

Nayanthara : ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ನಯನತಾರಾ ಆರಂಭದಲ್ಲಿ ಆ್ಯಂಕರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದವರು. ಸೌತ್ ಇಂಡಸ್ಟ್ರಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ಬಾಲಿವುಡ್ ಇಂಡಸ್ಟ್ರಿಯಲ್ಲೂ ಯಶಸ್ಸು ಗಳಿಸಿದ್ದಾರೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರು ನಯನತಾರಾ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಈಗಲೂ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಸಿನಿಮಾ ಅಂದಮೇಲೆ ವದಂತಿ ಹಾಗೂ ವಿವಾದ ಹೊಸದೇನಲ್ಲ. ನಯನತಾರಾ ಅವರು ಕೂಡ ಸಾಕಷ್ಟು ವಿವಾದಕ್ಕೆ ಈ ಹಿಂದೆ ಗುರಿಯಾಗಿದ್ದಾರೆ. ಅದರಲ್ಲಿ ಒಂದು ವಿವಾದ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ.
ವರ್ಷಗಳ ಹಿಂದೆ, ನಟ ಹಾಗೂ ಖ್ಯಾತ ನೃತ್ಯ ಸಂಯೋಜಕ ಪ್ರಭುದೇವ ಮತ್ತು ನಯನತಾರಾ ಸಂಬಂಧದಲ್ಲಿದ್ದರು. ಆದರೆ, ಆ ಸಮಯದಲ್ಲಿ ಪ್ರಭುದೇವ ಅವರು ಕಾನೂನುಬದ್ಧವಾಗಿ ಮದುವೆಯಾಗಿದ್ದರು. ಹೀಗಿದ್ದರು ಕೂಡ ನಯನತಾರಾ ಅವರು ಪ್ರಭುದೇವ ಅವರನ್ನು ಪ್ರೀತಿಸಿದ್ದು ಬಹಳಷ್ಟು ಟೀಕೆಗಳಿಗೆ ಕಾರಣವಾಯಿತು.
ತೀವ್ರ ವಿರೋಧದ ನಡುವೆಯೂ 2010ರ ಸೆಪ್ಟೆಂಬರ್ನಲ್ಲಿ ಪ್ರಭುದೇವ ಅವರು ನಯನತಾರಾ ಅವರನ್ನು ಮದುವೆಯಾಗುವುದಾಗಿ ಘೋಷಿಸಿದರು. ಅಲ್ಲದೆ, ತಮ್ಮ ಪತ್ನಿ ಲತಾ ಅವರಿಗೆ ವಿಚ್ಛೇದನ ಕೇಳಿರುವುದಾಗಿಯೂ ತಿಳಿಸಿದರು. ಈ ಘಟನೆ ಸಿನಿಮಾ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ಈ ವೇಳೆ ಲತಾ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಯನತಾರಾ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ನಮ್ಮ ವೈವಾಹಿಕ ಜೀವನ ನಾಶವಾಗಲು ನಯನತಾರಾ ಅವರೇ ಕಾರಣ ಎಂದು ಹೇಳಿದ್ದರು. ಪ್ರಭುದೇವ ಓಬ್ಬ ಪ್ರಾಮಾಣಿಕ ಮತ್ತು ದಯೆಯುಳ್ಳ ವ್ಯಕ್ತಿ. ನಯನತಾರಾ, ಪ್ರಭುದೇವ ಅವರನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಲತಾ ಆ ಸಮಯದಲ್ಲಿ ಆರೋಪಿಸಿದ್ದರು. ಇದು ಕಾಲಿವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡಿತ್ತು.
ಕಾನೂನುಬದ್ಧವಾಗಿ ಮದುವೆಯಾದ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಲು ಸಾಧ್ಯವಿಲ್ಲ. ನಮ್ಮ ಕಾನೂನು ಅದಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ. ನನ್ನ ಗಂಡನನ್ನು ನನ್ನಿಂದ ಕಸಿದುಕೊಳ್ಳಲು ಪ್ರಯತ್ನಿಸಿದ ನಯನತಾರಾ ಅವರನ್ನು ಬಂಧಿಸಬೇಕು. ನಾನೇನಾದರೂ ಅವಳನ್ನು ನೋಡಿದರೆ, ತಕ್ಷಣ ಅವಳ ಮುಖಕ್ಕೆ ಒದೆಯುತ್ತೇನೆ. ನಯನತಾರಾ ತುಂಬಾ ಕೆಟ್ಟ ಮಹಿಳೆ ಎಂದು ಲತಾ ಆ ಸಮಯದಲ್ಲಿ ಹೇಳಿದ್ದರು.
ಅಂದಹಾಗೆ, ತೀವ್ರ ವಿವಾದದ ಬಳಿಕ ಪ್ರಭುದೇವ ಮತ್ತು ಲತಾ 2010ರ ಜುಲೈನಲ್ಲಿ ಬೇರ್ಪಟ್ಟರು. ಇದಾದ ನಂತರ, ನಯನತಾರಾ ಮತ್ತು ಪ್ರಭುದೇವ ಅವರ ಸಂಬಂಧವೂ ಹದಗೆಟ್ಟಿತು. ಅವರಿಬ್ಬರು ಕೂಡ ಬೇರೆಯಾದರು. ಇದಕ್ಕೆ ನಿಜವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ನೆಟ್ಫ್ಲಿಕ್ಸ್ ಕಳೆದ ವರ್ಷದ ನಯನತಾರಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಿದ ನಯನತಾರಾ : ಬಿಯಾಂಡ್ ದಿ ಫೇರಿ ಟೇಲ್ ಹೆಸರಿನ ಡಾಕುಮೆಂಟರಿಯಲ್ಲಿ ತಮ್ಮ ಸಂಬಂಧದ ಬಗ್ಗೆ ಮಾತನಾಡಿದರು.
ಮದುವೆಯ ನಂತರ ಸಿನಿಮಾದಿಂದ ದೂರ ಉಳಿಯುವಂತೆ ಹೇಳಿದ್ದರು. ನಾನು ಕೂಡ ಸಿನಿ ಇಂಡಸ್ಟ್ರಿ ತೊರೆಯಲು ನಿರ್ಧರಿಸಿದೆ. ಏಕೆಂದರೆ, ನನಗೆ ಬೇರೆ ಆಯ್ಕೆಯೇ ಇರಲಿಲ್ಲ. ಮೊದಲ ಪ್ರೀತಿಯು ವಿಶ್ವಾಸಾರ್ಹ ಸಂಬಂಧವಾಗಿತ್ತು. ನಾನು ಅವನನ್ನು ಪ್ರೀತಿಸಿದಂತೆಯೇ ಆತನು ಕೂಡ ನನ್ನನ್ನು ಪ್ರೀತಿಸುತ್ತಾನೆ ಎಂಬ ನಂಬಿಕೆ ನನ್ನಲ್ಲಿತ್ತು. ಶ್ರೀರಾಮ ರಾಜ್ಯಂ ಚಿತ್ರೀಕರಣ ಮುಗಿದ ನಂತರ ನಾನು ತುಂಬಾ ಅಳುತ್ತಿದ್ದೆ. ನನ್ನ ಇಷ್ಟದ ವೃತ್ತಿಯನ್ನು ಬಿಟ್ಟುಬಿಡಬೇಕೆನ್ನುವ ಚಿಂತೆಯಲ್ಲಿದ್ದೆ. ಆದರೆ, ನಾನೆಂದಿಗೂ ಚಲನಚಿತ್ರಗಳನ್ನು ಬಿಡುವ ಬಗ್ಗೆ ಯೋಚಿಸಿರಲಿಲ್ಲ ಎಂದು ನಯನತಾರಾ ಹೇಳಿದ್ದಾರೆ.
2011 ರಲ್ಲಿ ತೆಲುಗು ಚಿತ್ರ ಶ್ರೀರಾಮ ರಾಜ್ಯಂ ಬಿಡುಗಡೆಯಾದ ನಂತರ ನಯನತಾರಾ ನಟನೆಯನ್ನು ತ್ಯಜಿಸಿ, ಪ್ರಭುದೇವರನ್ನು ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಅದೇ ಸಮಯದಲ್ಲಿ ನಯನತಾರಾ ವಿರುದ್ಧ ಪ್ರಭುದೇವ ಪತ್ನಿ ಹರಿಹಾಯ್ದಿದ್ದರು. ಅಲ್ಲದೆ, ಪ್ರಭುದೇವಗೆ ಡಿವೋರ್ಸ್ ಕೊಡಲು ನಿರಾಕರಿಸಿದ್ದರಿಂದ ಒತ್ತಡ ಹೆಚ್ಚಾಗಿ, ಇಬ್ಬರು ಬೇರೆಯಾಗಬೇಕಾಯಿತು ಎಂದು ನಯನತಾರಾ ಸಾಕ್ಷ್ಯಚಿತ್ರದಲ್ಲಿ ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್)