More

    ಗಂಗೊಳ್ಳಿ ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಂಟಿ

    ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

    ಗಂಗೊಳ್ಳಿ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಮ್ಯಾಂಗನೀಸ್ ರಸ್ತೆಯ ಬದಿಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳಿಂದ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಅಡಚಣೆಯುಂಟಾಗುತ್ತಿದ್ದು, ಗಿಡಗಂಟಿ ತೆರವುಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

    ಗಂಗೊಳ್ಳಿ ಮುಖ್ಯರಸ್ತೆ ಮೂಲಕ ಮ್ಯಾಂಗನೀಸ್ ವಾರ್ಫ್ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಗಿಡಗಂಟಿ ಬೆಳೆದು ನಿಂತಿದೆ. ರಸ್ತೆಯಲ್ಲಿ ಒಂದು ವಾಹನ ಸಾಗುವಷ್ಟು ಜಾಗವಿದ್ದು, ಇನ್ನೊಂದು ವಾಹನ ಬಂದರೆ ರಸ್ತೆಯ ಬದಿಯಲ್ಲಿ ನಿಲ್ಲಿಸಬೇಕಾದ ಪರಿಸ್ಥಿತಿಯಿದೆ. ಬಂದರು ಇಲಾಖೆಗೆ ಸೇರಿದ ಈ ರಸ್ತೆ ಹಲವು ಕಡೆಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗುತ್ತಿದ್ದು, ಪಾದಚಾರಿಗೆ ರಸ್ತೆ ಬದಿಯಲ್ಲಿ ನಡೆಯಲು ಸಾಧ್ಯವಾಗುತ್ತಿಲ್ಲ. ರಸ್ತೆ ಬದಿಯ ಗಿಡಗಂಟಿಗಳಲ್ಲಿ ಹಾವು ಮತ್ತು ಇನ್ನಿತರ ವಿಷಜಂತುಗಳು ಸಂಚರಿಸುತ್ತಿದ್ದು, ಜನರು ಭಯದಲ್ಲಿ ಸಂಚರಿಸಬೇಕಾಗಿದೆ.

    ರಾತ್ರಿ ಸಂಚಾರ ಅಪಾಯಕಾರಿ

    ಮ್ಯಾಂಗನೀಸ್ ವಾರ್ಫ್ ಪ್ರದೇಶಕ್ಕೆ ಪ್ರತಿನಿತ್ಯ ಲಾರಿ, ಟೆಂಪೊ ಸಹಿತ ನೂರಾರು ವಾಹನ ಈ ರಸ್ತೆ ಮೂಲಕ ಸಂಚರಿಸುತ್ತಿದ್ದು, ನೂರಾರು ವಿದ್ಯಾರ್ಥಿಗಳು ಈ ರಸ್ತೆ ಮೂಲಕ ಶಾಲಾ ಕಾಲೇಜಿಗೆ ತೆರಳುತ್ತಿದ್ದಾರೆ. ಪ್ರತಿನಿತ್ಯ ಮೀನುಗಾರಿಕೆಗೆ ತೆರಳುವ ಮೀನುಗಾರರು ಇದೇ ರಸ್ತೆ ಅವಲಂಬಿಸಿದ್ದು ಸದ್ಯದ ಪರಿಸ್ಥಿತಿಯಲ್ಲಿ ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಈ ರಸ್ತೆ ಮೂಲಕ ಸಂಚರಿಸುವುದು ಬಹಳಷ್ಟು ಅಪಾಯಕಾರಿಯಾಗಿದೆ.

    Gangolli road 2

    ಮನವಿಗಿಲ್ಲ ಸ್ಪಂದನೆ

    ರಸ್ತೆ ಬದಿಯಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿರುವ ಗಿಡಗಂಟಿ ತೆರವುಗೊಳಿಸುವಂತೆ ಬಂದರು ಇಲಾಖೆಗೆ ಮನವಿ ಮಾಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿ ತೆರವುಗೊಳಿಸಿ ಪಾದಚಾರಿಗಳು ಮತ್ತು ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಗಂಗೊಳ್ಳಿ ಮುಖ್ಯರಸ್ತೆ ಮೂಲಕ ಮ್ಯಾಂಗನೀಸ್ ವಾರ್ಫ್ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಗಿಡಗಂಟಿ ಬೆಳೆದು ನಿಂತಿದ್ದು, ಗಿಡಗಂಟಿಗಳಿಂದ ರಸ್ತೆಯಲ್ಲಿ ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಮರಗಿಡಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಇಲಾಖಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು.

    -ಅಶೋಕ್, ಸ್ಥಳೀಯ ನಿವಾಸಿ

    ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಬೆಳೆದು ನಿಂತಿರುವ ಗಿಡಗಂಟಿ ತೆರವುಗೊಳಿಸಲು ಈ ಹಿಂದೆ ಬಂದರು ಇಲಾಖೆಗೆ ಮನವಿ ಮಾಡಲಾಗಿತ್ತು. ಆದರೂ ಗ್ರಾಪಂ ವತಿಯಿಂದ ಗಿಡಗಂಟಿಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಲಾಗಿದೆ. ಇದೀಗ ಮತ್ತೆ ಬಂದರು ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಲಾಗುವುದು.

    -ಶ್ರೀನಿವಾಸ ಖಾರ್ವಿ, ಅಧ್ಯಕ್ಷರು, ಗ್ರಾಪಂ ಗಂಗೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts