More

    ಗ್ರಾಪಂ ಸಂಪನ್ಮೂಲ ‘ನೀರು’ ಪಾಲು

    -ಗೋಪಾಲಕೃಷ್ಣ ಪಾದೂರು, ಉಡುಪಿ

    ಜಿಲ್ಲೆಯಲ್ಲಿ ಬೇಸಿಗೆಯ ಬೇಗೆಯಿಂದ ಜಲಮೂಲಗಳು ಬತ್ತುತ್ತಿದ್ದು, ಗ್ರಾಮಾಂತರ ಭಾಗಗಳಲ್ಲಿ ನೀರಿಗಾಗಿ ಬೇಡಿಕೆ ತೀವ್ರವಾಗಿದೆ. 32 ಗ್ರಾಪಂ ವ್ಯಾಪ್ತಿಯ 54 ಗ್ರಾಮಗಳಲ್ಲಿ 4,908 ಕುಟುಂಬಗಳಿಗೆ 28 ಟ್ಯಾಂಕರ್ ಹಾಗೂ 4 ಎಸ್‌ಎಲ್‌ಆರ್‌ಎಂ ವಾಹನಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಇದಕ್ಕಾಗಿ ಗ್ರಾಪಂಗಳು ಸ್ವಂತ ಸಂಪನ್ಮೂಲಗಳಿಂದ 24,98,916 ರೂ. ವೆಚ್ಚ ಮಾಡಿವೆ.

    ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ 1 ತಿಂಗಳಲ್ಲಿ ಯಾವುದೇ ಹೊಸ ಟೆಂಡರ್ ಕರೆಯುವಂತೆ ಇರಲಿಲ್ಲ. ಜತೆಗೆ ಸರ್ಕಾರ ಬರ ಎಂಬುದಾಗಿ ಘೋಷಣೆ ಮಾಡದೆ ಇರುವುದರಿಂದ ಪ್ರಾಕೃತಿಕ ವಿಕೋಪ ನಿಧಿಯಿಂದಲೂ ಹಣ ಬಿಡುಗಡೆ ಸಾಧ್ಯವಾಗಿಲ್ಲ. ಹೀಗಾಗಿ ಗ್ರಾಪಂಗಳು ತಮ್ಮ ವರ್ಗ-1 ಖಾತೆಯಲ್ಲಿರುವ ಹಣವನ್ನು ಖರ್ಚು ಮಾಡಿ ಜನರಿಗೆ ನೀರು ಸರಬರಾಜು ಮಾಡುವ ಅನಿವಾರ್ಯ ಉಂಟಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಗ್ರಾಪಂ ಹಣವೆಲ್ಲಾ ನೀರು ಪಾಲಾಗುವ ಭೀತಿಯೂ ಎದುರಾಗಿದೆ. ಉಳಿದ ಜಿಲ್ಲೆಗಳಲ್ಲೂ ನೀರಿನ ಬವಣೆ ಹೆಚ್ಚಾಗಿದ್ದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಬರ ಪರಿಹಾರ ಘೋಷಣೆ ಮಾಡಿದರೆ ಮಾತ್ರ ಗ್ರಾಪಂ ಖಜಾನೆ ಬರಿದಾಗುವುದು ತಪ್ಪಲಿದೆ.

    ಎಲ್ಲೆಲ್ಲಿ ನೀರಿನ ಬವಣೆ?

    ಬೈಂದೂರು ತಾಲೂಕಿನ ಗೋಳಿಹೊಳೆ, ಯಳಜಿತ್, ಕಿರಿಮಂಜೇಶ್ವರ, ಕಾಲ್ತೋಡು 4 ಗ್ರಾಮಗಳಲ್ಲಿ 554 ಕುಟುಂಬಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಈವರೆಗೆ ಒಟ್ಟು 1.40 ಲಕ್ಷ ರೂ. ಗ್ರಾಪಂ ಅನುದಾನ ವ್ಯಯಿಸಲಾಗಿದೆ. ಉಡುಪಿ ತಾಲೂಕಿನ ತೆಂಕನಿಡಿಯೂರು, ಕೆಳಾರ್ಕಳಬೆಟ್ಟು, ಪೆರ್ಡೂರು, ಬೊಮ್ಮರಬೆಟ್ಟು, ಅಂಜಾರು, ಕುದಿ, ಪೆರ್ಣಂಕಿಲ ಗ್ರಾಮಗಳಲ್ಲಿ 555 ಕುಟುಂಬಗಳಿಗೆ 6,92,200 ರೂ. ವೆಚ್ಚ, ಕಾಪು ತಾಲೂಕಿನ ಕೋಟೆ, ಮಟ್ಟು, ನೂಡುಬೆಟ್ಟು, ಯೆಣಗುಡ್ಡೆ ಗ್ರಾಮಗಳಲ್ಲಿ 1,453 ಕುಟುಂಬಗಳಿಗೆ 4,89,000 ರೂ.ವೆಚ್ಚ, ಕಾರ್ಕಳ ತಾಲೂಕಿನ ರೆಂಜಾಳ, ಕುಕ್ಕುಂದೂರು, ನಂದಳಿಕೆ, ಕೆದಿಂಜೆ, ಮಾಳ, ಮುಂಡ್ಕೂರು, ಮುಲ್ಲಡ್ಕ, ಮರ್ಣೆ, ಹೆರ್ಮುಂಡೆ, ಕಲ್ಯಾ ಗ್ರಾಮಗಳಲ್ಲಿ 342 ಕುಟುಂಬ, 2,98,600 ರೂ. ವೆಚ್ಚ, ಕುಂದಾಪುರ ತಾಲೂಕಿನ ಅಮಾಸೆಬೈಲು, ರಟ್ಟಾಡಿ, ಮಚ್ಚಟ್ಟು, ಹಟ್ಟೆಯಂಗಡಿ, ಕನ್ಯಾನ, ಕೆಂಚನೂರು, ಸಿದ್ದಾಪುರ, ಗುಲ್ವಾಡಿ, ವಂಡ್ಸೆ, ಅಜ್ರಿ, ಕಮಲಶಿಲೆ, ಕೊಡ್ಲಾಡಿ, ಹಾಲಾಡಿ, ಗ್ರಾಮಗಳಲ್ಲಿ 937 ಕುಟುಂಬಗಳಿಗೆ 3,30,336 ರೂ. ವೆಚ್ಚ, ಬ್ರಹ್ಮಾವರ ತಾಲೂಕಿನ ಹೊಸೂರು, ಹಲುವಳ್ಳಿ, ಯಡ್ತಾಡಿ, ಹೇರಾಡಿ, ಹಾರಾಡಿ, ಬೈಕಾಡಿ, ನೀಲಾವರ, ನಾಲ್ಕೂರು, ನಂಜಾರು, ಪೆಜಮಂಗೂರು, 34 ಕುದಿ ಗ್ರಾಮಗಳಲ್ಲಿ 846 ಕುಟುಂಬಗಳಿಗೆ 4,84,100 ರೂ. ವೆಚ್ಚ, ಹೆಬ್ರಿ ತಾಲೂಕಿನ ಕುಚ್ಚೂರು, ಬೆಳಂಜೆ, ಶಿವಪುರ, ಕೆರೆಬೆಟ್ಟು, ಮುದ್ರಾಡಿ, ಕಬ್ಬಿನಾಲೆ ಗ್ರಾಮಗಳಲ್ಲಿ 221 ಕುಟುಂಬಗಳಿಗೆ ನೀರು ಸರಬರಾಜು ಮಾಡಲು 64680 ರೂ. ವೆಚ್ಚ ಮಾಡಲಾಗಿದೆ.

    ಚುನಾವಣೆಗೆ ಮುನ್ನ ಬೇಸಿಗೆ ಕಾಲದಲ್ಲಿ ಜಲಮೂಲಗಳ ಪುನರುಜ್ಜೀವನ ಹಾಗೂ ಹೊಸ ಬಾವಿ, ಕೊಳವೆ ಬಾವಿ ನಿರ್ಮಾಣಕ್ಕಾಗಿ ಎಲ್ಲ ಗ್ರಾಪಂ ಖಾತೆಗಳಿಗೆ ಒಟ್ಟು 4.75 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿತ್ತು. ಪ್ರಸ್ತುತ ಸರ್ಕಾರ ಬರ ಎಂದು ಘೋಷಣೆ ಮಾಡದೇ ಇರುವುದರಿಂದ ಟ್ಯಾಂಕರ್ ನೀರು ಪೂರೈಕೆಗೆ ಅನುದಾನ ನೀಡಲು ಸಾಧ್ಯವಿಲ್ಲ. ಹೀಗಾಗಿ ಗ್ರಾಪಂಗಳು ಸ್ವಂತ ಸಂಪನ್ಮೂಲದಿಂದ ಜನರಿಗೆ ನೀರು ಸರಬರಾಜು ಮಾಡುತ್ತಿವೆ.

    -ಪ್ರಸನ್ನ ಎಚ್., ಜಿಪಂ ಸಿಇಒ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts