

ಬೆಂಗಳೂರು: ನಗರದಲ್ಲಿ ಸ್ಕೂಟರ್ ವ್ಹೀಲಿಂಗ್ ನಡೆಸುತ್ತಿದ್ದ ಸವಾರನನ್ನು ತಡೆಯಲು ಮುಂದಾದ ಪೊಲೀಸ್ ಪೇದೆಗೆ ದುಷ್ಕರ್ಮಿಗಳು ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಪೇದೆ ಆಸ್ಪತ್ರೆ ಸೇರಿದ್ದಾರೆ.
ಬನಶಂಕರಿ ಸಂಚಾರ ಠಾಣೆ ಪೇದೆ ತೇಜಸ್(26) ಗಾಯಗೊಂಡವರು. ಅ.2ರಂದು ಕೆ.ಆರ್. ಜಂಕ್ಷನ್ನಲ್ಲಿ ಮುಖ್ಯಪೇದೆ ಹರಿಪ್ರಕಾಶ್ ಮತ್ತು ತೇಜಸ್ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಚಾರ ನಿಯಮ ಉಲ್ಲಂಘಿಸುವರನ್ನು ತಡೆದು ದಂಡ ವಿಧಿಸುತ್ತಿದ್ದರು. ಇದೇ ವೇಳೆ ಕೆ.ಆರ್. ಜಂಕ್ಷನ್ ಕಡೆಗೆ ಹೊಂಡಾ ಆ್ಯಕ್ಟೀವಾದಲ್ಲಿ ಸವಾರ ಅತೀ ವೇಗವಾಗಿ ವ್ಹೀಲಿಂಗ್ ಮಾಡಿಕೊಂಡು ಬರುತ್ತಿದ್ದ. ಅದನ್ನು ಗಮನಿಸಿದ ಪೇದೆ ತೇಜಸ್, ಗಾಡಿ ನಿಲ್ಲಿಸುವಂತೆ ಕೈ ಸನ್ನೆ ಮಾಡಿದರು. ದಿಚಕ್ರ ವಾಹನ ನಿಲ್ಲಿಸುವಂತೆಯೇ ಪೇದೆ ಸಮೀಪ ಬಂದ ಸವಾರ, ಏಕಾಏಕಿ ಪೊಲೀಸ್ಗೆ ಗುದ್ದಿ ವೇಗವಾಗಿ ಪರಾರಿ ಆಗಿದ್ದಾನೆ.
ಗುದ್ದಿದ ರಭಸಕ್ಕೆ ಕೆಳಗೆ ಬಿದ್ದ ಕಾನ್ಸ್ಟೇಬಲ್ಗೆ ತಲೆ ಮತ್ತು ಕೈಗೆ ಗಂಭೀರ ಗಾಯವಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ತೇಜಸ್ ನೀಡಿದ ದೂರಿನ ಮೇರೆಗೆ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಕೂಟರ್ ಸವಾರನನ್ನು ಬಂಧಿಸಲು ಬಲೆಬೀಸಿದ್ದಾರೆ.