More

  ಗುಜರಿಯಿಂದ ಸಂಚಾರಕ್ಕೆ ಅಡಚಣೆ

  ಗಂಗೊಳ್ಳಿ: ಮರ ಹಾಗೂ ಇನ್ನಿತರ ಗುಜರಿ ಸಾಮಾನು ರಸ್ತೆಯ ಮೇಲೆ ಹಾಕುತ್ತಿರುವುದುರಿಂದ ರಸ್ತೆ ದಿನದಿಂದ ದಿನಕ್ಕೆ ಕಿರಿದಾಗುತ್ತಾ ಹೋಗುತ್ತಿದೆ.

  ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ವಠಾರ ಮೀನುಗಾರಿಕಾ ಬೋಟುಗಳ ತಂಗುದಾಣವಾಗಿದ್ದು, ಈ ಪರಿಸರದಲ್ಲಿ ಬೋಟ್ ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದೆ. ಹೀಗಾಗಿ ಪ್ರತಿನಿತ್ಯ ನೂರಾರು ವಾಹನಗಳು ಮ್ಯಾಂಗನೀಸ್ ರಸ್ತೆ ಮೂಲಕ ಸಂಚರಿಸುತ್ತಿದ್ದು, ಸದಾ ವಾಹನ ನಿಬಿಢತೆಯಿಂದ ಕೂಡಿರುವ ಪ್ರದೇಶ. ಪ್ರತಿನಿತ್ಯ ನೂರಾರು ವಾಹನ ಮತ್ತು ಜನರು ಸಂಚರಿಸುತ್ತಿರುವ ರಸ್ತೆಯ ಇಕ್ಕೆಲಗಳಲ್ಲಿ ನಿರುಪಯುಕ್ತ ಮರದ ಸಾಮಾನು, ಇನ್ನಿತರ ನಿರುಪಯುಕ್ತ ವಸ್ತುಗಳು ಹಾಗೂ ಗುಜರಿ ವಸ್ತುಗಳನ್ನು ರಾಶಿ ಹಾಕಲಾಗಿದೆ. ಎರಡು ವಾಹನಗಳು ಸಂಚರಿಸಲು ಕಷ್ಟವಾಗುವ ಈ ರಸ್ತೆಯಲ್ಲಿ ನಿರುಪಯುಕ್ತ ಮರದ ಸಾಮಾನುಗಳನ್ನು ರಸ್ತೆಗೆ ಚಾಚಿಕೊಂಡಂತೆ ಹಾಕಲಾಗಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ.

  ಅಪಘಾತ ಸಾಧ್ಯತೆ

  ರಸ್ತೆಯ ಬದಿ ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದು ಇನ್ನೊಂದು ಬದಿಯಲ್ಲಿ ನಿರುಪಯುಕ್ತ ಮರದ ದಿಮ್ಮಿ ಹಾಗೂ ವಸ್ತುಗಳನ್ನು ಇಡಲಾಗಿದೆ. ವಾಹನ ಸವಾರರು ರಸ್ತೆಯ ಬದಿಯಲ್ಲಿ ಹಾಕಿರುವ ನಿರುಪಯುಕ್ತ ಮರದ ಸಾಮಾನು ಹಾಗೂ ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಅಂದಾಜಿಸಲಾಗದೆ ಇದಕ್ಕೆ ಡಿಕ್ಕಿ ಹೊಡೆದು ಅಪಘಾತಗಳಾಗುವ ಸಾಧ್ಯತೆ ಇದೆ.

  ಈ ರೀತಿಯಾಗಿ ರಸ್ತೆಗೆ ಚಾಚಿಕೊಂಡು ನಿರುಪಯುಕ್ತ ವಸ್ತು ಇಟ್ಟಿರುವುದರಿಂದ ರಾತ್ರಿ ವೇಳೆ ವಾಹನ ಸವಾರರು, ಪಾದಚಾರಿಗಳು ಮತ್ತು ಮೀನುಗಾರರು ಜಾಗರೂಕತೆಯಿಂದ ಸಂಚರಿಸಬೇಕಾದ ಅನಿವಾರ್ಯತೆಯಿದೆ. ಈ ಪ್ರದೇಶದಲ್ಲಿ ಗುಜರಿ ಸಾಮಾನು ರಾಶಿ ಹೆಚ್ಚಾಗುತ್ತಿದ್ದು, ನಿರುಪಯುಕ್ತ ವಸ್ತುಗಳು ಇನ್ನಷ್ಟು ರಸ್ತೆಗೆ ಬರುತ್ತಿವೆ. ಇದರಿಂದ ಮುಂದಿನ ದಿನಗಳಲ್ಲಿ ಅಪಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ರಸ್ತೆಗೆ ಚಾಚಿಕೊಂಡಿರುವ ನಿರುಪಯುಕ್ತ ಮರದ ಸಾಮಾನು ಹಾಗೂ ಗುಜರಿ ವಸ್ತುಗಳನ್ನು ರಸ್ತೆಯಿಂದ ದೂರಕ್ಕೆ ಹಾಕಿಸಲು ಕ್ರಮಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

  ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ಮೇಲೆ ಹಾಕಿರುವ ನಿರುಪಯುಕ್ತ ಮರದ ಸಾಮಾನು ಮತ್ತು ಗುಜರಿ ವಸ್ತುಗಳನ್ನು ತೆರವುಗೊಳಿಸಲು ಕ್ರಮಕೈಗೊಂಡು ಮುಂದಿನ ದಿನಗಳಲ್ಲಿ ರಸ್ತೆಯ ಮೇಲೆ ಮತ್ತು ರಸ್ತೆಗೆ ತಾಗಿಕೊಂಡು ಯಾವುದೇ ನಿರುಪಯುಕ್ತ ವಸ್ತುಗಳನ್ನು ಹಾಕದಂತೆ ಸೂಚನೆ ನೀಡಲಾಗುವುದು.

  -ಶ್ರೀನಿವಾಸ ಖಾರ್ವಿ, ಅಧ್ಯಕ್ಷರು, ಗ್ರಾಪಂ ಗಂಗೊಳ್ಳಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts