ಪಿಚ್​​ ಯಾವುದೇ ಇರಲಿ ಈತನೇ ಟೀಮ್​ ಇಂಡಿಯಾದ ಶ್ರೇಷ್ಠ ಆಟಗಾರ! ಆರ್​ಪಿ ಸಿಂಗ್​ ಅಚ್ಚರಿ ಹೇಳಿಕೆ | RP Singh

RP Singh
Published on

ಕಾನ್ಪುರ: ಇಲ್ಲಿನ ಗ್ರೀನ್​ ಪಾರ್ಕ್​ ಸ್ಟೇಡಿಯಂನಲ್ಲಿ ನಡೆದ ಭಾರತ (India) ಹಾಗೂ ಬಾಂಗ್ಲಾದೇಶ (Bangladesh) ನಡುವಿನ ಟೆಸ್ಟ್​ ಸರಣಿಯ (Test Series) ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಆತಿಥೇಯರು ಪ್ರವಾಸಿ ತಂಡದ ಎದುರು ಸಂಪೂರ್ಣ ಮೇಲುಗೈ ಸಾಧಿಸಿದ್ದು, ಸರಣಿಯನ್ನು ಗೆದ್ದು ಬೀಗಿದ್ದಾರೆ. ಪಾಕಿಸ್ತಾನದ ಎದುರು ಟೆಸ್ಟ್​ ಸರಣಿಯಲ್ಲಿ ಐತಿಹಾಸಿಕ ಜಯ ದಾಖಲಿಸಿ ಹುಮ್ಮಸ್ಸಿನಲ್ಲಿದ್ದ ಪ್ರವಾಸಿ ಬಾಂಗ್ಲಾ ತಂಡವನ್ನು ಬಗ್ಗು ಬಡಿಯುವಲ್ಲಿ ಭಾರತ ಯಶಸ್ವಿಯಾಗಿದ್ದು, ಅಕ್ಟೋಬರ್​ 06ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ (T20 Series) ತಯಾರಿ ಆರಂಭಿಸಿದೆ.

ಕಾನ್ಪುರದಲ್ಲಿ ಮಳೆಯಿಂದಾಗಿ 2 ದಿನಗಳ ಪಂದ್ಯ ರದ್ದಾದ ಕಾರಣ 2ನೇ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಬುಮ್ರಾ ಕೇವಲ 67 ರನ್​ ನೀಡಿ 6 ವಿಕೆಟ್ ಪಡೆದು ಗೆಲುವಿಗೆ ಪ್ರಮುಖ ಕಾರಣರಾದರು. ಟೀಮ್​ ಇಂಡಿಯಾದ 7 ವಿಕೆಟ್‌ಗಳಿಂದ ಬಾಂಗ್ಲಾ ಪಡೆಯನ್ನು ಮಣಿಸಿತು. ಇದರ ಬೆನ್ನಲ್ಲೇ ಭಾರತದ ಮಾಜಿ ಆಟಗಾರ ಆರ್‌.ಪಿ. ಸಿಂಗ್ ( RP Singh ), ಬುಮ್ರಾರನ್ನು ಕೊಂಡಾಡಿದ್ದಾರೆ.

ಇತ್ತೀಚಿಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಆರ್​.ಪಿ. ಸಿಂಗ್ ( RP Singh )​, ನಾವು ಸ್ಪರ್ಧೆಯ ಮೇಲೆ ಎಷ್ಟು ಪ್ರಭಾವ ಬೀರಬಹುದು ಎಂದು ಬುಮ್ರಾ ಅವರಿಗೆ ಚೆನ್ನಾಗಿ ತಿಳಿದಿದೆ. ಅವರಂತಹ ಬೌಲರ್ ಇಲ್ಲದೆ, ಭಾರತದ ಪರಿಸ್ಥಿತಿಯಲ್ಲಿ ಯಾವುದೇ ನಾಯಕ ಈ ರೀತಿಯ ಪಂದ್ಯವನ್ನು ಗೆಲ್ಲುವುದು ತುಂಬಾ ಕಷ್ಟ ಎಂದು ಹೇಳಿದರು.

ಮಾತು ಮುಂದುವರಿಸಿದ ಆರ್​.ಪಿ. ಸಿಂಗ್​, ನನ್ನ ಪ್ರಕಾರ ಬುಮ್ರಾ ಈ ಶತಮಾನದ ಅತ್ಯುತ್ತಮ ಮಧ್ಯಮ ವೇಗದ ಬೌಲರ್. ಯಾವುದೇ ಸಮಯದಲ್ಲಿ, ಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಸ್ವರೂಪದಲ್ಲಿ ಹಾಗೂ ಯಾವುದೇ ಪಿಚ್​ನಲ್ಲಿ ಚೆಂಡನ್ನು ಅವರಿಗೆ ನೀಡಿ. ನಾಯಕನಿಗೆ ಬೇಕಾದ ವಿಕೆಟ್‌ಗಳನ್ನು ಬುಮ್ರಾ ಸುಲಭವಾಗಿ ಕಬಳಿಸುತ್ತಾರೆ ಎಂದು ಆರ್​.ಪಿ. ಸಿಂಗ್​ ಕೊಂಡಾಡಿದರು.

ಟೆಸ್ಟ್ ರ್ಯಾಂಕಿಂಗ್ ಅಗ್ರಸ್ಥಾನಕ್ಕೆ ಮರಳಿದ ಬುಮ್ರಾ

ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಬೌಲರ್‌ಗಳ ರಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ನಲ್ಲಿ ಆರು ವಿಕೆಟ್ ಪಡೆದ ಬುಮ್ರಾ, ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. ಐಸಿಸಿ ಬುಧವಾರ ಬಿಡುಗಡೆಗೊಳಿಸಿದ ಟೆಸ್ಟ್ ಬೌಲರ್‌ಗಳ ಪರಿಷ್ಕೃತ ರ್ಯಾಂಕಿಂಗ್‌ನಲ್ಲಿ 30 ವರ್ಷದ ಜಸ್‌ಪ್ರೀತ್ ಬುಮ್ರಾ, 870 ರೇಟಿಂಗ್ ಪಾಯಿಂಟ್​ನೊಂದಿಗೆ ಅಗ್ರಸ್ಥಾನಕ್ಕೆ ಮರಳಿದರೆ, ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಆರ್.ಅಶ್ವಿನ್ 869 ಅಂಕದೊಂದಿಗೆ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಆಲ್​ರೌಂಡರ್ ರವೀಂದ್ರ ಜಡೇಜಾ 6ನೇ ಸ್ಥಾನ ಕಾಯ್ದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net