

ಭೋಪಾಲ್: ಮಹಿಳೆಯೊಬ್ಬಳು ಮೈದುನನ ಜತೆ ಪರಾರಿಯಾಗಿರುವ ( Woman Elope ) ಘಟನೆ ಮಧ್ಯಪ್ರದೇಶದ ಛತ್ತರ್ಪುರದಲ್ಲಿ ನಡೆದಿದೆ. ಪತ್ನಿಯ ನಡೆಯನ್ನು ಪ್ರಶ್ನಿಸಿದ ಪತಿಗೆ ಆಕೆ ಕೊಟ್ಟ ಉತ್ತರ ಕೇಳಿ ಆಘಾತಕ್ಕೆ ಓಳಗಾಗಿದ್ದಾನೆ.
ನಿನ್ನ ಸಹೋದರ ನಿನಗಿಂತಲೂ ಸ್ಫುರದ್ರೂಪಿ ಆಗಿರುವುದರಿಂದ ಆತನನ್ನು ಪ್ರೀತಿಸುತ್ತಿದ್ದೆ ಮತ್ತು ನನಗೆ ಸುಂದರವಾದ ಮಗು ಬೇಕಾಗಿರುವುದರಿಂದ ಆತನೊಂದಿಗೆ ಓಡಿ ಹೋಗಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ.
ಸಂತ್ರಸ್ತ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಓಡಿಹೋಗಿರುವ ವಿಚಾರದಲ್ಲಿ ಏನಾದರೂ ತೊಂದರೆ ಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮತ್ತು ನನ್ನನ್ನು ಆರೋಪಿಯನ್ನಾಗಿ ಮಾಡುವುದಾಗಿ ಪತ್ನಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ಆರೋಪಿಸಿದ್ದಾನೆ.
ಆಕೆ ಎಂದಿಗೂ ನನ್ನನ್ನು ಪ್ರೀತಿಸಲಿಲ್ಲ ಮತ್ತು ನನ್ನಿಂದ ಮಗುವನ್ನು ಬಯಸದೆ ನನ್ನನ್ನು ತೊರೆದಿದ್ದಾಳೆ. ನನ್ನ ತಮ್ಮ ಸ್ಫುರದ್ರೂಪಿ ಎಂಬ ಕಾರಣಕ್ಕೆ ಆತನೊಂದಿಗೆ ಓಡಿ ಹೋಗಿದ್ದಾಳೆ ಎಂದು ಸಂತ್ರಸ್ತ ಪತಿ ದೂರಿನಲ್ಲಿ ತಿಳಿಸಿದ್ದಾನೆ.
ಮದುವೆಯಾಗಿ 10 ವರ್ಷ ಕಳೆದಿವೆ. ಪತ್ನಿಯ ಮನಸ್ಸನ್ನು ಬದಲಾಯಿಸಲು ಪೂಜೆ-ಪುನಸ್ಕಾರಗಳಂತಹ ಸಾಕಷ್ಟು ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಪತ್ನಿಯಿಂದ ನನಗೆ ರಕ್ಷಣೆ ಕೊಡಿ, ಆಕೆಯಿಂದ ನಮಗೆ ನಿರಂತರ ಬೆದರಿಕೆಗಳು ಬರುತ್ತಿವೆ ಎಂದು ಸಂತ್ರಸ್ತ ಪತಿ ಮತ್ತು ಆತನ ಕುಟುಂಬ ಪೊಲೀಸರ ಮೊರೆ ಹೋಗಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಓಡಿಹೋಗಿರುವ ಪತ್ನಿ ಮತ್ತು ಮೈದುನನ ಪತ್ತೆಹಚ್ಚುತ್ತಿದ್ದಾರೆ. (ಏಜೆನ್ಸೀಸ್)