

Jemimah Rodrigues: ನಿನ್ನೆ (ಅ.30) ಆಸೀಸ್ ವಿರುದ್ಧದ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 339 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾ, ಐದು ವಿಕೆಟ್ಗಳಿಂದ ರೋಚಕ ಜಯ ಸಾಧಿಸಿತು. ಈ ನಿರ್ಣಾಯಕ ಪಂದ್ಯದಲ್ಲಿ ಭಾರತ ಪರ ಅಖಾಡಕ್ಕಿಳಿದ ಜೆಮಿಮಾ ರೊಡ್ರಿಗಸ್ ಭರ್ಜರಿ ಶತಕ (ಅಜೇಯ 127 ರನ್, 134 ಎಸೆತಗಳಲ್ಲಿ) ದಾಖಲಿಸುವ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದಾರೆ.
ಶತಕದಾಟ ತೋರಿದ ರೊಡ್ರಿಗಸ್ಗೆ ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ, ಪ್ರಶಂಸೆಗಳು ಹರಿದುಬರುತ್ತಿವೆ. ಜಮಿಮಾ ಮತ್ತು ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ (88 ಎಸೆತಗಳಲ್ಲಿ, 89 ರನ್) ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಸೀಸ್ ವಿರುದ್ಧದ ಗೆಲುವಿನೊಂದಿಗೆ ಫೈನಲ್ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿರುವ ಭಾರತ, ಅಂತಿಮ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟ್ರೋಫಿಗಾಗಿ ಸೆಣಸಲಿದೆ.
ಕೇವಲ ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ಗೆ ಮಾತ್ರ ಸೀಮಿತವಾಗದ ರೊಡ್ರಿಗಸ್, ಅಖಾಡದ ಹೊರಗೆ ಗಳಿಕೆಯ ಮೂಲಕವೂ ಹಲವರ ಗಮನ ಸೆಳೆಯುತ್ತಿದ್ದಾರೆ. 25 ವರ್ಷ ವಯಸ್ಸಿನ ಜೆಮಿಮಾ ರೊಡ್ರಿಗಸ್, ಕ್ರಿಕೆಟ್ ಜತೆ ಜತೆಗೆ ಹೆಚ್ಚಿನ ಆದಾಯವನ್ನು ಸಂಪಾದಿಸುತ್ತಿದ್ದಾರೆ. ಅಷ್ಟಕ್ಕೂ ಅವರ ಗಳಿಕೆ ಎಷ್ಟಿದೆ? ಒಟ್ಟು ನಿವ್ವಳ ಆಸ್ತಿ ಮೌಲ್ಯವೆಷ್ಟು? ಎಂಬುದರ ವಿವರ ಹೀಗಿದೆ ಗಮನಿಸಿ.
ಜೆಮಿಮಾ ರೊಡ್ರಿಗಸ್ ಬಿಸಿಸಿಐ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ಬಿ ಗ್ರೇಡ್‌ನಲ್ಲಿದ್ದಾರೆ. ಬಿಸಿಸಿಐ ಅವರಿಗೆ ವಾರ್ಷಿಕ 30 ಲಕ್ಷ ರೂ. ಸಂಬಳವನ್ನು ನೀಡುತ್ತದೆ. ಇದರಲ್ಲಿ ಪಂದ್ಯ ಶುಲ್ಕವನ್ನು ಸಹ ಸೇರಿಸಲಾಗುತ್ತದೆ. ಅವರು ಒಂದು ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಒಂದು ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಮತ್ತು ಟಿ20 ಪಂದ್ಯಕ್ಕೆ 3 ಲಕ್ಷ ರೂ. ಆದಾಯವನ್ನು ಪಡೆಯುತ್ತಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಜೆಮಿಮಾ. 2.2 ಕೋಟಿ ರೂ.ಗೆ ಫ್ರಾಂಚೈಸಿಯಲ್ಲಿ ಉಳಿದಿದ್ದಾರೆ.
ಇದರೊಂದಿಗೆ ಹುಂಡೈ, ಜಿಲೆಟ್, ರೆಡ್ ಬುಲ್, ಡ್ರೀಮ್ 11 ಮತ್ತು ಪ್ಲಾಟಿನಂ ಎವಾರಾ ಮುಂತಾದ ಹೆಸರಾಂತ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ. ವಿವಿಧ ವರದಿಗಳ ಪ್ರಕಾರ, ಜೆಮಿಮಾ ರೊಡ್ರಿಗಸ್ ಅವರ ನಿವ್ವಳ ಮೌಲ್ಯವು 2025ರಲ್ಲಿ 8 ಕೋಟಿಯಿಂದ 15 ಕೋಟಿ ರೂ.ಗೆ ತಲುಪಿದೆ ಎಂದು ಅಂದಾಜಿಸಲಾಗಿದೆ,(ಏಜೆನ್ಸೀಸ್).