

ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೆ.29ರಿಂದ ತನ್ನ 11ನೇ ಸೀಸನ್ ಶುರು ಮಾಡಿದೆ. ಮೊದಲ ದಿನದಿಂದಲೇ ಸ್ಪರ್ಧಿಗಳ ಹೈಡ್ರಾಮ ಶುರುವಾಗಿದ್ದು, ದಿನದಿಂದ ದಿನಕ್ಕೆ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸುತ್ತಿದೆ. ಅದರಲ್ಲೂ ಲಾಯರ್ ಜಗದೀಶ್ ಅವರು ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದಾರೆ. ಇದೀಗ ಬಿಗ್ಬಾಸ್ ವಿರುದ್ಧವೇ ಲಾಯರ್ ಜಗದೀಶ್ ತಿರುಗಿಬಿದ್ದಿದ್ದಾರೆ. ಇದರ ಬೆನ್ನಲ್ಲೇ ಜಗದೀಶ್ ವಿರುದ್ಧ ಬಿಗ್ಬಾಸ್ ಸೀಸನ್ 9ರ ಸ್ಫರ್ಧಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ( Prashanth Sambargi ) ಕಿಡಿಕಾರಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಸದ್ಯ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಜಗದೀಶ್ ಗುಡುಗಿದ್ದಾರೆ. ನನಗೆ ಇಲ್ಲಿ ಇರುವುದಕ್ಕೆ ಇಷ್ಟವಿಲ್ಲ. ನಾನು ಶೋ ಬಿಡುತ್ತೇನೆ. ಈ ಕ್ಷಣ ಮನಸ್ಸು ಮಾಡಿದರು ಇಲ್ಲಿಗೆ ಹೆಲಿಕಾಪ್ಟರ್ ತರಿಸುವ ಕೆಪಾಸಿಟಿ ನನಗಿದೆ. ನಾನೇನಾದ್ರು ಆಚೆ ಹೋದ್ರೆ ಎಲ್ಲವನ್ನು ಬಹಿರಂಗಪಡಿಸುತ್ತೇನೆ. ಈ ಶೋ ಹಾಳು ಮಾಡಿಲ್ಲ ಅಂದ್ರೆ ಕೇಳಿ. ಬಿಗ್ಬಾಸ್ ನಾನು ನಿಮ್ಮನ್ನು ಎಕ್ಸ್ಪೋಸ್ ಮಾಡುತ್ತೇನೆ. ಕರ್ನಾಟಕದಲ್ಲಿ ನನ್ನನ್ನು ಎದುರುಹಾಕಿಕೊಂಡು ಶೋ ನಡೆಸುವುದಕ್ಕೆ ಆಗುತ್ತಾ? ಎಂದು ಲಾಯರ್ ಜಗದೀಶ್ ಬಿಗ್ಬಾಸ್ಗೆ ನೇರ ಸವಾಲು ಹಾಕಿದ್ದಾರೆ. ಯಾವ ಕಾರಣಕ್ಕೆ ಈ ಸವಾಲು ಹಾಕಿದ್ದಾರೆ ಎಂಬುದು ಇಂದಿನ ಎಪಿಸೋಡ್ನಲ್ಲಿ ಗೊತ್ತಾಗಲಿದೆ.
ಲಾಯರ್ ಜಗದೀಶ್ ಬಿಗ್ಬಾಸ್ ಮನೆಯೊಳಗೆ ಕಿರುಚಾಡಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿರುವ ಬೆನ್ನಲ್ಲೇ ಪ್ರಶಾಂತ್ ಸಂಬರಗಿ ಜಗದೀಶ್ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ, ಇನ್ನು ಮುಂದೆ ಲಾಯರ್ ಜಗದೀಶ್ ಎಂದು ಕರೆಯಬೇಡಿ ಎಂದಿದ್ದಾರೆ. ಬಿಗ್ಬಾಸ್ ಜಗದೀಶನ ಕಾನೂನು ಪದವಿ ರದ್ದಾಗಿದೆ. ಆತನ ದ್ವಿತೀಯ ಪಿಯುಸಿ ಅಂಕಪಟ್ಟಿ ನಕಲಿ ಆಗಿರುವುದರಿಂದ, ನಂತರದ ಪದವಿಗಳು (ಕಾನೂನು ಡಿಗ್ರಿ ಸೇರಿ) ಮಾನ್ಯವಲ್ಲದಿದ್ದುದರಿಂದ ಆತನ ಸನ್ನದ್ದು ವಾಪಾಸ್ ಕೊಡುವಂತೆ ಬಾರ್ ಕೌನ್ಸಿಲ್ ಆದೇಶ ನೀಡಿದೆ. ಆತನನ್ನು ವಕೀಲ್ ಸಾಹೇಬ್ ಎಂದು ಕರೆಯಬೇಡಿ. ಆ ರೀತಿ ಕರೆದರೆ ವಕೀಲರಿಗೆ ಅವಮಾನ ಮಾಡಿದಂತೆ ಎಂದು ಪ್ರಶಾಂತ್ ಸಂಬರಗಿ ಕಿಡಿಕಾರಿದ್ದಾರೆ. ಅಲ್ಲದೆ, ಬಾರ್ ಕೌನ್ಸಿಲ್ ನೀಡಿರುವ ಸುತ್ತೋಲೆಯ ಫೋಟೋವನ್ನು ಸಹ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪ್ರಶಾಂತ್ ಸಂಬರಗಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಚಾರವೂ ಕೂಡ ಭಾರಿ ಚರ್ಚೆಯಾಗುತ್ತಿದೆ.
ಸ್ವರ್ಗದಲ್ಲಿರುವ ಸ್ಪರ್ಧಿಗಳಿಗೆ ಲಕ್ಷುರಿ ಐಟಂಗಳನ್ನು ನೀಡಲಾಗಿತ್ತು. ನಿಯಮದ ಪ್ರಕಾರ ಇದನ್ನು ನರಕದಲ್ಲಿರುವವರಿಗೆ ಕೊಡಬಾರದು ಎಂದು ಹೇಳಲಾಗಿತ್ತು. ಇದರ ಹೊರತಾಗಿಯೂ ಜಗದೀಶ್ ನರಕದಲ್ಲಿರುವವರಿಗೆ ನಿಯಮ ಉಲ್ಲಂಘಿಸಿ ಕೆಲವು ವಸ್ತುಗಳನ್ನು ನೀಡಿದ್ದಾರೆ. ಇದನ್ನು ನೋಡಿದ ಬಿಗ್ಬಾಸ್ ಮನೆಯಲ್ಲಿದ ದಿನಸಿ ಸಾಮಗ್ರಿ, ಹಣ್ಣು-ಹಂಪಲುಗಳನ್ನು ಹಿಂದಿರುಗಿಸಿ ಕೊಡುವಂತೆ ಆದೇಶ ಕೊಟ್ಟಿದ್ದರು. ಎಲ್ಲರೂ ಮೊದಲಿಗೆ ಜಗದೀಶ್ ಅವರು ಬಿಸಿನೀರು ಕೊಟ್ಟ ಕಾರಣದಿಂದ ಈಗಾಯ್ತು ಎಂದು ಭಾವಿಸಿದ್ದರು. ಆದರೆ, ಅಲ್ಲಿ ಬೇರೆಯೇ ನಡೆದಿತ್ತು. ಈ ವಿಚಾರವಾಗಿ ಸ್ಫರ್ಧಿಗಳು ಜಗದೀಶ್ ಅವರಿಗೆ ಛೀಮಾರಿ ಹಾಕಿದ್ದರು. ಇದೀಗ ವಕೀಲ ಜಗದೀಶ್ (Lawyer Jagadish) ಬಿಗ್ಬಾಸ್ (BiggBoss) ತೊರೆಯುವ ನಿರ್ಧಾರಕ್ಕೆ ಬಂದಿದ್ದು, ಮನೆಯಿಂದ ಹೊರಬಂದ ಬಳಿಕ ಕಾರ್ಯಕ್ರಮವನ್ನು ಬಂದ್ ಮಾಡಿಸುವುದಾಗಿ ಕ್ಯಾಮರಾ ಮುಂದೆಯೇ ಹೇಳಿದ್ದಾರೆ. ಈ ಬಗ್ಗೆ ಕಾರಣವನ್ನು ಉಲ್ಲೇಖಿಸಿರುವ ಜಗದೀಶ್ ಬಿಗ್ಬಾಸ್ ನಡೆಯನ್ನು ಖಂಡಿಸಿದ್ದಾರೆ. ಟಾಸ್ಕ್ ಮುಗಿದ ಬಳಿಕ ಈ ರೀತಿ ಕೆಲಸ ಮಾಡಿಸೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಮುಖವಾಡ ಹಾಕ್ಕೊಂಡು ಜೀವನ ಮಾಡ್ತಿದ್ದಾರೆ. ಒಬ್ಬ 16 ಜನರನ್ನು ಡಿಫೆಂಡ್ ಮಾಡ್ತಾನೆ. ಮೀಸೆ ಇಟ್ಟೋನು ಯಾರೇ ಇರ್ಬೋದು, ಇದುವರೆಗೆ ಬಿಟ್ಟಿಲ್ಲ. ನನಗೆ ಘನತೆ ಗೌರವ ಆಚೆ ಕಡೆ ಚೆನ್ನಾಗಿಯೇ ಇದೆ. ನನಗೆ ನಾನೇ ಬಿಗ್ಬಾಸ್. ನನ್ನನ್ನು ಹೊರಗೆ ಕಳಿಸೋದು ಬೆಸ್ಟ್ ಎಂದು ಹೇಳಿ ಹೊರನಡೆದಿದ್ದಾರೆ.
ಅಂದಹಾಗೆ ಈ ಬಾರಿಯ ಬಿಗ್ಬಾಸ್ ಶೋನಲ್ಲಿ ಸ್ವರ್ಗ-ನರಕ ಎಂಬ ಥೀಮ್ನಲ್ಲಿ ಮನೆಯನ್ನು ವಿಂಗಡಿಸಲಾಗಿದೆ. ಸ್ವರ್ಗದಲ್ಲಿ ಸ್ವರ್ಧಿಗಳಾದ ಭವ್ಯ ಗೌಡ, ಯಮುನಾ ಶ್ರೀನಿಧಿ, ಧನರಾಜ್ ಆಚಾರ್, ಗೌತಮಿ ಜಾಧವ್, ಧರ್ಮ ಕೀರ್ತಿರಾಜ್, ವಕೀಲ ಜಗದೀಶ್, ತ್ರಿವಿಕ್ರಮ್, ಹಂಸ ಪ್ರತಾಪ್, ಐಶ್ವರ್ಯ ಸಿಂಧೋಗಿ ಮತ್ತು ಉಗ್ರಂ ಮಂಜು ನಿವಾಸಿಗಳಾಗಿದ್ದಾರೆ. ನರಕದಲ್ಲಿ ಸ್ಪರ್ಧಿಗಳಾದ ಅನುಷಾ ರೈ, ಶಿಶಿರ್ ಶಾಸ್ತ್ರಿ, ಮಾನಸ ಸಂತೋಷ್, ಗೋಲ್ಡ್ ಸುರೇಶ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಮತ್ತು ರಂಜಿತ್ ನಿವಾಸಿಗಳಾಗಿದ್ದಾರೆ.