ಸಮಂತಾಗೆ ಸಿಕ್ಕ ಸಿನಿಮಾಗಳು ರಶ್ಮಿಕಾ ಪಾಲು? ಅಂದು ಬಾಲಿವುಡ್​, ಇಂದು ಟಾಲಿವುಡ್​! Rashmika Mandanna

ಸಮಂತಾಗೆ ಸಿಕ್ಕ ಸಿನಿಮಾಗಳು ರಶ್ಮಿಕಾ ಪಾಲು? ಅಂದು ಬಾಲಿವುಡ್​, ಇಂದು ಟಾಲಿವುಡ್​! Rashmika Mandanna
Published on

ಬೆಂಗಳೂರು: ಈ ಚಿತ್ರದಲ್ಲಿ ಇವರೇ ನಟಿಸಬೇಕು ಎಂದು ಆರಂಭದಲ್ಲಿ ಫಿಕ್ಸ್ ಆಗಿದ್ದೇ ಆದರೂ ನಂತರದಲ್ಲಿ ಆ ಅವಕಾಶಗಳು ಮತ್ತೊಬ್ಬರಿಗೆ ಹೋಗುವುದು ಚಿತ್ರರಂಗದಲ್ಲಿ ತೀರ ಸಾಮಾನ್ಯ ( Rashmika Mandanna ). ಅದು ಕಲಾವಿದರ ಒಪ್ಪಿಗೆ, ದಿನಾಂಕ ಸಮಸ್ಯೆ, ಸಂಭಾವನೆ ನಿರಾಕರಣೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾರಣವಾಗಿರಬಹುದು. ಆದರೆ, ಇತ್ತೀಚೆಗೆ ಟಾಲಿವುಡ್​ ಬ್ಯೂಟಿ ಸಮಂತಾ ಅವರ ಸಿನಿಮಾಗಳು ರಶ್ಮಿಕಾ ಮಂದಣ್ಣ ಪಾಲಾಗುತ್ತಿವೆ ಎಂಬ ಮಾತುಗಳು ಸದ್ಯ ಟಾಲಿವುಡ್​ ಅಂಗಳದಲ್ಲಿ ಹರಿದಾಡಿವೆ.

ಒಂದು ಕಾಲದಲ್ಲಿ ಸ್ಟಾರ್ ಹೀರೋಯಿನ್​ ಆಗಿ ಮಿಂಚಿದ ಸಮಂತಾ, ತಮಿಳು ಮತ್ತು ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್​ಹಿಟ್​ ಚಿತ್ರಗಳನ್ನೇ ನೀಡಿದ್ದಾರೆ. ಆದರೆ, ಅಪರೂಪದ ಕಾಯಿಲೆ ದೇಹದಲ್ಲಿ ಪತ್ತೆಯಾದ ಬಳಿಕ ಸಮಂತಾ ನಟನೆಯಿಂದ ಹಂತ ಹಂತವಾಗಿ ದೂರ ಉಳಿದರು. ಈ ಮಧ್ಯೆಯೂ, ಒಪ್ಪಿಕೊಂಡ ಸಿನಿಮಾ ಮತ್ತು ಸರಣಿಯನ್ನು ಮುಗಿಸಿಕೊಟ್ಟರು.

ಮತ್ತೊಂದೆಡೆ, ಪ್ಯಾನ್ ಇಂಡಿಯಾ ನಾಯಕಿಯಾಗಿ ದೇಶದಲ್ಲಿ ಸಖತ್ ಸದ್ದು ಮಾಡುತ್ತಿರುವ ರಶ್ಮಿಕಾ ಮಂದಣ್ಣ, ಕೇವಲ ಸಿನಿಮಾಗಳ ಸುದ್ದಿಯಿಂದ ಮಾತ್ರವಲ್ಲದೇ ಒಂದಲ್ಲ ಒಂದು ವಿಚಾರಗಳಿಂದ ಟ್ರೋಲ್​, ಟೀಕೆಗಳಿಗೆ ಗುರಿಯಾಗುತ್ತಿರುತ್ತಾರೆ. ಇತ್ತೀಚೆಗೆ ಸಮಂತಾರನ್ನು ಹುಡುಕಿಕೊಂಡು ಬಂದ ಕೆಲವು ಸಿನಿಮಾಗಳು, ಅವರ ನಿರಾಕರಣೆಯಿಂದ ಇದೀಗ ರಶ್ಮಿಕಾ ಪಾಲಾಗುತ್ತಿವೆ ಎಂದು ವರದಿಯಾಗಿದೆ.

ಇತ್ತೀಚೆಗೆ, ಬಾಲಿವುಡ್​ನಲ್ಲಿ ತೆರೆಕಂಡ 'ತಮ್ಮ' ಚಿತ್ರದಲ್ಲಿ ನಟ ಆಯುಷ್ಮಾನ್ ಖುರಾನಾ ಅವರಿಗೆ ಜೋಡಿಯಾಗಿರುವ ರಶ್ಮಿಕಾ, ಈ ಸಿನಿಮಾ ಮೂಲಕ ತಮ್ಮ ಅಭಿಮಾನಿ ಬಳಗವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. ಅಸಲಿಗೆ, ಆರಂಭದಲ್ಲಿ ಈ ಚಿತ್ರಕ್ಕೆ ಸಮಂತಾರನ್ನು ನಾಯಕಿಯಾಗಿ ನಟಿಸುವಂತೆ ಕೇಳಲಾಗಿತ್ತು. ಇದಕ್ಕೆ ಸಮಂತಾ ಕೂಡ ಒಪ್ಪಿಕೊಂಡಿದ್ದರು. ಆದರೆ, ಇಲ್ಲಿ ಏನಾಯಿತು?ಸಮಂತಾರಿಂದ ಈ ಪ್ರಾಜೆಕ್ಟ್ ಕೈತಪ್ಪಿತಾ ಅಥವಾ ರಿಜೆಕ್ಟ್​ ಮಾಡಿದ್ರಾ? ಅನ್ನೋದು ಮಾತ್ರ ಅಸ್ಪಷ್ಟ.

ಇನ್ನು ಇದೇ ನ.7ರಂದು ರಶ್ಮಿಕಾ ಅಭಿನಯದ ಮತ್ತೊಂದು ಸಿನಿಮಾ 'ದಿ ಗರ್ಲ್‌ಫ್ರೆಂಡ್' ಪ್ರೇಕ್ಷಕರ ಮುಂದೆ ಹಾಜರಾಗಲು ಸಜ್ಜಾಗಿದೆ. ರಾಹುಲ್ ರವೀಂದ್ರನ್ ನಿರ್ದೇಶನದ ಈ ಚಿತ್ರವು ತೆಲುಗಿನಲ್ಲಿ ರಿಲೀಸ್ ಆಗಲಿದ್ದು, ಇತರ ಭಾಷೆಗಳಲ್ಲಿಯೂ ಡಬ್ಬಿಂಗ್‌ನೊಂದಿಗೆ ಬಿಡುಗಡೆಯಾಗಲಿದೆ. ಆದಾಗ್ಯೂ, ದಿ ಗರ್ಲ್‌ಫ್ರೆಂಡ್ ಕಥೆಯನ್ನು ಮೊದಲು ಸಮಂತಾಗೆ ಹೇಳಲಾಗಿತ್ತು. ಸಮಂತಾ ಸಂಪೂರ್ಣ ಸ್ಕ್ರಿಪ್ಟ್ ಅನ್ನು ಕೇಳಿದ್ದರು. ಆದರೆ, ನಿರ್ದೇಶಕ ರಾಹುಲ್​ಗೆ ಸಲಹೆ ನೀಡಿದ ಸಮಂತಾ, ತನಗಿಂತ ಕಿರಿಯ ನಾಯಕಿ ಈ ಕಥೆಗೆ ಸೂಕ್ತ ಎಂದು ಹೇಳಿದ್ದರಂತೆ. ಹೀಗಾಗಿಯೇ ಈ ಚಿತ್ರವೂ ರಶ್ಮಿಕಾಗೆ ಒಲಿಯಿತು ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net