More

    ಜಡ್ಕಲ್‌ನಲ್ಲಿ ಅಕ್ರಮ ಕೆಂಪುಕಲ್ಲು ಗಣಿ

    -ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಹಿಂದಿನಿಂದ ನೋಡಿಕೊಂಡು ಬರುತ್ತಿದ್ದವರಿಗೆ ಕೊಡಚಾದ್ರಿ ನಿತ್ಯ ಹರಿದ್ವರ್ಣದ ಕಾಡಿನ ಅರಿವಿದೆ. ಈಗ ರಬ್ಬರ್ ಕಾಡು. ಘಟ್ಟದ ಬುಡದಲ್ಲಿ ಕೆಂಪುಕಲ್ಲು ಕಿತ್ತು ಬಿದ್ದ ಹೊಂಡದ ಸಾಲು ಸಾಲು ಮಿನಿ ಕೇರಳ ಅಂತಲೇ ಗುರುತಿಸಿಕೊಂಡ ಜಡ್ಕಲ್ ಗ್ರಾಮದ ಚಿತ್ರಣವಿದು.

    ದಟ್ಟಡವಿ, ಹೆಮ್ಮರಗಳ ಬದಲು ರಬ್ಬರ್ ಮರಗಳು. ಬೇರೆ ರಾಜ್ಯದಿಂದ ಜಡ್ಕಲ್ ಗ್ರಾಮಕ್ಕೆ ಬಂದವರು ಒಂದಿಷ್ಟು ಜಾಗ ಖರೀದಿಸಿ, ಅಕ್ರಮ ಸಕ್ರಮ, ಕುಮ್ಕಿ, 94ಸಿ ಹೀಗೆ ಜಾಗ ಮಂಜೂರು ಮಾಡಿ ಘಟ್ಟದ ಬುಡದಲ್ಲಿ ನಡೆಯುತ್ತಿರುವ ಗಣಿ ಘಟ್ಟದ ಬುಡಕ್ಕೆ ಅಪಾಯ ತಂದರೆ, ಹಸುರೆಲ್ಲಾ ಕರಗಿ, ಎಸ್ಟೇಟ್ ವಿಸ್ತರಣೆಗೆ ಘಟ್ಟದ ಹೊಳೆ ಹರಿಯುವುದು ನೀತಿದೆ. ಕಾಡು ಪ್ರಾಣಿಗಳು ನೀರು ಆಹಾರಕ್ಕಾಗಿ ನಾಡಿಗೆ ಬರುತ್ತಿವೆ.

    ಪಶ್ಚಿಮಘಟ್ಟ ತಪ್ಪಲಲ್ಲಿ ಎಷ್ಟು ಕಂದಾಯ ಭೂಮಿಯಿದೆ, ಕಾಡೆಷ್ಟು ನಾಡೆಷ್ಟು, ರಕ್ಷಿತಾರಣ್ಯ ವಗೈರೆ, ವೈಲ್ಡ್ ಲೈಪ್ ಯಾವುದೇ ಲೆಕ್ಕಾಚಾರ ಸಂಬಂಧಿಸಿದ ಇಲಾಖೆ ಬಳಿಯಿಲ್ಲ. ಭೌಗೋಳಿಕ ಹಿನ್ನೆಲೆ ಕೇಳುವುದೇ ವೇಸ್ಟ್. ಜನಪ್ರತಿನಿಧಿಗಳ ಮತಬೇಟೆ, ಇವತ್ತು ಇಲ್ಲದಿದ್ದವರು ನಾಳೆ ಮತ್ತೆಲ್ಲಿಗೋ ವರ್ಗವಾಗುವ ಅಧಿಕಾರಿಗಳಿಗೆ ಘಟ್ಟದ ಬುಡದಲ್ಲಿ ಏನಾದರೇನು ಎನ್ನುವ ತಾತ್ಸಾರ. ಪರಿಸರ ವಾಸಿಗಳಿಗಾದರೂ ತಾವು ಹುಟ್ಟಿಬೆಳೆದ ಊರು ಉಳಿಸಿಕೊಳ್ಳುವ ಮನೋಭಾವ ಕಾಣುತ್ತಿಲ್ಲ.

    ಘಟ್ಟದ ಕಾಡೆಲ್ಲಾ ಕರಗಿ, ಎಲ್ಲಿ ನೋಡಿದರಲ್ಲಿ ಕಲ್ಲು ಕೊರೆವ ಯಂತ್ರಗಳ ಸದಿಗ್ದೆ ಕಾಡುಪ್ರಾಣಿಗಳ ಜತೆ ನಾಡನ್ನು ಆಪೋಶನ ತೆಗೆದುಕೊಳ್ಳಲಾಗುತ್ತಿದೆ. ಒಟ್ಟಾರೆ ಅಧಿಕಾರಿಗಳ ನಿರ್ಲಕ್ಷ, ಜನಪ್ರತಿನಿಧಿಗಳ ಓಲೈಕೆ ರಾಜಕೀಯಕ್ಕೆ ಪಶ್ಚಿಮಘಟ್ಟ ಬರಿದಾಗುತ್ತಿರುವುದು ಸುಳ್ಳಲ್ಲ.

     Mining 2
    ಸರ್ಕಾರಿ ಜಾಗ ಅಕ್ರಮವಾಗಿ ಮಂಜೂರು ಮಾಡಿಕೊಂಡು ಗಣಿ ನಡೆಸುತ್ತಿರುವುದು.

    ಪರವಾನಿಗೆಯೇ ಇಲ್ಲ

    ಕುಂದಾಪುರ, ಬೈಂದೂರು ತಾಲೂಕಲ್ಲಿ 204 ಕೆಂಪುಕಲ್ಲು ಗಣಿ ಇದೆ. ಅದರಲ್ಲಿ ಜಡ್ಕಲ್ ಗ್ರಾಮವೂ ಸೇರಿದೆ. ಕಾನ್ಕಿ, ಸೆಳಕೋಡು, ಮುದೂರು, ಜಡ್ಕಲ್ ಸರ್ಕಾಡಿಯಲ್ಲಿ ಕೆಂಪುಕಲ್ಲು ಕೀಳಲಾಗುತ್ತಿದೆ. ಕೆಂಪುಕಲ್ಲು ಗಣಿಗೆ ಪರವಾನಿಗೆಯೇ ಇಲ್ಲ. ಅಕ್ರಮ ಸಕ್ರಮ, ಒತ್ತುವರಿ ಭೂಮಿಗೆ ಗಣಿಗೆ ಪರವಾನಿಗೆ ಕೊಡೋದಕ್ಕೆ ಇಲಾಖೆಗೆ ಆಗೋದಿಲ್ಲ. ಅಧಿಕಾರಿಗಳ ಕೃಪಾಕಟಾಕ್ಷದಲ್ಲಿ ಗಣಿ ಮುಲಾಜಿಲ್ಲದೆ ನಡೆಯುತ್ತಿದೆ. ಹಾಗಂತೆ ಜಡ್ಕಲ್ ಗ್ರಾಮ ಕೆಂಪುಕಲ್ಲಿಗೆ ಉತ್ತಮ ಇಲ್ಲ. ಹಿಂದೆ ಯಂತ್ರದಲ್ಲಿ ಕೆಂಪುಕಲ್ಲು ಕೊರೆದು ನಂತರ ಪಿಕಾಶಿಯಿಂದ ಕಲ್ಲು ಏಳಿಸಲಾಗುತ್ತಿತ್ತು. 10 ಕಲ್ಲು ಏಳಿಸಿದರೆ, ಅರ್ಧಕ್ಕರ್ಧ ಕಲ್ಲು ಡ್ಯಾಮೇಜ್ ಆಗುತ್ತಿತ್ತು. ಪ್ರಸಕ್ತ ಕೆಂಪುಕಲ್ಲು ಕಟ್ ಮಾಡಿದ ನಂತರ ಏಳಿಸುವ ಯಂತ್ರ ಬಂದಿದ್ದರಿಂದ ಕಲ್ಲು ಒಡೆಯುತ್ತದೆ ಎನ್ನುವ ಭಯವಿಲ್ಲ. ಒಂದು ಕಲ್ಲು ಮನೆಗೆ ಬಂದು ಬೀಳುವುದಕ್ಕೆ 32 ರೂ. ಬಿದ್ದರೆ, ಕೆತ್ತಿಕಟ್ಟುವುದಕ್ಕೆ ಪ್ರತಿ ಕಲ್ಲಿಗೆ 42 ರೂ.ಆಗುತ್ತದೆ. ಕೆಂಪುಕಲ್ಲು ಚಿನ್ನದ ಗಣಿಯಾಗುತ್ತಿರುವುದರಿಂದ ಭೂಮಿಯ ಖನಿಜ ಸಂಪತ್ತು ಲೂಟಿಯಾಗುತ್ತಿದ್ದು, ಅದರ ಪರಿಣಾಮ ವನ್ಯಜೀವಿಗಳು, ಜಲಮೂಲ, ಘಟ್ಟದ ಗೋಡೆಗೆ ಅಪಾಯಕ್ಕೆ ತಂದಿಟ್ಟಿದೆ. ರಸ್ತೆ ಬದಿಯಲ್ಲಿ ಕಲ್ಲುಕಿತ್ತ ಹೊಂಡಗಳು ಸಂಚಾರಿಗಳ ಎದೆ ನಡುಗಿಸುತ್ತದೆ, ವನ್ಯಜೀವಿಗಳನ್ನು ದೇವರೆ ಕಾಯಬೇಕು.

    ಪರಿಸರ ವಾಸಿಗಳು ಏನಂತಾರೆ?

    ಹಿಂದೆ ನಮ್ಮೂರು ಹೀಗಿರಲಿಲ್ಲ. ಘಟ್ಟವೆಲ್ಲಾ ಹಸಿರಾಗಿ ಕಂಗೊಳ್ಳಿಸುತ್ತಿದ್ದರೆ, ಘಟ್ಟದಿಂದ ಹರಿದು ಬರುವ ನೀರು ಹೊಳೆಯಾಗಿ ಹರಿದು ನೀರಿಗೆ ಸಮಸ್ಯೆ ಕಾಡಿದ್ದಿಲ್ಲ. ಕಾಡೆಲ್ಲ ಬರಿದಾಗಿ ರಬ್ಬರ್, ಬೆಟ್ಟಗುಡ್ಡದಲ್ಲಿ ಲವಂಚ, ಅಡಕೆ, ಗೇರು ಬೆಳೆಗೆ ಹಿಂದೆಯಿದ್ದ ಅರ್ಧಕ್ಕರ್ಧ ಕಾಡು ಈಗಿಲ್ಲ. ಘಟ್ಟದ ಹೊಳೆ ಹರಿಯುವುದು ನಿಲ್ಲಿಸಿ ಬಿಡುತ್ತವೆ. ದೊಡ್ಡ ದೊಡ್ಡ ಎಸ್ಟೇಟ್ ಮಾಲೀಕರು ಹೊಳೆಗಳಿಗೆ ಕಟ್ಟೆ ಕಟ್ಟಿ ಹನಿ ನೀರು ಕೆಳಗೆ ಬಿಡದೆ ರಬ್ಬರ್, ಅಡಕೆ, ತಂಗು ಕೃಷಿಗೆ ಬಳಸಿಕೊಳ್ಳುತ್ತಿದ್ದು, ಜೀವಜಲ ಬರಿದು ಮಾಡಲಾಗುತ್ತದೆ. ಈಗ ಕೆಂಪುಕಲ್ಲು ಕೀಳುವ ಧಾವಂತ ಘಟ್ಟದ ಬುಡಕ್ಕೆ ಅಪಾಯ ತರುತ್ತಿದ್ದು, ಕೇರಳ, ಮಡಿಕೇರಿಯ ದುರಂತ ಕಣ್ಣಮುಂದೆ ಬರುತ್ತದೆ. ಒಬ್ಬರೋ ಇಬ್ಬರೋ ವಿರೋಧಿಸಿದರೆ, ಅವರು ಊರು ಬಿಡಬೇಕು. ಎಲ್ಲ ಗಪ್‌ಚುಪ್ ಆಗಬೇಕು. ಇನ್ನಾದರೂ ಪ್ರಾಕೃತಿಕ ವಿಕೋಪದಿಂದ ಘಟ್ಟ ಕಾಪಾಡ ಬೇಕಾಗಿದೆ. ಕೆಂಪುಕಲ್ಲು ಗಣಿಗೆ ಅಧಿಕಾರಿಗಳು ತಡೆ ಹಾಕಬೇಕು ಎಂದು ಊರವರು ವಿಜಯವಾಣಿ ಜತೆ ಹೇಳಿಕೊಂಡಿದ್ದಾರೆ.

    ಪಶ್ಚಿಮ ಘಟ್ಟದ ತಪ್ಪಲು ಅಕ್ರಮ ಗಣಿ ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ, ಅತಿಕ್ರಮ ಗಣಿ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಅಕ್ರಮ ಸಕ್ರಮದಲ್ಲಿ ಜಾಗ ಪಡೆದು ಗಣಿ ನಡೆಸುತ್ತಿರುವವರ ದಾಖಲೆ ರದ್ದು ಮಾಡಲಾಗುತ್ತದೆ.

    -ರಶ್ಮಿ ಎಸ್.ಆರ್., ಉಪವಿಭಾಗಾಧಿಕಾರಿ, ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts