ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಮಿಯಾರು ಬಳಿ ಸೀತಾನದಿಗೆ ನಿರ್ಮಿಸಿರುವ ಕಿಂಡಿಅಣೆಕಟ್ಟೆಯಲ್ಲಿ ನೀರು ಕಡಿಮೆಯಾಗಿದ್ದು, ಇದೇ ಪ್ರಥಮ ಬಾರಿ ನೀರಿನ ಈ ಭಾಗದಲ್ಲಿ ಅಭಾವ ಕಾಣಿಸಿಕೊಂಡಿದೆ. ಹಾಗೆಯೇ ಕೊಕ್ಕರ್ಣೆ ಗ್ರಾಪಂ ವ್ಯಾಪ್ತಿಯ ಕುದಿ ಗ್ರಾಮ ಹಾಗೂ ಹೆಗ್ಗುಂಜೆ ಗ್ರಾಪಂ ವ್ಯಾಪ್ತಿಯ ಹೊಳೆಬಾಗಿಲಿನಲ್ಲಿ ಸೀತಾನದಿಗೆ ಕಟ್ಟಿರುವ ಕಿಂಡಿಅಣೆಕಟ್ಟಿಯಲ್ಲಿ ನೀರಿನ ಅಭಾವ ಕಂಡು ಬಂದಿದೆ. ಇದರಿಂದ ಈ ಹೊಳೆ ನೀರನ್ನು ಅವಲಂಬಿಸಿದ್ದ ಕೃಷಿಕರು, ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ.
ಈ ವರ್ಷ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕಿಂಡಿಅಣೆಕಟ್ಟೆಯಲ್ಲಿ ನೀರು ಕನಿಷ್ಠ ಮಟ್ಟಕ್ಕೆ ತಲುಪಿದೆ.ಬೇಸಿಗೆ ಮಳೆ ಬಾರದಿದ್ದರಿಂದ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಹಲವು ಗ್ರಾಪಂಗಳಲ್ಲಿ ವಾಹನಗಳಲ್ಲಿ ಕುಡಿಯುವ ನೀರನ್ನು ದಿನಕ್ಕೊಮ್ಮೆ, ಎರಡು ದಿನಕ್ಕೊಮ್ಮೆ ಎಂಬಂತೆ ಸರಬರಾಜು ಮಾಡಲಾಗುತ್ತಿದೆ. ಅಡಿಕೆ, ತೆಂಗು, ತರಕಾರಿ, ಬಾಳೆ ಮುಂತಾದವು ಬಿಸಿಲಿಗೆ ಬಾಡುತ್ತಿವೆ. ಈ ಭಾಗದಲ್ಲಿ ಬಹುತೇಕ ತೋಟಗಳು ಬಿಸಿಲಿನ ತಾಪಕ್ಕೆ ಸುಟ್ಟಂತೆ ಕಾಣುತ್ತಿವೆ. ಅಡಕೆ ಸಸಿ, ಮರಗಳು ಸತ್ತು ಹೋಗುವ ಲಕ್ಷಣ ಕಾಣುತ್ತಿದೆ.ಗ್ರಾಪಂ ಕಿಂಡಿ ಅಣೆಕಟ್ಟು ನೀರನ್ನು ಕುಡಿಯಲು ಉಪಯೋಗಿಸುತ್ತಿದೆ. ನದಿಯಲ್ಲಿ ಕುಡಿಯುವ ನೀರಿಗಾಗಿ ಬಾವಿ ಅಗೆದು ನೀರು ಸರಬರಾಜು ಮಾಡಲಾಗುತ್ತಿದೆ.
ಸುಮಾರು ನಾಲ್ಕು ವರ್ಷದ ಹಿಂದೆ ನಿರ್ಮಾಣವಾದ ವೆಂಟೆಡ್ ಡ್ಯಾಮ್‌ನಲ್ಲಿ ಬಿಸಿಲಿನ ತಾಪಕ್ಕೆ ನೀರು ಬತ್ತಿದ್ದು ಮಳೆಗಾಗಿ ರೈತರು ಪ್ರಾರ್ಥಿಸುತ್ತಿದ್ದಾರೆ. ಒಟ್ಟಾರೆಯಾಗಿ ಅಧಿಕ ವೃಷ್ಟಿಯಿಂದಲೂ ತೊಂದರೆ. ಕಡಿಮೆ ಮಳೆಯಿಂದಲೂ ತೊಂದರೆ. ಪರಿಸರ ಮಾತೆ ಜನರ ಬವಣೆಗಳಿಗೆ ಸೂಕ್ತ ಪರಿಹಾರ ನೀಡಬೇಕಿದೆ.
ಸರ್ಕಾರ ಇಲ್ಲಿನ ತನಕ ಕುಡಿಯುವ ನೀರಿನ ಸಮಸ್ಯೆಗೆ ಯಾವುದೇ ಅನುದಾನ ನೀಡಿಲ್ಲ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಟಾಸ್ಕ್ ಫೋರ್ಸ್ ಅಡಿಯಲ್ಲಿ ಪರಿಹಾರ ನೀಡಿದರೆ ಒಳ್ಳೆಯದಿತ್ತು.
-ಹೆರಿಯಣ್ಣ ಶೆಟ್ಟಿ, ಪಿಡಿಒ ಕೊಕ್ಕರ್ಣೆ
ನೀರಿನ ಪ್ರಮಾಣ ಬಹಳ ಕಡಿಮೆಯಾಗಿದೆ. ವಾಹನಗಳಲ್ಲಿ ಕೆಲವು ಕಡೆಗಳಲ್ಲಿ ನೀರನ್ನು ಒದಗಿಸುತ್ತಿದ್ದಾರೆ. 15ರಿಂದ 20 ದಿನಗಳ ಈಚೆಗೆ ನೀರು ಸಂಪೂರ್ಣ ಖಾಲಿಯಾಗಿದೆ. ಕುಡಿಯಲು ಮಾತ್ರ ನೀರು ದೊರಕುತ್ತದೆ. ಕೃಷಿಗೆ, ತೋಟಗಾರಿಕೆಗೆ ಬಾರಿ ಹೊಡೆತ ಉಂಟಾಗಿದೆ. ಜಾನುವಾರುಗಳಿಗೆ ನೀರು ಕಡಿಮೆಯಾಗುತ್ತದೆ.
-ಪ್ರಮೋದ್ ಶೆಟ್ಟಿ, ಕೃಷಿಕ ಹೆಗ್ಗುಂಜೆ