More

    ಪಡುಬಿದ್ರಿಯಲ್ಲಿ ಘನತ್ಯಾಜ್ಯ ವಿಲೇಗೆ ಜಾಗದ ಕೊರತೆ

    ಹೇಮನಾಥ್ ಪಡುಬಿದ್ರಿ

    ಉಡುಪಿ ಜಿಲ್ಲೆಯ ಅತೀ ದೊಡ್ಡ ಗ್ರಾಪಂ ಪಡುಬಿದ್ರಿಯಲ್ಲಿ ಅಸಮರ್ಪಕ ಘನತ್ಯಾಜ್ಯ ನಿರ್ವಹಣೆಯಿಂದ ತ್ಯಾಜ್ಯ ಸಮಸ್ಯೆ ಎಲ್ಲೆಡೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.

    ಸುಮಾರು 17 ಸಾವಿರ ಜನಸಂಖ್ಯೆಯಿರುವ ಪಡುಬಿದ್ರಿ ಗ್ರಾಪಂನಲ್ಲಿ ಎಲ್ಲ ತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಕನಿಷ್ಠ ಒಂದು ಎಕರೆ ಜಾಗದ ಅವಶ್ಯಕತೆಯಿದೆ. ಆದರೆ ಸೂಕ್ತ ಸರ್ಕಾರಿ ಜಮೀನಿನ ಕೊರತೆಯಿಂದ ಕೆಲ ವರ್ಷಗಳ ಹಿಂದೆ ಗ್ರಾಪಂ ಮುಂಭಾಗದಲ್ಲಿಯೇ ಸುಮಾರು 500 ಚದರ ಅಡಿ ವಿಸ್ತೀರ್ಣದಲ್ಲಿ ಎಸ್‌ಎಲ್‌ಆರ್‌ಎಂ ಘಟಕ ಆರಂಭಿಸಿ, ಘನತ್ಯಾಜ್ಯವನ್ನು ನಿರ್ವಹಣೆ ಮಾಡಿ ವಿಂಗಡಿಸಲಾರಂಭಿಸಿತ್ತು. ಅ ಸಂದರ್ಭದಲ್ಲಿಯೇ ಮರು ಬಳಕೆಯಾಗದ ವಸ್ತುಗಳನ್ನು ವಿಲೇ ಮಾಡಲು ಸಮಸ್ಯೆ ಎದುರಾಗಿತ್ತು. ಆದರೂ ಮನೆ ಮನೆಗಳಿಂದ ಕಸ ಸಂಗ್ರಹಿಸಲು ಆರಂಭಿಸಲಾಯಿತಾದರೂ, ಸೂಕ್ತ ರೀತಿಯಲ್ಲಿ ನಿರ್ವಹಣೆಯಾಗದೆ ಗ್ರಾಪಂ ಮುಂಭಾಗ ಡಂಪಿಂಗ್‌ಯಾರ್ಡ್ ಆಗಿ ಮಾರ್ಪಾಡಾಗಿದೆ.

    ಕೆಲ ಸಮಯದ ಹಿಂದೆ ಕಾಪು ಪುರಸಭೆಯಲ್ಲಿ ಕಾಡಿ ಬೇಡಿ ಎಲ್ಲೂರಿನಲ್ಲಿರುವ ಘನತ್ಯಾಜ್ಯ ನಿರ್ವಹಣಾ ಘಟಕ ಪ್ರದೇಶದಲ್ಲಿ ತ್ಯಾಜ್ಯವನ್ನು ಸ್ಥಳಾಂತರಿಸಲಾಗಿತ್ತು. ಇದೀಗ ಮತ್ತೆ ಬೆಟ್ಟದಷ್ಟು ತ್ಯಾಜ್ಯವನ್ನು ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದೆ. ಅ ತ್ಯಾಜ್ಯ ಗೋಣಿಚೀಲಗಳು ಹರಿದುಹೋಗಿ ಕಸವೆಲ್ಲ ಎಲ್ಲೆಂದರಲ್ಲಿ ಗಾಳಿಗೆ ಹಾರಿ ಹೋಗುತ್ತಿದೆ. ಪರಿಸರವೆಲ್ಲ ದುರ್ವಾಸನೆಯಿಂದ ಕೂಡಿದ್ದು, ಜನ ಮೂಗುಮುಚ್ಚಿ ನಡೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

    ಬೆಂಕಿ ಹಚ್ಚಿ ಪರಿಹಾರ

    ಘನತ್ಯಾಜ್ಯಕ್ಕೆ ಬೆಂಕಿ ಹಚ್ಚದಂತೆ ಕೋರ್ಟ್ ಆದೇಶವಿದ್ದರೂ, ಅದನ್ನು ಮೀರಿ ರಸ್ತೆ ಬದಿ ಸುರಿದ ತ್ಯಾಜ್ಯ ರಾಶಿಗೆ ಬೆಂಕಿ ಹಚ್ಚಿ ಪಡುಬಿದ್ರಿ ಗ್ರಾಪಂ ಮತ್ತೊಂದು ರೀತಿಯಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.

    ನೂರಾರು ಜನ ಸಂಚರಿಸುವ ಪಡುಬಿದ್ರಿ ಅಬ್ಬೇಡಿ, ಪೊಲೀಸ್ ವಸತಿಗೃಹ, ಅಲಂಗಾರ್ ಸಂಪರ್ಕ ರಸ್ತೆಗಳ ಚರಂಡಿಗಳು ತ್ಯಾಜ್ಯ ಸುರಿದು ಡಂಪಿಂಗ್‌ಯಾರ್ಡ್ ಆಗಿ ಮಾರ್ಪಟ್ಟಿವೆ. ಈ ಬಗ್ಗೆ ಸಾರ್ವಜನಿಕರಿಂದ ಗ್ರಾಪಂಗೆ ಸಾಕಷ್ಟು ಬಾರಿ ದೂರಿದರೂ, ಕ್ರಮವಹಿಸಿರಲಿಲ್ಲ. ಜನರ ದೂರಿನ ಬಳಿಕ ಕೆಲ ಪ್ರದೇಶದಲ್ಲಿ ತ್ಯಾಜ್ಯ ಸುರಿದರೆ 1000 ರೂ. ದಂಡವೆಂಬ ಫಲಕ ಹಾಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇದೀಗ ಅ ಸ್ಥಳಗಳನ್ನು ಬಿಟ್ಟು ಬೇರೆಡೆ ತ್ಯಾಜ್ಯ ಸುರಿಯಲಾಗುತ್ತಿದೆೆ.

    fire on waste
    ಪಡುಬಿದ್ರಿ ಕಂಚಿನಡ್ಕ ಪೊಲೀಸ್ ವಸತಿಗೃಹ ಸಂಪರ್ಕ ರಸ್ತೆಯಲ್ಲಿ ಸುರಿದ ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುರು.

    ಮದಗವೇ ತಿಪ್ಪೆಗುಂಡಿ

    ಸುಜ್ಲಾನ್ ಪುನರ್ವಸತಿ ಕೇಂದ್ರ ಬಳಿ ನೂರಾರು ವರ್ಷಗಳಿಂದ ಅದೆಷ್ಟೋ ಕೃಷಿಕರಿಗೆ ಅನುಕೂಲಕರವಾಗಿದ್ದ ಕೆರೆತಕಾಡು ಮದಗವನ್ನು ತಿಪ್ಪೆಗುಂಡಿಯಾಗಿಸುವ ಕೆಲಸ ಗ್ರಾಪಂನಿಂದ ಪರೋಕ್ಷವಾಗಿ ನಡೆದಿದೆ. ಡಿಸೆಂಬರ್‌ವರೆಗೆ ನೀರು ತುಂಬಿ ಪರಿಸರದ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಈ ಮದಗ ಅನುಕೂಲ ಕಲ್ಪಿಸುತ್ತಿತ್ತು.ಪ್ರಸಕ್ತ ಸಾರ್ವಜನಿಕರು ಮನಬಂದಂತೆ ತ್ಯಾಜ್ಯವನ್ನು ತಂದು ಎಸೆದ ಪರಿಣಾಮ ಪರಿಸರ ದುರ್ವಾಸನೆಯುಕ್ತವಾಗಿ ನಡೆದಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸರದಲ್ಲಿ ಬೀದಿ ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ಆರಂಭದಲ್ಲಿಯೇ ಗ್ರಾಪಂ ಗಮನಕ್ಕೆ ತಂದರೂ ಫಲಪ್ರದವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

    ಜೀವಜಲ ಮಲಿನ ಭೀತಿ

    ಗ್ರಾಪಂ ಮುಂಭಾಗದಲ್ಲಿ ತ್ಯಾಜ್ಯ ಶೇಖರಣೆಯಿಂದ ಹರಿಯುವ ಮಲಿನ ಅಲ್ಲಿಯೇ ಇರುವ ಕೊಳವೆ ಬಾವಿ ಸುತ್ತ ಶೇಖರಣೆಯಾಗುತ್ತಿದೆ. ಈ ನೀರು ಭೂಮಿಯಲ್ಲಿ ಇಂಗಿ ಮಲಿನಗೊಂಡು ಮತ್ತೆ ಮನೆ ಸಂಪರ್ಕದ ಪೈಪ್‌ಲೈನ್ ಸೇರಿ ಜೀವಜಲ ಮಲಿನಗೊಳ್ಳುವ ಭೀತಿಯೂ ಎದುರಾಗಿದೆ.

    dumping water
    ಘನತ್ಯಾಜ್ಯ ಶೇಖರಣಾ ಸ್ಥಳದಿಂದ ನೀರು ಹರಿದು ಮಲಿನಗೊಳ್ಳುತ್ತಿರುವ ಕೊಳವೆಬಾವಿ.

    ಸೂಕ್ತ ಜಮೀನಿಗಾಗಿ ಹುಡುಕಾಟ

    ಘನತ್ಯಾಜ್ಯ ವಿಲೇಗಾಗಿ ಇದ್ದ ಜಮೀನು ಸುಜ್ಲಾನ್ ಯೋಜನೆಗೆ ಸ್ವಾದೀನವಾದ ಬಳಿಕ ಗ್ರಾಪಂ ಜಮೀನಿಲ್ಲದೆ ಪರದಾಡುವಂತಾಗಿದೆ. ಅಂದು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಇದೀಗ ಸುಜ್ಲಾನ್ ಯೋಜನೆ ನಿರೀಕ್ಷಿಸಿದಷ್ಟು ಯಶಸ್ಸಾಗದೆ ಇದ್ದ ಜಮೀನುಗಳನ್ನು ಮಾರಾಟ ಮಾಡುತ್ತಿದೆ. ಗ್ರಾಪಂ ಅವರಿಂದ 3 ಎಕರೆ ಜಮೀನಿಗಾಗಿ ಜಿಲ್ಲಾಧಿಕಾರಿ, ಶಾಸಕರ ಮೂಲಕ ಪ್ರಯತ್ನ ನಡೆಸಿದ್ದರೂ ಧನಾತ್ಮಕ ಸ್ಪಂದನೆ ಇನ್ನೂ ದೊರೆತಿಲ್ಲ. ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಎಲ್ಲೆಂದರಲ್ಲಿ ಸುರಿದ ತ್ಯಾಜ್ಯದಿಂದ ಮತ್ತಷ್ಟು ಸಮಸ್ಯೆಗಳಾದಂತೆ ಗ್ರಾಪಂ ಎಚ್ಚೆತ್ತು ಕೊಳ್ಳಬೇಕೆಂಬುದು ಗ್ರಾಮಸ್ಥರ ಆಶಯ.

    ಘನತ್ಯಾಜ್ಯ ವಿಲೇಗೆ ಗ್ರಾಪಂ ವ್ಯಾಪ್ತಿಯಲ್ಲಿ ಸೂಕ್ತ ಜಮೀನು ಇನ್ನೂ ಲಭ್ಯವಾಗಿಲ್ಲ. ಗ್ರಾಪಂ ಮುಂಭಾಗದ ಎಸ್‌ಎಲ್‌ಆರ್‌ಎಂ ಘಟಕ ಸಹಿತ ಘನತ್ಯಾಜ್ಯ ಸಂಗ್ರಹ ಗುತ್ತಿಗೆ ವಹಿಸಿಕೊಂಡಿದ್ದಾರ ಇತ್ತೀಚೆಗೆ ಮೃತಪಟ್ಟಿದ್ದಾರೆ. ಅವರ ನಿರ್ವಹಣೆ ಅವಧಿ ಜೂನ್‌ಗೆ ಮುಕ್ತಾಯವಾಗಲಿದೆ. ಬಳಿಕ ಸಂಜೀವನಿ ಒಕ್ಕೂಟಕ್ಕೆ ನಿರ್ವಹಣೆಗೆ ವಹಿಸಲಾಗುವುದು. ಗ್ರಾಪಂ ಮುಂಭಾಗ ಸುರಿದಿರುವ ತ್ಯಾಜ್ಯ ಹಾರಿ ಹೋಗದಂತೆ ನೆಟ್ ಕಟ್ಟಲಾಗುವುದು.

    -ಪಂಚಾಕ್ಷರಿ ಸ್ವಾಮಿ ಕೇರಿಮಠ, ಪಡುಬಿದ್ರಿ ಗ್ರಾಪಂ ಪಿಡಿಒ

    ಪಡುಬಿದ್ರಿ ಗ್ರಾಪಂ ಘನತ್ಯಾಜ್ಯ ಸಮಸ್ಯೆ ಬಗ್ಗೆ ಕ್ರಮವಹಿಸುವಂತೆ ಗ್ರಾಪಂ ಪಿಡಿಒ ಅವರಿಗೆ ಈ ಹಿಂದೇಯೇ ತಿಳಿಸಲಾಗಿತ್ತು. ಮೇ 15ರಂದು ಗ್ರಾಪಂಗೆ ಖುದ್ದು ಆಗಮಿಸಿ ಪರಿಶೀಲನೆ ನಡೆಸಲಾಗುವುದು.

    -ನವೀನ್, ಕಾರ್ಯನಿರ್ವಹಣಾಧಿಕಾರಿ ಕಾಪು ತಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts