More

    ಕೈಗಾರಿಕೆ ಬಂದರೆ ನಿರುದ್ಯೋಗ ನಿವಾರಣೆ

    – ಹರಿಪ್ರಸಾದ್ ನಂದಳಿಕೆ, ಕಾರ್ಕಳ

    ಹೆಬ್ರಿ ಮತ್ತು ಕಾರ್ಕಳ ತಾಲೂಕುಗಳನ್ನು ಒಳಗೊಂಡಿರುವ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಕೊರತೆಯಾಗಿಲ್ಲ. ಆದರೆ, ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಗಂಭೀರ ಪ್ರಯತ್ನ ನಡೆಯಬೇಕೆಂಬುದರ ಸಹಿತ ನಾನಾ ಬೇಡಿಕೆಗಳ ದೊಡ್ಡ ಪಟ್ಟಿಯನ್ನೇ ಜನರು ಮುಂದಿಡುತ್ತಿದ್ದಾರೆ.

    ಕಾಂಗ್ರೆಸ್-ಬಿಜೆಪಿ ನೇರ ಜಿದ್ದಾಜಿದ್ದಿನಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಗೆಲವು ಸಾಧಿಸಿ ಇದೀಗ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯೋಚನೆ-ಯೋಜನೆ ರೂಪಿಸುತ್ತಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಒಂದಿಷ್ಟು ಹೊಸ ಯೋಜನೆಗಳನ್ನು ತರಬೇಕಿದೆ. ಬಹುತೇಕ ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿಯಾಗಿದ್ದು, ಒಂದಷ್ಟು ಗ್ರಾಮಗಳಲ್ಲಿ ಆಗಬೇಕಿದೆ. ಮೂಲಸೌಕರ್ಯಕ್ಕೆ ಶಾಸಕರು ವಿಶೇಷ ಒತ್ತು ನೀಡಿದ್ದಾರೆ. ಬಾಕಿ ಉಳಿದಿರುವ ಅಭಿವೃದ್ಧಿ ಕೆಲಸಕ್ಕೆ ವೇಗ ಸಿಗಬೇಕಿದೆ.

    ನಿರುದ್ಯೋಗ ಸಮಸ್ಯೆ

    ತಾಲೂಕಿನಲ್ಲಿ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮುಗಿಸಿ ಉದ್ಯೋಗ ಅರಸಿ ವಿದೇಶಗಳಿಗೆ ಹಾಗೂ ಮುಂಬೈ, ಬೆಂಗಳೂರು ನಗರ ಸೇರುತ್ತಿದ್ದಾರೆ. ತಾಲೂಕಿನ ಜನರಿಗೆ ತಾಲೂಕು ವ್ಯಾಪ್ತಿಯಲ್ಲೇ ಉದ್ಯೋಗ ಸಿಗುವ ನಿಟ್ಟಿನಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಈಗಾಗಲೇ ನಿಟ್ಟೆಯಲ್ಲಿ ಜವಳಿ ಪಾರ್ಕ್, ಜರ್ಮನ್ ಕಂಪನಿ ಕೈಗಾರಿಕೆ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಇನ್ನಷ್ಟು ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಿ ಕ್ರಮಗಳನ್ನು ಶಾಸಕರು ಕೈಗೊಳ್ಳಬೇಕು.

    ಸವಾಲಾದ ಅಭಿವೃದ್ಧಿ ಕೆಲಸಗಳು

    ಕಾರ್ಕಳ ನಗರ ಭಾಗದಲ್ಲಿ ಒಳ ಚರಂಡಿ ವ್ಯವಸ್ಥೆ ಸಮರ್ಪಕವಾಗಬೇಕಿದೆ. ವಾಹನ ದಟ್ಟಣೆ ಹೆಚ್ಚುತ್ತಿರುವುದರಿಂದ ಪೇಟೆಯ ವಿಸ್ತರಣೆ ಕಾರ್ಯ ಅಗತ್ಯ. ವಾಹನ ಪಾರ್ಕಿಂಗ್ ಇಲ್ಲಿನ ದೊಡ್ಡ ಕೊರತೆ, ಇದಕ್ಕೂ ಪರಿಹಾರ ನಿರೀಕ್ಷೆ ಜನರದ್ದು. ಪುರಸಭೆ ವ್ಯಾಪ್ತಿಯ ರಸ್ತೆಗಳು ಹಾಗೂ ಖಾತಾ ಸಮಸ್ಯೆಗಳಿಗೆ ಮುಕ್ತಿ ದೊರಕಬೇಕಾಗಿದೆ. ಹೆಬ್ರಿಯ ಕೆಲವೊಂದು ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಾಣ ಬಾಕಿ ಇದೆ.

    ಪರವಾನಗಿ ಇದ್ದರೂ ಕರೊನಾ ಬಳಿಕ ಗ್ರಾಮೀಣ ಭಾಗಕ್ಕೆ ಹಲವು ಬಸ್‌ಗಳ ಸಂಚಾರ ನಿಂತು ಹೋಗಿದೆ. ಶಾಲಾ ಕಾಲೇಜು ಮಕ್ಕಳಿಗೆ, ಕೂಲಿ ಕಾರ್ಮಿಕರಿಗೆ, ಕೆಲಸಕ್ಕೆ ತೆರಳುವವರಿಗೆ ತೊಂದರೆಯಾಗುತ್ತಿದೆ. ಸಾರಿಗೆ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

    ತಾಲೂಕಿಗೊಂದು ಪುರಭವನ ಬೇಕು ಎಂಬುದು ಹಳೇ ಬೇಡಿಕೆ. ಕೆಲವು ಗ್ರಾಮಗಳಲ್ಲಿ ರಂಗಮಂದಿರ ನಿರ್ಮಾಣವಾಗಬೇಕು. ಕಾರ್ಕಳ ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸುವ ಮೂಲಕ ಉತ್ತಮ ಆರೋಗ್ಯ ಸೇವೆ ಒದಗಿಸುವಂತೆ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಉತ್ತಮ ಸೇವೆ ದೊರಕುವಂತೆ ಮಾಡಬೇಕು.

    ಪಶು ವೈದ್ಯರ ನೇಮಕ

    ತಾಲೂಕಿನಾದ್ಯಂತ ಹೆಚ್ಚಿನ ಹೈನುಗಾರರಿದ್ದು, ಜಾನುವಾರುಗಳಿಗೆ ಅಸೌಖ್ಯ ಸಂದರ್ಭ ಸಮರ್ಪಕ ಪಶು ವೈದ್ಯರ ಸೇವೆ ದೊರಕುತ್ತಿಲ್ಲ. ಕೆಲವು ವೈದ್ಯರು ಎರಡು ಮೂರು ಕಡೆಯಲ್ಲಿ ಸೇವೆ ನೀಡುತ್ತಿರುವುದೂ ಸಮಸ್ಯೆ. ಪ್ರತಿ ಪಶು ಚಿಕಿತ್ಸಾಲಯದಲ್ಲಿ ವೈದ್ಯರ ಸೇವೆ ದೊರಕುವಂತೆ ಪಶು ವೈದ್ಯರ ನೇಮಕ ಆಗಬೇಕಿದೆ.

    ರೈಲು ಯೋಜನೆ

    ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ರೈಲು ಸಂಚಾರ ಸೇವೆ ಬೇಡಿಕೆ ಇಲ್ಲಿವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಹಲವು ವರ್ಷಗಳ ಹಿಂದೆ ಕೊಂಕಣ ರೈಲ್ವೆ ಸರ್ವೇ ಕಾರ್ಯ ನಡೆಸಿದ್ದರೂ, ಬಳಿಕ ಬಳಿಕ ನನೆಗುದಿಗೆ ಬಿದ್ದಿದೆ. ಈ ಯೋಜನೆ ಕಾರ್ಯಗತಗೊಂಡರೆ ಕಾರ್ಕಳದಿಂದ ಧರ್ಮಸ್ಥಳ, ಸುಬ್ರಹ್ಮಣ್ಯ, ಬೆಂಗಳೂರು ರೈಲು ಸಂಪರ್ಕ ಸಾಧ್ಯವಾಗಲಿದೆ. ಹೊರ ಜಿಲ್ಲೆ, ರಾಜ್ಯದ ಪ್ರವಾಸಿಗರಿಗೂ ಇದು ಅನುಕೂಲ. ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುವ ಈ ಯೋಜನೆಗೆ ಶಾಸಕರು ಮನಸ್ಸು ಮಾಡಬೇಕಿದೆ.

    Bundimutt bus stand
    ಸಮರ್ಪಕ ಬಳಕೆಯಾಗದಿರುವ ಕಾರ್ಕಳ ಬಂಡಿಮಠ ಬಸ್ಸು ನಿಲ್ದಾಣ.

    ಬಂಡಿಮಠ ನಿಲ್ದಾಣ ಉಪಯೊಗ

    ಕೆಲವರ್ಷಗಳ ಹಿಂದೆ ಬಂಡಿಮಠದಲ್ಲಿ ನಿರ್ಮಿಸಲಾದ ಸುಂದರ ಬಸ್ಸು ನಿಲ್ದಾಣ ಉಪಯೋಗವಿಲ್ಲದೆ ಪಾಳು ಬಿದ್ದಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ನಿಲ್ದಾಣ ಉಪಯೋಗಕ್ಕೆ ಬರುವಂತೆ ಆಗಬೇಕು. ಬಸ್ಸು ನಿಲ್ದಾಣ ಬಂಡಿಮಠಕ್ಕೆ ಸ್ಥಳಾಂತರಿಸಬೇಕು ಎನ್ನುವ ಕೂಗಿಗೆ ಸ್ಪಂದನೆ ಸಿಗಬೇಕು.

    ಸಾಕಷ್ಟು ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ಈಗಾಗಲೇ ನಡೆದಿದೆ. ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ ಒಂದಷ್ಟು ಕೈಗಾರಿಕೆಗಳು ಆಗಬೇಕಾಗಿದೆ. ಗ್ರಾಮೀಣ ಭಾಗದ ರೈತರ ಅನುಕೂಲಕ್ಕೆ ಪಶು ವೈದ್ಯರ ನೇಮಕ ಹಾಗೂ ಗ್ರಾಮೀಣ ಭಾಗದ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕಾಗಿದೆ.

    -ನಿತೇಶ್ ಬೇಲಾಡಿ, ಸ್ಥಳೀಯರು

    ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗ, ಪ್ರವಾಸೋದ್ಯಮಕ್ಕೆ ಉತ್ತೇಜನ, ನಿವೇಶನ ರಹಿತರಿಗೆ ನಿವೇಶನ ಹೀಗೆ ಹತ್ತು ಹಲವು ಯೋಜನೆಗೆ ಮೊದಲ ಆದ್ಯತೆ ನೀಡುತ್ತೇನೆ. ಜನರು ಐದು ವರ್ಷದ ಅವಕಾಶವನ್ನು ಮತ್ತೆ ನೀಡಿದ್ದಾರೆ. ಕಾರ್ಕಳವನ್ನು ಇನ್ನಷ್ಟು ಮಾದರಿ ಕ್ಷೇತ್ರವಾಗಿ ಮಾಡುವ ಯೋಚನೆ, ಯೋಜನೆಗಳಿವೆ. ಇಡೀ ರಾಜ್ಯದ ಜನ ಕಾರ್ಕಳದ ಅಭಿವೃದ್ಧಿಯ ಕಡೆಗೆ ತಿರುಗಿ ನೋಡುವಂತೆ ಮಾಡುತ್ತೇನೆ.

    -ವಿ.ಸುನೀಲ್ ಕುಮಾರ್, ಕಾರ್ಕಳ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts