಂತೆ ಅನ್ಯೋನ್ಯತೆಯಿಂದ ಜೀವನ ನಡೆಸುವಂತೆ ಮನವೊಲಿಸುವ ಕಾರ್ಯವಾಗಬೇಕಿದ್ದು, ಗ್ರಾಮದಲ್ಲಿ ಮೊದಲಿನ ರೀತಿಯ ವಾತಾವರಣವನ್ನು ಉಂಟು ಮಾಡಬೇಕಿದೆ.

    ಈ ಭಾಗದ ಜನರು ಹಲವು ದಶಕಗಳಿಂದಲೂ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಇನ್ನಿತರ ಅಗತ್ಯ ಮೂಲಸೌಕರ್ಯ ಕೊರತೆಯ ನಡುವೆಯೇ ಜೀವನ ನಡೆಸುತ್ತಿದ್ದಾರೆ. ಮೂಲಸೌಕರ್ಯ ಒದಗಿಸುವಂತೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಆದರೆ ಈವರೆಗೂ ಈ ಕಾರ್ಯವಾಗಿಲ್ಲ. ಗ್ರಾಮದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಬೇಕಾದರೆ ಈಗಲಾದರೂ ಮೂಲಸೌಕರ್ಯ ಒದಗಿಸುವುದು ಅಗತ್ಯವೂ ಅನಿವಾರ್ಯವೂ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts