More

    ರಿಂಗ್ ರೋಡ್‌ಗೆ ಶೆಡ್ ಅಡ್ಡಿ

    ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

    ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ಸಮೀಪದಿಂದ ದಾಕುಹಿತ್ಲು ತನಕ ಪಂಚಗಂಗಾವಳಿ ನದಿ ತೀರದಲ್ಲಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ರಿಂಗ್ ರೋಡ್ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಸುಮಾರು 30 ಮೀಟರ್ ರಿಂಗ್ ರೋಡ್ ನಿರ್ಮಾಣಕ್ಕೆ ನದಿ ತಟದಲ್ಲಿರುವ ಮನೆಯೊಂದರ ಶೆಡ್ ಅಡ್ಡಿಯಾಗಿದೆ.

    ವಿವಾದದಿಂದ ಕಾಮಗಾರಿ ಸ್ಥಗಿತ

    ಗಂಗೊಳ್ಳಿಯಲ್ಲಿ ಪಂಚಗಂಗಾವಳಿ ನದಿ ತೀರದಲ್ಲಿ ಸುಮಾರು 1.4 ಕಿ.ಮೀ ಉದ್ದದ ರಿಂಗ್ ರೋಡ್ ನಿರ್ಮಿಸಲು ಸರ್ಕಾರ ಸಣ್ಣ ನೀರಾವರಿ ಇಲಾಖೆ ಮೂಲಕ 8 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಕಳೆದ ವರ್ಷ ಮೇ 21ರಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಗಂಗೊಳ್ಳಿ-ಮ್ಯಾಂಗನೀಸ್ ರಸ್ತೆ ಸಮೀಪದಿಂದ ದಾಕುಹಿತ್ಲು ತನಕ ಪಂಚಗಂಗಾವಳಿ ನದಿ ತೀರದಲ್ಲಿ ಸುಮಾರು 1.4 ಮೀಟರ್ ಉದ್ದ, 6 ಮೀಟರ್ ಅಗಲದ ನಂದಿ ದಂಡೆ ಸಂರಕ್ಷಣಾ ಕಾಮಗಾರಿ ಮುಕ್ತಾಯ ಹಂತಕ್ಕೆ ತಲುಪಿದ್ದು, 30 ಮೀಟರ್ ಕಾಮಗಾರಿ ಶೆಡ್ ವಿವಾದದಿಂದ ಸ್ಥಗಿತಗೊಂಡಿದೆ.

    Ring road

    ದಾಕುಹಿತ್ಲು ಪ್ರದೇಶದಲ್ಲಿ ನದಿ ತಟದಲ್ಲಿ ನಿರ್ಮಿಸಿಕೊಂಡಿರುವ ಮನೆಯ ಶೆಡ್ ವಿವಾದದ ಕೇಂದ್ರ ಬಿಂದುವಾಗಿದ್ದು, ಶೆಡ್ ತೆರವುಗೊಳಿಸಿ ರಿಂಗ್ ರೋಡ್ ಕಾಮಗಾರಿ ನಡೆಸಬೇಕೆಂದು ಸ್ಥಳೀಯ ಕೆಲವರು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಗಂಗೊಳ್ಳಿ ಗ್ರಾಪಂ, ಸಿಆರ್‌ಜಡ್ ಮತ್ತು ಬಂದರು ಇಲಾಖೆಗೆ ದೂರು ನೀಡಲಾಗಿದ್ದು, ಪ್ರಕರಣ ಇನ್ನೂ ಇತ್ಯರ್ಥಗೊಂಡಿಲ್ಲ.

    ಸರ್ವೇಗೆ ಮನವಿ

    ಬಂದರು ಇಲಾಖೆ ಅಧಿಕಾರಿಗಳು ಸರ್ವೇ ಮಾಡಿಕೊಡುವಂತೆ ಕುಂದಾಪುರ ತಹಸೀಲ್ದಾರ್‌ಗೆ ಮನವಿ ಮಾಡಿದ್ದಾರೆ. ಇತ್ತ ಗ್ರಾಪಂ ಬಂದರು ಇಲಾಖೆಗೆ ಸೂಕ್ತ ಕ್ರಮಕ್ಕಾಗಿ ಪತ್ರ ಬರೆದಿದೆ. ಹೀಗಾಗಿ 30 ಮೀಟರ್ ರಿಂಗ್ ರೋಡ್ ಕಾಮಗಾರಿ ಸ್ಥಗಿತಗೊಂಡಿದ್ದು, ಉಳಿದ ಭಾಗದಲ್ಲಿ ಕಾಮಗಾರಿ ಬಿರುಸಿನಿಂದ ಸಾಗಿದೆ. ಮ್ಯಾಂಗನೀಸ್ ರಸ್ತೆ ಸಮೀಪದಿಂದ ದಾಕುಹಿತ್ಲು ಪ್ರದೇಶದ ತನಕ ಈಗಿನ ತೀರ ಪ್ರದೇಶ ಬಿಟ್ಟು ಹೊರಗೆ ರಿಂಗ್ ರೋಡ್ ನಿರ್ಮಿಸಲಾಗಿರುವುದರಿಂದ, ದಾಕುಹಿತ್ಲು ಪ್ರದೇಶದಲ್ಲಿ ನದಿಯ ತಟದಲ್ಲಿರುವ ಮನೆಯ ಶೆಡ್‌ನ ಹೊರಭಾಗದಲ್ಲಿ ರಿಂಗ್ ರೋಡ್ ನಿರ್ಮಿಸುವುದು ಸೂಕ್ತ ಎಂಬುದು ಕೆಲವರ ಅಭಿಪ್ರಾಯ. ಒಂದು ಶೆಡ್‌ನಿಂದ ರಿಂಗ್ ರೋಡ್ ಕಾಮಗಾರಿ ಸ್ಥಗಿತಗೊಳಿಸುವುದು ಸರಿಯಲ್ಲ ಎಂಬ ಮಾತು ಕೇಳಿ ಬಂದಿದೆ.
    ಒಟ್ಟಿನಲ್ಲಿ ಗಂಗೊಳ್ಳಿ ನಾಗರಿಕರ ಬಹುನಿರೀಕ್ಷಿತ ರಿಂಗ್ ರೋಡ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದಲ್ಲಿ ಶೆಡ್ ವಿವಾದ ಕಾಮಗಾರಿಗೆ ತಡೆಯೊಡ್ಡಿದೆ. ಈ ಸಮಸ್ಯೆ ಬಗೆಹರಿಸಿ ರಿಂಗ್ ರೋಡ್ ಕಾಮಗಾರಿ ಮುಂದುವರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

    ಸುಮಾರು 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗಂಗೊಳ್ಳಿ ಗ್ರಾಮಕ್ಕೆ ಪರ್ಯಾಯ ರಸ್ತೆ ಇರಲಿಲ್ಲ. ಮುಖ್ಯವಾಗಿ ಪಂಚಗಂಗಾವಳಿ ನದಿ ತೀರಕ್ಕೆ ಹೊಂದಿಕೊಂಡಿರುವ ದಾಕುಹಿತ್ಲು, ಗುಡ್ಡೆಕೇರಿ, ತಾರಿಮನೆ ಪರಿಸರದ ಜನರು ಸಂಪರ್ಕ ರಸ್ತೆಯಿಲ್ಲದೆ ಮೂಲಸೌಲಭ್ಯಗಳಿಂದ ವಂಚಿತರಾಗಿದ್ದರು. ಮನೆಗೆ ಬೇಕಾಗುವ ದಿನಸಿ ಸಾಮಾನು ಇನ್ನಿತರ ಅಗತ್ಯ ವಸ್ತು ಕೊಂಡೊಯ್ಯಲು ಈ ಭಾಗದ ಜನರು ಪಡುತ್ತಿದ್ದ ಬವಣೆ ಹೇಳತೀರದು. ಮನೆ ಕಟ್ಟಿಕೊಳ್ಳಲು ಕಲ್ಲು, ಮಣ್ಣು ಮತ್ತಿತರ ಸಾಮಗ್ರಿ ಸಾಗಿಸಲು ಸಂಪರ್ಕ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಜನರು ಸುಮಾರು 2 ಕಿ.ಮೀ ಸಾಮಾನುಗಳನ್ನು ತಲೆ ಮೇಲೆ ಹೊತ್ತುಕೊಂಡೇ ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ಉದ್ಭವಿಸಿತ್ತು. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗಬೇಕಾದರೆ ರೋಗಿಯನ್ನು ಹೊತ್ತುಕೊಂಡು ಮುಖ್ಯರಸ್ತೆ ತನಕ ಸಾಗಬೇಕಾದ ಅನಿವಾರ್ಯತೆ ಇತ್ತು.

    ದಾಕುಹಿತ್ಲು ಪ್ರದೇಶದಲ್ಲಿ ನದಿಯ ತಟದಲ್ಲಿ ನಿರ್ಮಿಸಿರುವ ಮನೆಯ ಶೆಡ್ ತೆರವುಗೊಳಿಸಿ ರಿಂಗ್ ರೋಡ್ ನಿರ್ಮಿಸಬೇಕು. ಶೆಡ್ ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಾಗಿದೆ. ಬಂದರು ಇಲಾಖೆ ಅಧಿಕಾರಿಗಳು ಜಾಗದ ಸರ್ವೇ ಬಗ್ಗೆ ತಹಸೀಲ್ದಾರ್ ಅವರಿಗೆ ಪತ್ರ ಬರೆದಿದ್ದು, ಸಮಸ್ಯೆ ಆದಷ್ಟು ಶೀಘ್ರ ಬಗೆಹರಿಯುವ ವಿಶ್ವಾಸವಿದೆ.
    -ಪಿ.ಬಿ.ನಾಗರಾಜ ಖಾರ್ವಿ
    ಸದಸ್ಯರು, ಗ್ರಾಪಂ ಗಂಗೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts