More

    ಕುಗ್ಗಿಹೋದ ಕುಬ್ಜೆ

    -ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಮಳೆಗಾಲದಲ್ಲಿ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ಗರ್ಭಗುಡಿ ಪ್ರವೇಶಿಸಿ ದೇವಿಯ ಪಾದ ಸ್ಪರ್ಶಿಸುವ ಕುಬ್ಜೆ ಈ ಬೇಸಿಗೆಯಲ್ಲಿ ಬಸವಳಿದು ಹರಿವು ನಿಲ್ಲಿಸಿದ್ದಾತ್ತಾಳೆ. ಶಾಪಗ್ರಸ್ತೆ ಕುಬ್ಜೆ ಬೇಸಿಗೆ ಆರಂಭದಲ್ಲಿ ತೆವಳಲಿಕ್ಕೆ ಆರಂಭಿಸಿ ನಂತರ ಬಸವನಹುಳು ಹಾಗೆ ಚಲಿಸಿ ಕಡುಬೇಸಿಗೆ ಹೊತ್ತಿಗೆ ಬತ್ತಿ ಬಸವಳಿದು ಕುಗ್ಗಿ ಹೋಗುತ್ತಾಳೆ.

    ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಜನ ಹೈರಾಣಾದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಕಣ್ಣೀರು ಸುರಿಸುವ ಸ್ಥಿತಿ ಕುಬ್ಜೆ ತೀರದ ಜನರದ್ದು. ಸರ್ಕಾರ ಕುಡಿಯುವ ನೀರು ಪೂರೈಕೆಗಾಗಿ ಕೋಟ್ಯಾಂತರ ರೂ. ಅನುದಾನದಲ್ಲಿ ಕೊಳವೆಬಾವಿ, ಏತನೀರಾವರಿ ಯೋಜನೆಗಳನ್ನು ಮಾಡಿದ್ದರೂ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಮಾತ್ರ ವರ‌್ಷದಿಂದ ವರ‌್ಷಕ್ಕೆ ಕುಸಿಯುತ್ತಿದೆ. ಕಡುಬೇಸಗೆಯಲ್ಲಿ ಇದ್ದಬದ್ದ ನೀರೆಲ್ಲ ಬಸಿದು ತೆಗೆಯುವುದರ ಪರಿಣಾಮ ಜಿಲ್ಲೆಯ ಅಂತರ್ಜಲ ಮಟ್ಟ 1.34 ಮೀ. ಕುಸಿದಿದೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ.

    ತಾಪಮಾನ ಗರಿಷ್ಠ ಪ್ರಮಾಣದಲ್ಲಿ ಏರುತ್ತಿದ್ದು, ಇದರಿಂದಾಗಿ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ. ಇದರ ಪರಿಣಾಮ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನಗರ, ಗ್ರಾಮೀಣ ಪ್ರದೇಶಗಳ ಬಾವಿ, ಕೆರೆಗಳು ಬತ್ತಿ ಹೋಗಿವೆ. ಇದರಿಂದಾಗಿ ಹಲವೆಡೆಗಳಲ್ಲಿ ಈಗಾಗಲೇ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿ ಟ್ಯಾಂಕರ್ ನೀರು ಪೂರೈಕೆಗೆ ಭಾರಿ ಬೇಡಿಕೆ ಬಂದಿದೆೆ.

    ಕೊಳವೆಬಾವಿಗಳಲ್ಲಿ ನೀರಿಲ್ಲ

    2022 ಏಪ್ರಿಲ್ ಅಂತ್ಯಕ್ಕೆ ಜಿಲ್ಲೆಯ ಅಂತರ್ಜಲ ಮಟ್ಟ 8.30 ಮೀ.ನಷ್ಟಿತ್ತು. ಈವರ್ಷ 9.64 ಮೀ.ಗೆ ಇಳಿದಿದೆ. ಕಳೆದ ವರ್ಷದ ಮೇ ವೇಳೆಗೆ ಜಿಲ್ಲೆಯ ಅಂತರ್ಜಲ ಮಟ್ಟ 9.07 ಮೀ.ನಷ್ಟಿದ್ದರೆ, ಈ ಬಾರಿ ಏಪ್ರಿಲ್ ವೇಳೆಗೆ ಅದಕ್ಕಿಂತಲೂ ಆಳಕ್ಕಿಳಿದಿರುವುದು ಎಚ್ಚರಿಕೆ ಕರೆಗಂಟೆ. ಹಿಂದೆ ಕೊಳವೆಬಾವಿ ತೆಗೆದರೆ 250 ರಿಂದ ಗರಿಷ್ಠವೆಂದರೆ 300 ಮೀ. ಕೊರೆದರೂ ನೀರು ಸಿಗುತ್ತಿತ್ತು. ಈಗ 350 ರಿಂದ 400 ಮೀ. ಕೊರೆದರೂ ಕೆಲವೆಡೆಗಳಲ್ಲಿ ನೀರು ಸಿಗುತ್ತಿಲ್ಲ

    ಸ್ಥಳೀಯರು ಏನಂತಾರೆ?

    ನದಿನೀರಿನ ಅತಿಯದ ಬಳಕೆ, ಉಚಿತ ವಿದ್ಯುತ್ ಸಿಕ್ಕಿದ್ದರಿಂದ ಹೆಚ್ಚು ಅಶ್ವಶಕ್ತಿಯ ನೀರೆತ್ತುವ ಯಂತ್ರಬಳಸಿ ನೀರು ಸೋಸಿ ತೆಗೆಯುವುದು, ಬೆಟ್ಟಗುಡ್ಡಗಳನ್ನು ಅಗೆದು ಹೊಳೆ ಒಡಲು ತುಂಬುತ್ತಿರುವುದು, ಬೆಟ್ಟಗುಡ್ಡಗಳಲ್ಲಿ ಅಡಿಕೆ ಕೃಷಿ, ಹೊಳೆಯಲ್ಲಿ ನೀರಿರುವಲ್ಲೆಲ್ಲ ಜೆಸಿಬಿಯಲ್ಲಿ ಹೊಂಡ ತೆಗೆದು ನೀರು ಹರಿಯದಂತೆ ಎಲ್ಲ ನೀರು ಕೃಷಿಕಗೆ ಬಳಕೆ, ತಾಪಮಾನದ ಏರಿಕೆ ಕುಬ್ಜಾ ನದಿ ಹರಿವು ನಿಲ್ಲಿಸಲು ಕಾರಣ ಎನ್ನುವುದು ಸ್ಥಳೀಯರು ಕೊಡುವ ಕಾರಣ. ನೀರಿನ ಬಳಕೆಗೊಂದು ಸಮಯ ನಿಗದಿ ಮಾಡಬೇಕು. ನೀರಿದೆ ಮೋಟಾರ್ ಇದೆ, ಉಚಿತ ಕರೆಂಟ್ ಇದೆ ಅಂತ ನೀರು ಬಿಡುವುದು ಕೃಷಿಗೆ ಪೂರಕವಲ್ಲ ಎನ್ನುವ ಅರಿವು ಕೃಷಿಕರಿಗೆ ಮೂಡಿಸಬೇಕು. ಹೊಳೆಯಲ್ಲಿ ಗುಮ್ಮಿ ತೆಗೆಯುವುದು, ಹೊಳೆ ಪಾತ್ರದ ಮಣ್ಣ ತೆಗೆದಯುವುದನ್ನು ಕಡ್ಡಾಯವಾಗಿ ನಿಲ್ಲಿಸಿದರೆ ಹಿಂದಿನಂತೆ ಏಪ್ರಿಲ್ ಕೊನೆಯ ತನಕ ನೀರು ಸ್ವಲ್ಪ ಪ್ರಮಾಣದಲ್ಲಿ ಹರಿಯಯಬಹುದು ಎಂದು ಜನ ಸಲಹೆ ಕೊಡುತ್ತಿದ್ದಾರೆ.

    ಮಳೆ ನೀರು ಹಿಡಿದಿಡುವ ಪ್ರಯತ್ನಗಳು ಆದಲ್ಲಿ ಅಂತರ್ಜಲ ಮಟ್ಟ ವೃದ್ಧಿಸಬಹುದು. ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದ್ದು, ಎಚ್ಚರಿಕೆ ವಹಿಸಬೇಕಾಗಿದೆ. ಕೊಳವೆಬಾವಿ ಮರುಪೂರಣ, ಇಂಗುಗುಂಡಿ ರಚನೆ, ಭತ್ತದ ಕೃಷಿ ಪ್ರಮಾಣ ಹೆಚ್ಚಿಸಬೇಕು. ಕೃಷಿ ಭೂಮಿ ಹಾಳುಬಿಡುವುದು ನೀರಿನ ಮಟ್ಟ ಕುಸಿಯಲು ಕಾರಣವಾಗುತ್ತದೆ.

    -ಎಂ. ದಿನಕರ ಶೆಟ್ಟಿ, ಹಿರಿಯ ಭೂ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts