

ವಿಜಯವಾಡ: ಮದುವೆಯಾದ ಒಂದೇ ವಾರದಲ್ಲಿ ವಧುವೊಬ್ಬಳು ವರನಿಗೆ ಕೈಕೊಟ್ಟು ಪರಾರಿಯಾಗಿರುವ ( Bride ran away ) ಘಟನೆ ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ನಡೆದಿದೆ.
ಹಿಂದೂಪುರಂ ಮಂಡಲದ ರಾಚಪಲ್ಲಿ ಗ್ರಾಮದ ವೇಮರೆಡ್ಡಿ ಎಂಬ ವ್ಯಕ್ತಿಗೆ 40 ವರ್ಷ. ವಯಸ್ಸಾದ ಹಿನ್ನೆಲೆಯಲ್ಲಿ ಹಾಗೂ ತಂದೆ-ತಾಯಿಯ ಆಸೆಯನ್ನು ಈಡೇರಿಸುವ ಉದ್ದೇಶದಿಂದ ಪಕ್ಕದ ಗ್ರಾಮದ ದಲ್ಲಾಳಿಯೊಬ್ಬರನ್ನು ಸಂಪರ್ಕಿಸಿ, ವಧು ಹುಡುಕಲು ಮನವಿ ಮಾಡಿದ್ದರು. ಕೊನೆಗೆ ಭೀಮಾವರಂ ಸತ್ಯವತಿ ನಗರದ ಮಹಿಳೆಯೊಬ್ಬರನ್ನು ವಿವಾಹವಾದನು.
ವೇಮರೆಡ್ಡಿಗೆ ವಯಸ್ಸಾಗಿದ್ದನ್ನೇ ಬಂಡವಾಳ ಮಾಡಿಕೊಂಡ ದಲ್ಲಾಳಿ, ವರದಕ್ಷಿಣೆ ಬದಲು ವರನಿಂದಲೇ ಹಣ ವಸೂಲಿ ಮಾಡಲು ನಿರ್ಧರಿಸಿ, ನಿನಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ, ವಧು ದಕ್ಷಿಣೆ ಕೊಟ್ಟರೆ ಮಾತ್ರ ವಧು ಸಿಗುತ್ತಾಳೆ ಎಂದು ಬೇಡಿಕೆ ಇಟ್ಟನು. ಬೇಡಿಕೆಯಂತೆ ವಧು ದಕ್ಷಿಣೆ ನೀಡಲು ವೇಮರೆಡ್ಡಿ ಒಪ್ಪಿಕೊಂಡನು. ಆದರೆ, ದಲ್ಲಾಳಿ ತನಗೆ ಬಲೆ ಬೀಸಿದ್ದಾನೆ ಎಂಬ ಅರಿವು ವೇಮರೆಡ್ಡಿಗೆ ಇರಲಿಲ್ಲ.
ಮೊದಲೇ ಸ್ಕೆಚ್ ಹಾಕಿದ್ದ ದಲ್ಲಾಳಿ ಮದುವೆ ಸಮಾರಂಭಕ್ಕೂ ಮುನ್ನವೇ ವೇಮರೆಡ್ಡಿಯಿಂದ 4 ಲಕ್ಷ ರೂ. ವಸೂಲಿ ಮಾಡಿದ್ದ. ಇದಾದ ಬಳಿಕ ದೇವಸ್ಥಾನದಲ್ಲಿ ಮಹಿಳೆಯೊಬ್ಬಳೊಂದಿಗೆ ವೇಮರೆಡ್ಡಿ ಮದುವೆ ನಡೆಯಿತು. ದಲ್ಲಾಳಿ ಮತ್ತು ವಧು ಮೊದಲೇ ಪ್ಲಾನ್ ಮಾಡಿಕೊಂಡಿದ್ದರು. ಮದುವೆ ಬಳಿಕ ವೇಮರೆಡ್ಡಿ, ಪತ್ನಿಯೊಂದಿಗೆ ತವರು ರಾಚಪಲ್ಲಿ ತಲುಪಿದನು. ದೇವಸ್ಥಾನದಲ್ಲಿ ಮದುವೆ ನಡೆದಿದ್ದರಿಂದ ವೇಮರೆಡ್ಡಿ ತಂದೆ-ತಾಯಿ, ಬಂಧು ಮಿತ್ರರು, ಶಾಸ್ತ್ರೋಕ್ತವಾಗಿ ಮದುವೆ ನೆರವೇರಿಸಲು ಸಜ್ಜಾಗಿದ್ದರು. ಆದರೆ, ತನ್ನದೇ ಪ್ಲಾನ್ ಹೊಂದಿದ್ದ ವಧು, ಮದುವೆ ಆಗಲು ತಡಮಾಡುತ್ತಲೇ ಇದ್ದಳು. ಹೀಗೆ ಸುಮಾರು ಒಂದು ವಾರದವರೆಗೆ ಮದುವೆ ಮುಂದೂಡಿದಳು.
ಒಂದು ವಾರದ ನಂತರ, ವಧು ತನ್ನ ಪ್ಲಾನ್ ಅನ್ನು ಕಾರ್ಯರೂಪಕ್ಕೆ ತರಲು ಪ್ರಾರಂಭಿಸಿದಳು. ನನ್ನ ತಂದೆ-ತಾಯಿಗೆ ಹುಷಾರಿಲ್ಲ, ತಕ್ಷಣ ತನ್ನ ತವರು ಭೀಮಾವರಂಗೆ ಹೋಗಬೇಕೆಂದು ಒತ್ತಾಯಿಸಿದಳು. ನಿನಗೆ ತಂದೆ-ತಾಯಿ ಇರುವುದನ್ನು ಮದುವೆಗೆ ಮುಂಚೆಯೇ ಹೇಳಲಿಲ್ಲ ಎಂದು ವೇಮರೆಡ್ಡಿ ಕೇಳಿದನು. ಅಲ್ಲದೆ, ಕಳುಹಿಸಲು ನಿರಾಕರಿಸಿದನು. ಕಳುಹಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ನಿ ಹೆದರಿಸಿದಳು. ಇದರಿಂದ ವಿಚಲಿತನಾದ ವೇಮರೆಡ್ಡಿ, ಪತ್ನಿಯನ್ನು ಭೀಮಾವರಕ್ಕೆ ಕಳುಹಿಸಿದನು.
ಅಪ್ಪ-ಅಮ್ಮನನ್ನು ನೋಡಿ ಬರುತ್ತೇನೆಂದು ಹೇಳಿ ಹೋದ ಪತ್ನಿ ಮತ್ತೆ ಬಾರದಿದ್ದಾಗ, ವೇಮರೆಡ್ಡಿ ದಲ್ಲಾಳಿಗೆ ಕರೆ ಮಾಡಿದ್ದಾನೆ. ಆದರೆ, ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕೊನೆಗೆ ವೇಮರೆಡ್ಡಿ ಭೀಮಾವರಂಗೆ ಹೋಗಿ ವಿಚಾರಿಸಿದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಇದರಿಂದ ಆಘಾತಕ್ಕೆ ಒಳಗಾದ ವೇಮರೆಡ್ಡಿ, ದೂರು ದಾಖಲಿಸಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. (ಏಜೆನ್ಸೀಸ್)