

| ಬೇಲೂರು ಹರೀಶ ಬೆಂಗಳೂರು: ಕರೊನಾ ನಿರ್ವಹಣೆ ವಿಚಾರದಲ್ಲಿ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನಡುವೆ ಶೀತಲ ಸಮರ ನಡುವೆಯುತ್ತಿರುವ ಮಧ್ಯೆಯೇ ರಾಜ್ಯದಲ್ಲಿ ಕರೊನಾ ಸೋಂಕು ಹರಡುವಿಕೆ ತಡೆಯಲು ಸಿಬ್ಬಂದಿ ಕೊರತೆ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ಎರವಲು ಮತ್ತು ನಿಯೋಜನೆ ಮೇರೆಗೆ ಕೆಲಸ ಮಾಡುತ್ತಿರುವ ಹಿರಿಯ, ಕಿರಿಯ ಮತ್ತು ಆರೋಗ್ಯ ಸಹಾಯಕ ಸೇರಿ ಮತ್ತಿತರರ ಸಿಬ್ಬಂದಿಯನ್ನು ತಕ್ಷಣ ಬಿಡುಗಡೆಗೊಳಿಸುವಂತೆ ರಾಜ್ಯ ಸರ್ಕಾರ ಆರೋಗ್ಯ ಇಲಾಖೆಗೆ ಬರೆದಿರುವ ನಡವಳಿ ಪತ್ರದಲ್ಲಿ ಸೂಚಿಸಿದೆ. ಜತೆಗೆ, ಕರೊನಾ ಸೋಂಕಿತರಿಗೆ 6 ತಿಂಗಳಿಂದ ಎಡಬಿಡದೇ ಸೇವೆ ನೀಡುತ್ತಿರುವ ಸಿಬ್ಬಂದಿ ಈಗಾಗಲೇ ದಣಿವರಿದಿದ್ದು, ಬಹಳಷ್ಟು ಮಂದಿ ಕೆಲಸಕ್ಕೆ ಗುಡ್ಬೈ ಹೇಳುವ ಸ್ಥಿತಿಗೆ ಬಂದಿದ್ದಾರೆ. ಅಂಥವರನ್ನು ಉಳಿಸಿಕೊಳ್ಳಲು ಸರ್ಕಾರದ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ.
ಕರೊನಾ ಸೋಂಕು ಹರಡುವಿಕೆ ಆರಂಭವಾದಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೆಲ ಸಿಬ್ಬಂದಿ ಕೆಲಸ ತೊರೆದಿದ್ದರು. ಈಗ ಆಸ್ಪತ್ರೆಗಳಿಗೆ ರೋಗಿಗಳು ಬರುತ್ತಿದ್ದರೂ ಅನೇಕ ವೈದ್ಯರು ಮತ್ತು ನರ್ಸ್ಗಳು ಕೆಲಸಕ್ಕೆ ಹಾಜರಾಗುತ್ತಿಲ್ಲ.
ತಜ್ಞರು ಕೊರತೆ
ಪ್ರಮುಖ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆ, ಐಸಿಯು, ವೆಂಟಿಲೇಟರ್, ಪರೀಕ್ಷಾ ಪ್ರಯೋಗಾಲಯ ಸೌಲಭ್ಯಗಳಿದ್ದರೂ ಅವುಗಳನ್ನು ಬಳಸಲು ತಜ್ಞರಿಲ್ಲ. ಐಸಿಯು, ವೆಂಟಿಲೇಟರ್ ಮುಂತಾದ ಉಪಕರಣಗಳು ಅತ್ಯಾಧುನಿಕವಾಗಿದ್ದು, ಅವುಗಳನ್ನು ಹೇಗೆ ಬಳಸಬೇಕು ಎಂಬ ತರಬೇತಿಯನ್ನು ನೀಡಿಲ್ಲ.
ತಕ್ಷಣ ಬಿಡುಗಡೆ ಮಾಡಿ
ಆರೋಗ್ಯ ಇಲಾಖೆಯಿಂದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಒಳಗೊಂಡ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಮತ್ತಿತರರ ಇಲಾಖೆಗಳಿಗೆ ಎರವವಲು ಮತ್ತು ನಿಯೋಜನೆ ಮೇರೆಗೆ ಅಂದಾಜು ನೂರಾರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ, ಕೆಲ ಸಿಬ್ಬಂದಿ 15 ಅಥವಾ 20 ವರ್ಷ ಕಳೆದರೂ ಮಾತೃ ಇಲಾಖೆಗೆ ವಾಪಸ್ ಆಗಿಲ್ಲ. ಆದ್ದರಿಂದ, ಸಿಬ್ಬಂದಿಗಳ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೊನಾ ನಿಯಂತ್ರಿಸಲು ತೊಂದರೆಯಾಗುತ್ತಿದೆ. ಹೀಗಾಗಿ, ಎಲ್ಲ ಕಿರಿಯ ಮತ್ತು ಹಿರಿಯ ಆರೋಗ್ಯ ಸಹಾಯಕರನ್ನು ಒಳಗೊಂಡಂತೆ ಇತರೆ ಸಿಬ್ಬಂದಿ ತಕ್ಷಣ ಮಾತೃ ಇಲಾಖೆ ಹಿಂದಿರುಗುವಂತೆ ಸರ್ಕಾರ ತಾಕೀತು ಮಾಡಿದೆ.
ವೈದ್ಯರು, ಸಿಬ್ಬಂದಿಗೆ ಸೋಂಕು
ಕರೊನಾ ಸೋಂಕಿತರ ಹಾರೈಕೆಯಲ್ಲಿ ತೊಡಗಿರುವ ಕೆಲ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಕರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ಸೋಂಕು ಭೀತಿ ಮತ್ತಿತರರ ಕಾರಣಗಳಿಗಾಗಿ ಕೆಲವರು ಗೈರು ಹಾಜರಾಗುತ್ತಿದ್ದಾರೆ. ಇದರಿಂದ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ದಿನೇದಿನೆ ಕರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲೆ ಪ್ರಮಾಣದಲ್ಲಿ ಸೋಂಕಿತರು ದಾಖಲಾಗುತ್ತಿದ್ದಾರೆ. ಸದ್ಯ ಇಷ್ಟೊಂದು ಸೋಂಕಿತರಿಗೆ ಪೂರಕವಾಗಿ ವೈದ್ಯರು ಮತ್ತು ಸಿಬ್ಬಂದಿ ಸಿಗುತ್ತಿಲ್ಲ. ಆಸ್ಪತ್ರೆ ಸೇರಿದ್ದರೂ ಚಿಕಿತ್ಸೆ ಸಿಗದೆ ಸೋಂಕಿತರು ನರಳುತ್ತಿದ್ದಾರೆ.
ಶೇ.30 ಹುದ್ದೆ ಖಾಲಿ
ಆರೋಗ್ಯ ಇಲಾಖೆಯಲ್ಲಿ ತಜ್ಞವೈದ್ಯರು 2,832, ವೈದ್ಯರು 3,046, ಸ್ಟಾಫ್ನರ್ಸ್ 8,471, ಲ್ಯಾಬ್ ತಂತ್ರಜ್ಞರು 2,411, ಫಾರ್ಮಸಿಸ್ಟ್ 2,932, ಕಿರಿಯ ಸಹಾಯಕರು 9,850, ಎಫ್ಡಿಎ 2,673, ಎಸ್ಡಿಎ 2,559 ಮತ್ತು ಡಾಟಾ ಎಂಟ್ರಿ 1,432 ಸೇರಿ 36,206 ಹುದ್ದೆಗಳ ಮಂಜೂರಾದ ಪೈಕಿ 25, 658 ಹುದ್ದೆಗಳು ಭರ್ತಿಯಾಗಿದ್ದು, 10, 548 ಹುದ್ದೆಗಳು ಖಾಲಿ ಉಳಿದಿವೆ. ಇದರಿಂದಾಗಿ ರೋಗಿಗಳ ನಿರ್ವಹಣೆ ಕಷ್ಟವಾಗಿದೆ.
ಬೇರೆ ಇಲಾಖೆಯಲ್ಲೂ ಸಮಸ್ಯೆ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್ಜಿಯುಎಚ್ಎಸ್), ಸಾರಿಗೆ ಇಲಾಖೆ, ಲೋಕೋಪಯೋಗಿ, ಸಮಾಜ ಕಲ್ಯಾಣ ಮತ್ತು ಕಂದಾಯ ಸೇರಿ 10ಕ್ಕೂ ಹೆಚ್ಚು ಇಲಾಖೆಗಳಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಅವಧಿ ಮುಗಿದಿದ್ದರೂ ಮಾತೃ ಇಲಾಖೆಯ ಕೆಲಸಕ್ಕೆ ತೆರಳದೆ ಅದೇ ಹುದ್ದೆಯಲ್ಲಿ ಮುಂದುವರಿದಿರುವ ಬಗ್ಗೆ ಗಂಭೀರ ಆರೋಪಗಳಿವೆ. ಕೆಲವರಂತೂ ರಾಜಕೀಯ ಪ್ರಭಾವಿ ಬಳಸಿ 25-27 ವರ್ಷಗಳ ಕಾಲ ಅದೇ ಹುದ್ದೆಯಲ್ಲಿ ಬಲವಾಗಿ ಬೇರೂರಿದ್ದಾರೆ. 2013ರ ಸೆಕ್ಷನ್6 ರನ್ವಯ ನಿಯೋಜನೆ ಮೇರೆಗೆ ನೇಮಿಸಿದ ಅಧಿಕಾರಿಗಳ ಅವಧಿ ಮೂರು ವರ್ಷ. ಅವಧಿ ಮುಗಿದ ನಂತರ ಅಧಿಕಾರಿಗಳ ಅದೇ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ಇರುವುದಿಲ್ಲ. ಹೀಗಾಗಿ, ಮಾತೃ ಹುದ್ದೆಗೆ ತೆರಳುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನೇ ಧಿಕ್ಕರಿಸಿ ಕೆಲ ಅಧಿಕಾರಿಗಳು ಈಗಲೂ ಲಾಭದಾಯಕ ಹುದ್ದೆಯಲ್ಲಿದ್ದಾರೆ.