More

    ಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರೆ ಇಂದಿನಿಂದ

    ಹನೂರು : ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸಮೀಪದ ಬೂದುಬಾಳು ಗ್ರಾಮದ ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವ ಮಾ.24 ರಿಂದ 5 ದಿನಗಳ ಕಾಲ ನಡೆಯಲಿದೆ.

    ಜಾತ್ರಾ ಮಹೋತ್ಸವಕ್ಕೆ ಮಾ.24ರಂದು ರಾತ್ರಿ 8 ಗಂಟೆಗೆ ದೇಗುಲದಲ್ಲಿ ಗಜೇಂದ್ರ ಮೋಕ್ಷ ಧಾರ್ಮಿಕ ಕಾರ್ಯದ ಮೂಲಕ ಚಾಲನೆ ನೀಡಲಾಗುವುದು. 25ರಂದು ಬೆಳಗ್ಗೆ 11 ಗಂಟೆಗೆ ಸಲ್ಲುವ ಶುಭ ಲಗ್ನದಲ್ಲಿ ಬ್ರಹ್ಮ ರಥೋತ್ಸವ ಜರುಗಲಿದೆ. 26 ರಂದು ರಾತ್ರಿ 10 ಗಂಟೆಗೆ ಪ್ರಹ್ಲಾದೋತ್ಸವ, 11 ಗಂಟೆಗೆ ಮಂಡ್ಯದ ಕಾಸರವಾಡಿ ಸಚಿನ್ ತಂಡವರಿಂದ ಹರಿಕಥೆ, 27 ರಂದು ಮಧ್ಯಾಹ್ನ 1 ಗಂಟೆಗೆ ವಸಂತೋತ್ಸವ ಹಾಗೂ 28 ರಂದು ರಾತ್ರಿ 8ಕ್ಕೆ ಗರುಡೋತ್ಸವ ನೆರವೇರುವುದರ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

    ಮಾ.25 ರಂದು ಜರುಗುವ ಬ್ರಹ್ಮ ರಥೋತ್ಸವದಲ್ಲಿ ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಭಾಗಿಯಾಗುತ್ತಾರೆ. ಅಲ್ಲದೇ ಪ್ರಹ್ಲಾದೋತ್ಸವದಂದು ಹರಕೆಹೊತ್ತ ಭಕ್ತರು ಪಂಕ್ತಿಸೇವೆ ಹಾಗೂ ಹೆಚ್ಚು ಮುಡಿಸೇವೆಯನ್ನು ನೇರವೇರಿಸುವುದು ವಾಡಿಕೆ. ಹಾಗಾಗಿ ಈ 2 ದಿನಗಳಂದು ಸಾವಿರಾರು ಭಕ್ತರು ಬೂದುಬಾಳುಗೆ ಭೇಟಿ ನೀಡಲಿದ್ದಾರೆ. ಜಾತ್ರೆಯ ಹಿನ್ನೆಲೆಯಲ್ಲಿ ಈಗಾಗಲೇ ದೇಗುಲದಲ್ಲಿ ಅಗತ್ಯ ಸಿದ್ಧತೆಗಳು ನಡೆದಿವೆ. ತೇರನ್ನು ಸಿದ್ಧಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಸಿಂಗಾನಲ್ಲೂರು ಗ್ರಾಮ ಪಂಚಾಯಿತಿ ಆಡಳಿತ ಈಗಾಗಲೇ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ಅಗತ್ಯ ಕ್ರಮವಹಿಸಿದೆ. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್‌ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

    ಬಸ್ ಸೌಕರ್ಯಕ್ಕೆ ಒತ್ತಾಯ: ಪ್ರತಿ ವರ್ಷ ಈ ಜಾತ್ರೆಗೆ ಚಾಮರಾಜನಗರ ಸೇರಿದಂತೆ ಮೈಸೂರು, ಮಳವಳ್ಳಿ, ಮಂಡ್ಯ ಯಳಂದೂರು, ಕೊಳ್ಳೇಗಾಲ, ತಿ.ನರಸೀಪುರ, ಹನೂರು, ದೊಮ್ಮನಗದ್ದೆ, ಕುರಟ್ಟಿಹೊಸೂರು, ಅಜ್ಜೀಪುರ ಹಾಗೂ ಇನ್ನಿತರ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆದರೆ ಸಾರಿಗೆ ಇಲಾಖೆ ಅಧಿಕಾರಿಗಳು ಸಮರ್ಪಕ ಬಸ್ ಸೌಕರ್ಯ ಒದಗಿಸುತ್ತಿಲ್ಲ. ಇದರಿಂದ ಭಕ್ತರು ಆಟೋ, ಲಾರಿ ಹಾಗೂ ಇನ್ನಿತರ ವಾಹನಗಳಿಗೆ ಹೆಚ್ಚಿನ ಹಣವನ್ನು ನೀಡಿ ತೆರಳಬೇಕಾಗಿದೆ. ಅಲ್ಲದೇ ಕೆಲವರು ಮಂಗಲ ಗ್ರಾಮದಿಂದ 4 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಸಾಗಬೇಕಾಗಿದೆ. ಆದ್ದರಿಂದ ಕೊಳ್ಳೇಗಾಲ ಹಾಗೂ ಹನೂರಿನಿಂದ ಬೂದುಬಾಳು ಗ್ರಾಮಕ್ಕೆ ಭಕ್ತರ ಸಂಖ್ಯೆಗೆ ಅನುಗುಣವಾಗಿ ಸಮರ್ಪಕ ಬಸ್ ಸೌಕರ್ಯವನ್ನು ಒದಗಿಸುವುದರ ಮೂಲಕ ಅನುಕೂಲ ಕಲ್ಪಿಸುವಂತೆ ಗ್ರಾಮದ ರಾಜೇಶ್ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts