More

    ಚರಂಡಿ ಹೂಳೆತ್ತದಿದ್ದರೆ ಸಮಸ್ಯೆ

    ಗಂಗೊಳ್ಳಿ: ಮಳೆಗಾಲ ಸಮೀಪಿಸುತ್ತಿದ್ದರೂ ಗಂಗೊಳ್ಳಿಯಲ್ಲಿ ಚರಂಡಿ ಹೂಳೆತ್ತುವ ಮತ್ತು ಮಳೆಗಾಲದ ಪೂರ್ವದಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಸ್ಥಳೀಯಾಡಳಿತ ಮೌನ ವಹಿಸಿದೆ.

    ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ

    ಗಂಗೊಳ್ಳಿಯ ಜನರಿಗೆ ಮಳೆಗಾಲ ಬಂತೆಂದರೆ ಚಳಿ ಹಿಡಿಯಲು ಪ್ರಾರಂಭವಾಗುತ್ತದೆ. ಗಂಗೊಳ್ಳಿಯಲ್ಲಿ ಮಳೆ ನೀರು ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆ ನೀರು ಅಂಗಡಿ ಮುಂಗಟ್ಟು ಹಾಗೂ ಮನೆಗಳಿಗೆ ನುಗ್ಗಿ ಸಮಸ್ಯೆ ಯಾಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಇರುವ ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಸ್ಥಳೀಯಾಡಳಿತ ಎಡವುತ್ತಿದ್ದು, ಇದರಿಂದಾಗಿಯೇ ಮಳೆಗಾಲದಲ್ಲಿ ಕೆಲ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

    ಮಳೆ ನೀರು ರಸ್ತೆ ಮೇಲೆ

    ಗಂಗೊಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ರಾಮ ಮಂದಿರದ ಬಳಿ, ಅರೆಕಲ್ಲು, ಜ್ಯೂನಿಯರ್ ಕಾಲೇಜು ಸಮೀಪ, ಚರ್ಚ್ ರಸ್ತೆ ಬಳಿ, ಮ್ಯಾಂಗನೀಸ್ ರೋಡ್ ವಠಾರ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಚರಂಡಿಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸದಿರುವುದರಿಂದ ಮಳೆ ನೀರು ಹರಿದು ಹೋಗಲು ಅಡಚಣೆಯಾಗಿ ಮಳೆ ನೀರು ರಸ್ತೆ ಮೇಲೆ ಹರಿದು, ಮನೆ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗುತ್ತದೆ.

    ಅತಿಕ್ರಮಣ, ಹೂಳು ಸಮಸ್ಯೆ

    ಗಂಗೊಳ್ಳಿಯ ಮುಖ್ಯರಸ್ತೆ ಮೂಲಕ ಚರ್ಚ್ ರಸ್ತೆಯಿಂದ ಸಾಗುವ ದುರ್ಗಿಕೇರಿ ಪ್ರದೇಶದಲ್ಲಿ ಚರಂಡಿಯ ಬಹುಭಾಗ ಅತಿಕ್ರಮಣಗೊಂಡಿದೆ. ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ತ್ಯಾಜ್ಯ ಚರಂಡಿಗಳಲ್ಲಿ ಶೇಖರಣೆಗೊಂಡಿದೆ. ಅರೆಕಲ್ಲು ಪ್ರದೇಶದ ಮೂಲಕ ಸಾಗುವ ಚರಂಡಿಯ ಬಹುಭಾಗ ಅತಿಕ್ರಮಣಗೊಂಡು ಚರಂಡಿ ಚಿಕ್ಕದಾಗುತ್ತಾ ಸಾಗಿದೆ. ಚರಂಡಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ಹಾಗೂ ಹೂಳು ತುಂಬಿಕೊಂಡಿದ್ದು ಗಿಡಗಂಟಿಗಳು ಬೆಳೆದು ನಿಂತಿದೆ. ದೊಡ್ಡಹಿತ್ಲು ಚರಂಡಿ ಸಂಪೂರ್ಣವಾಗಿ ತ್ಯಾಜ್ಯಗಳಿಂದ ಕೂಡಿದ್ದು ಮಳೆ ನೀರು ಹರಿದು ಹೋಗಲು ಸಾದ್ಯವಿಲ್ಲದಷ್ಟು ತ್ಯಾಜ್ಯ ತುಂಬಿ ತುಳುಕಾಡುತ್ತಿದೆ.

    Drainage Problem 2

    ಪ್ರತಿವರ್ಷ ಮಳೆಗಾಲದ ಸಮಯದಲ್ಲಿ ಕಾಡುತ್ತಿರುವ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸ್ಥಳೀಯಾಡಳಿತ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಮತ್ತು ಚರಂಡಿಗಳಲ್ಲಿರುವ ಹೂಳು ತೆಗೆದು ಮಳೆನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಗಂಗೊಳ್ಳಿಯ ಮಳೆ ನೀರು ಹರಿದು ಹೋಗುವ ಚರಂಡಿಗಳ ಸ್ವಚ್ಛತೆಗೆ ಕ್ರಮಕೈಗೊಳ್ಳಲಾಗುತ್ತಿದ್ದು, ಆದಷ್ಟು ಶೀಘ್ರ ಚರಂಡಿಗಳ ಗಿಡಗಂಟಿಗಳನ್ನು ಹಾಗೂ ಹೂಳನ್ನು ತೆಗೆದು ಸ್ವಚ್ಛಗೊಳಿಸಲಾಗುವುದು.

    -ಶ್ರೀನಿವಾಸ ಖಾರ್ವಿ, ಅಧ್ಯಕ್ಷರು, ಗಂಗೊಳ್ಳಿ ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts