ರೋಡ್ರಿಗಸ್ ಭರ್ಜರಿ ಶತಕ, ಕೌರ್​ ಮಿಂಚಿನಾಟ! ಆಸೀಸ್​ಗೆ ಸೋಲುಣಿಸಿ ವಿಶ್ವಕಪ್​ ಫೈನಲ್​ಗೇರಿದ ಭಾರತ | IND vs AUS Womens

ರೋಡ್ರಿಗಸ್ ಭರ್ಜರಿ ಶತಕ, ಕೌರ್​ ಮಿಂಚಿನಾಟ! ಆಸೀಸ್​ಗೆ ಸೋಲುಣಿಸಿ ವಿಶ್ವಕಪ್​ ಫೈನಲ್​ಗೇರಿದ ಭಾರತ | IND vs AUS Womens
Published on

ಮುಂಬೈ: ಇಂದು (ಅ.30) ನವಿ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ (IND vs AUS Womens) ನಡುವಿನ ಮಹಿಳಾ ಏಕದಿನ ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಐದು ವಿಕೆಟ್​ಗಳಿಂದ ಭರ್ಜರಿ ಜಯ ದಾಖಲಿಸಿತು.

ಸತತ ಮೂರು ಪಂದ್ಯಗಳಲ್ಲಿ ಸೋತಿದ್ದ ಹರ್ಮನ್‌ಪ್ರೀತ್ ಕೌರ್​ ಪಡೆ, ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು. ಮತ್ತೊಂದೆಡೆ, ಆಸೀಸ್ ಒಂದೇ ಒಂದು ಪಂದ್ಯವನ್ನು ಸೋಲದೆ ಅಜೇಯವಾಗಿ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದ್ದನ್ನು ಕಂಡ ಹಲವರು, ಗೆಲುವು ಆಸೀಸ್​ನದ್ದೇ ಎಂದು ಮುಂಚಿತವಾಗಿಯೇ ಊಹಿಸಿದ್ದರು. ಆದರೆ, ಲೆಕ್ಕಾಚಾರಗಳು ತಿರುಗಿದ್ದು, ವಿಶ್ವಕಪ್ ಭರವಸೆ ಜೀವಂತವಾಗಿರಿಸುವಲ್ಲಿ ಕಡೆಗೂ ಟೀಮ್ ಇಂಡಿಯಾ ಸಫಲವಾಗಿದೆ.

ರೋಡ್ರಿಗಸ್ ಭರ್ಜರಿ ಶತಕ

ನಾಯಕಿ ಹರ್ಮನ್​ಪ್ರೀತ್​ ಕೌರ್ (89 ರನ್​) ಮತ್ತು ಜೆಮಿಮಾ ರೋಡ್ರಿಗಸ್ ಅವರ ಅಬ್ಬರದ ಶತಕದಾಟ (ಅಜೇಯ 127 ರನ್​) ಆಸೀಸ್​ ತಂಡಕ್ಕೆ ಸೋಲಿನ ರುಚಿ ಉಣಿಸಿದರು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಪಡೆಯನ್ನು ಬಗ್ಗುಬಡಿಯುವ ಮೂಲಕ ಇದೀಗ ಭಾರತ ಏಕದಿನ ವಿಶ್ವಕಪ್​ನ ಫೈನಲ್​ಗೆ ಎಂಟ್ರಿಕೊಟ್ಟಿದೆ. ಈ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕೌರ್ ಪಡೆ ಎದುರಿಸಲಿದೆ.

ಆಸೀಸ್​ ಬೃಹತ್ ಗುರಿ, ಭಾರತ ಕಳಪೆ ಫೀಲ್ಡಿಂಗ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್​, 49.5 ಓವರ್​ಗೆ 338ಕ್ಕೆ ಆಲ್​ಔಟ್ ಆಯಿತು. ಎಂದಿನಂತೆ ಇಂದಿನ ಪಂದ್ಯದಲ್ಲಿಯೂ ಟೀಮ್ ಇಂಡಿಯಾದ ಫೀಲ್ಡಿಂಗ್ ತೀರ ಕಳಪೆಯಾಗಿತ್ತು. ಬೌಲಿಂಗ್​ನಲ್ಲಿ ಮುಗ್ಗರಿಸಿದ ಕೌರ್ ಪಡೆ, ಫೀಲ್ಡಿಂಗ್​ನಲ್ಲಿ ಹೆಚ್ಚುವರಿ ರನ್​ಗಳ ಕೊಡುಗೆ ನೀಡಿತು. ಓವರ್​ ಥ್ರೋ, ಕೈಬಿಟ್ಟ ಕ್ಯಾಚ್​ಗಳು, ಪದೇ ಪದೇ ಮಿಸ್​ ಫೀಲ್ಡಿಂಗ್ ಆಸೀಸ್​ ತಂಡದ ಮೊತ್ತವನ್ನು ಸುಲಭವಾಗಿ 300ರ ಗಡಿದಾಟಲು ಸಹಾಯ ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net