'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಗೆ ಅವಕಾಶವಿಲ್ಲ; ಶಾಂತಿ ಕಾಪಾಡಲು ಈ ನಿರ್ಧಾರ ಎಂದ ಪ.ಬಂ ಸಿಎಂ

mamata banerjee
Published on

ಪಶ್ಚಿಮ ಬಂಗಾಳ: 'ದಿ ಕೇರಳ ಸ್ಟೋರಿ' ಚಲನಚಿತ್ರದ ಪ್ರದರ್ಶನವನ್ನು ರಾಜ್ಯದಲ್ಲಿ ನಿಷೇಧಿಸಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಧ್ವೇಷ ಮತ್ತು ಹಿಂಸಾಚಾರದ ಘಟನೆಯನ್ನು ತಪ್ಪಿಸಿ, ರಾಜ್ಯದಲ್ಲಿ ಶಾಂತಿ ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಸುದೀಪ್ತೋ ಸೇನ್ ನಿರ್ದೇಶನದ ಮತ್ತು ನಟಿ ಅದಾ ಶರ್ಮಾ ಅಭಿನಯದ ವಿವಾದಾತ್ಮಕ ಚಿತ್ರ ‘ದಿ ಕೇರಳ ಸ್ಟೋರಿ’ ಇತ್ತೀಚೆಗೆ ದೇಶಾದ್ಯಂತ ತೆರೆಕಂಡಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರಸ್ತುತ ಈ ಚಿತ್ರದ ವಾಸ್ತವಿಕ ನಿಖರತೆಯ ಬಗ್ಗೆ ಸಾಕಷ್ಟು ಚರ್ಚೆಗಳು ಪ್ರಾರಂಭವಾಗಿವೆ. ಲವ್ ಜಿಹಾದ್, ಧಾರ್ಮಿಕ ಮತಾಂತರ ಮತ್ತು ಭಯೋತ್ಪಾದನೆಯ ಪಿತೂರಿಗಳು ಮತ್ತು ಅದರ ಭೀಕರ ಮುಖವನ್ನು ಬಹಿರಂಗಪಡಿಸುವ ಹಾಗೂ ಅದರ ಕುರಿತು ಜಾಗರೂಕತೆಯನ್ನು ಮೂಡಿಸುವ ಸಿನಿಮಾ ಇದಾಗಿದೆ.

ತಮಿಳುನಾಡಿಲ್ಲೂ ನಿಷೇಧ

'ದಿ ಕೇರಳ ಸ್ಟೋರಿ' ಚಿತ್ರವು ಬಿಡುಗಡೆಗೂ ಮುನ್ನ ಹಾಗೂ ನಂತರ ಸಾಕಷ್ಟು ವಿವಾದವನ್ನು ಹುಟ್ಟುಹಾಕಿದೆ. ಕೋಮು ಸೌಹಾರ್ದತೆ ಕದಡುವ ಭೀತಿಯಲ್ಲಿ ಸಿನಿಮಾವನ್ನು ತಮಿಳುನಾಡು ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಜತೆಗೆ ಸಿನಿಮಾವನ್ನು ಪ್ರದರ್ಶಿಸದೇ ಇರಲು ತಮಿಳುನಾಡು ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್​ ಮಾಲೀಕರು ನಿರ್ಧರಿಸಿದ್ದಾರೆ. ಚಿತ್ರವನ್ನು ಪ್ರದರ್ಶಿಸಿದರೆ ಬೇರೆ ಚಿತ್ರಗಳ ಮೇಲೆ ಹೊಡೆತ ಬೀಳುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ನಮ್ಮ ಆದಾಯದ ಮೇಲೆ ಯಾವುದೇ ಪರಿಣಾಮ ಬೀಳದಂತೆ ನೋಡಿಕೊಳ್ಳಲು ಚಿತ್ರವನ್ನು ಪ್ರದರ್ಶಿಸುವುದಿಲ್ಲ ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.

ತೆರಿಗೆ ವಿನಾಯಿತಿ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ‘ದಿ ಕೇರಳ ಸ್ಟೋರಿ’ಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದಾರೆ. ಈ ಚಿತ್ರ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಬೇಕೆಂದು ಒತ್ತಾಯಿಸಿದ ಬೆನ್ನಲ್ಲೇ ಚೌಹಾಣ್​ ಅವರು ಈ ಕುರಿತು ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net