More

    ಬಿರು ಬೇಸಿಗೆಯಲ್ಲೂ ಸಮೃದ್ಧ ಸೌತೆ ಕೃಷಿ

    ಕೋಟ: ಇಲ್ಲಿನ ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಳಿಯಾರು ಗ್ರಾಮದ ಹರ್ತಟ್ಟು ಸಿದ್ಧ ದೇವಾಡಿಗ ಬಿರು ಬೇಸಿಗೆಯಲ್ಲೂ ಸಮೃದ್ಧವಾಗಿ ಸೌತೆ ಬೆಳೆದು ಅಚ್ಚರಿ ಮೂಡಿದ್ದಾರೆ.

    ಸಾಮಾನ್ಯವಾಗಿ ಭತ್ತದ ಕಟಾವಿನ ನಂತರ ಭೂಮಿಯ ತೇವಾಂಶ, ಮಣ್ಣಿನ ಫಲವತ್ತತೆಯನ್ನು ಅನುಸರಿಸಿ ಸೌತೆ ಕೃಷಿ ಮಾಡುತ್ತಾರೆ. ಆದರೆ ಸಿದ್ಧ ದೇವಾಡಿಗ ಎರಡು ಎಕರೆ ಕೃಷಿ ಭೂಮಿಯಲ್ಲಿ ಕಲ್ಲಂಗಡಿ, ಹೀರೆಕಾಯಿ, ಅಲಸಂಡೆ ಇನ್ನಿತರ ಬೆಳೆಗಳ ನಡುವೆ ಇದೀಗ ಸೌತೆ ಕೃಷಿ ಮಾಡಿದ್ದಾರೆ.

    ಹೈನುಗಾರಿಕೆಯೊಂದಿಗೆ ಕೃಷಿ

    ಸಿದ್ಧ ದೇವಾಡಿಗ ಹೈನುಗಾರಿಕೆಯೊಂದಿಗೆ ಎರಡು ಎಕರೆ ಕೃಷಿ ಭೂಮಿಯಲಿ ರಾಸಾಯನಿಕ ಬಳಸದೆ ಹಟ್ಟಿಗೊಬ್ಬರ ಬಳಸಿ ನಾನಾ ರೀತಿಯ ಬೆಳೆ ಬೆಳೆದು ಈ ರೀತಿ ಕೃಷಿ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. 63ರ ಹರೆಯದ ದೇವಾಡಿಗರು ಪತ್ನಿ ಸುಜಾತ ಸಹಕಾರದೊಂದಿಗೆ ಯಾಂತ್ರಿಕ ಕೃಷಿಗೆ ಮುನ್ನುಡಿ ಬರೆದಿದ್ದಾರೆ. ವಾರಾಹಿ ನೀರಿನ ಸದ್ಬಳಕೆ ಮಾಡಿಕೊಂಡು ಕೃಷಿಯಲ್ಲಿ ಶ್ರಮಪಟ್ಟರೆ ಲಾಭದಾಕ ವಾಗಲು ಸಾಧ್ಯವಿದೆ ಎಂಬುವುದನ್ನು ತೊರಿಸಿಕೊಟ್ಟಿದ್ದಾರೆ.

    ಒಂದೇ ವರ್ಷದಲ್ಲಿ ನಾನಾ ಬೆಳೆ

    ಸಾಮಾನ್ಯವಾಗಿ ಕರಾವಳಿಯ ಮಣ್ಣಿನಲ್ಲಿ ಎರಡು ಬೆಳೆಗಳನ್ನು ವರ್ಷದಲ್ಲಿ ಪಡೆಯಬಹುದಾಗಿದೆ. ಆದರೆ ನೀರಿನ ಸೌಲಭ್ಯ ಬಳಸಿ ನಾಲ್ಕು ಬೆಳೆಗಳನ್ನು ಬೆಳೆಯಲು ಪ್ರಯತ್ನಿಸುತ್ತಿರುವ ಸಿದ್ಧದೇವಾಡಿಗ ಭತ್ತ, ಅಲಸಂಡೆ, ಹೀರೆಕಾಯಿ ಇದೀಗ ಸೌತೆ ಕೃಷಿ ಮಾಡಿ ಹೀಗೂ ಲಾಭದಾಯಕ ಕೃಷಿ ಮಾಡಲು ಸಾಧ್ಯವಿದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.

    Cucumber Agriculture 3

    ಉಗ್ರಾಣಿ ಮನೆ ಹಣೆಪಟ್ಟಿ

    ಕೋಟ ಪಂಚಾಯಿತಿ ವ್ಯಾಪ್ತಿಯ ಮೂಡುಗಿಳಿಯಾರು ಉಗ್ರಾಣಿ ಮನೆತನ ಕೃಷಿ ಕಾಯಕದಲ್ಲಿ ಎತ್ತಿದ ಕೈ. ಆ ಕಾಲಘಟ್ಟದ ಹಿರಿಯರು ತಮ್ಮ ಎಕ್ಕರೆಗಟ್ಟಲೆ ಕೃಷಿ ಭೂಮಿಯಲ್ಲಿ ಉಳುಮೆ ಮಾಡಿ ಭತ್ತದಿಂದ ಹಿಡಿದು ಎಲ್ಲ ರೀತಿಯ ಬೆಳೆ ಬೆಳೆದು ಮಾದರಿಯಾಗಿದ್ದರು. ಅದೇ ರೀತಿ ಸಿದ್ಧ ದೇವಾಡಿಗ ಮಾವ ರಾಮ ದೇವಾಡಿಗರ ಪ್ರೇರಣೆಯಂತೆ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಅದರಿಂದಲೇ ಜೀವನ ನಿರ್ವಹಿಸಿ ಈ ರೀತಿಯಲ್ಲೂ ಸಾಧ್ಯವಿದೆ ಎಂಬುವುದನ್ನು ಇಂದಿನ ಯುವಕರಿಗೆ ತೋರಿಸಿಕೊಟ್ಟಿದ್ದಾರೆ.

    ಹಿರಿಯರು ಕಲಿಸಿಕೊಟ್ಟ ಕೃಷಿ ಕಾಯಕ ಮಾಡುತ್ತಿದ್ದೇನೆ. ನನಗೆ ಇಲ್ಲಿಯವರೆಗೆ ನಷ್ಟ ಖಂಡಿತ ಇಲ.್ಲ ಕೃಷಿ ಭೂಮಿಯಲ್ಲಿ ಒಂದೇ ರೀತಿಯ ಬೆಳೆ ಬೆಳೆಯದೆ ಬೇರೆ ಬೇರೆ ಬೆಳೆಗಳನ್ನು ಬೆಳೆದು ಲಾಭದಾಯಕ ಕೃಷಿಯಾಗಿಸಲು ಸಾಧ್ಯವಿದೆ. ರೈತ ಬೆಳೆದ ಬೆಳೆಗೆ ನೈಜ ಬೆಲೆ ಸಿಗಬೇಕೆಂಬುವುದು ನಮ್ಮ ಆಗ್ರಹವಾಗಿದೆ. ಯುವ ಸಮುದಾಯ ಕೃಷಿ ಕ್ಷೇತ್ರಕ್ಕೆ ಮುನ್ನುಗ್ಗಬೇಕಿದೆ. ಇಲ್ಲವಾದಲ್ಲಿ ನಮ್ಮ ಪಕ್ಕದ ದೇಶಗಳಲ್ಲಿ ಕಂಡುಬರುವ ವ್ಯವಸ್ಥೆ ನಮ್ಮಲ್ಲೂ ಆಗುವುದಕ್ಕೆ ಸಂಶಯವೇ ಇಲ್ಲ.

    -ಸಿದ್ಧ ದೇವಾಡಿಗ, ಹಿರಿಯ ಕೃಷಿಕ ಕೋಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts