More

    ರಾಷ್ಟ್ರೀಯ ಹೆದ್ದಾರಿ ಸಂಚಾರ ಸವಾಲು

    ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

    ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಚತುಷ್ಪಥ ಕಾಮಗಾರಿ ನಡೆದ ಬಳಿಕ ಅಪಾಯದ ಕೂಪವಾಗಿ ಪರಿಣಮಿಸಿದೆ. ನಿತ್ಯ ಇಲ್ಲಿ ಅಪಘಾತ ಸಂಭವಿಸುತ್ತಿದ್ದು, ಕಳೆದ ಮೂರು ದಿನಗಳಲ್ಲಿ ಮೂರು ಅಪಘಾತ ಸಂಭವಿಸಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
    ಕುಂದಾಪುರ- ಬೈಂದೂರು ಹಾಗೂ ಗಂಗೊಳ್ಳಿ- ಆಲೂರನ್ನು ಸಂಧಿಸುವ ಈ ಜಂಕ್ಷನ್‌ನಲ್ಲಿ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದಿದ್ದರೆ ಜನರ ಪ್ರಾಣಕ್ಕೆ ಎರವಾಗುವ ಅಪಾಯವಿದೆ ಎನ್ನುವ ಆತಂಕ ಸಾರ್ವಜನಿಕರದು.

    ಸುರಕ್ಷತೆಗಿಲ್ಲ ಆದ್ಯತೆ

    ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಗಂಗೊಳ್ಳಿ (ಗುಜ್ಜಾಡಿ)- ಆಲೂರು ಜಿಲ್ಲಾ ಮುಖ್ಯ ರಸ್ತೆ ಈ ಮುಳ್ಳಿಕಟ್ಟೆ ಮೂಲಕವೇ ಹಾದು ಹೋಗುತ್ತದೆ. ನಿರಂತರವಾಗಿ ಜನ ಹಾಗೂ ವಾಹನ ಸಂದಣಿಯಿಂದ ಕೂಡಿರುವ ಜಂಕ್ಷನ್ ಇದಾಗಿದೆ. ಅವೈಜ್ಞಾನಿಕ ಚತುಷ್ಪಥ ಕಾಮಗಾರಿಯಿಂದಾಗಿ ಇಲ್ಲಿ ವಾಹನಗಳಿಗೆ, ರಸ್ತೆ ದಾಟುವ ಪಾದಚಾರಿಗಳ ಸಂಚಾರ ಸುರಕ್ಷತೆಗೆ ಯಾವುದೇ ಪ್ರಾಮುಖ್ಯತೆ ನೀಡಿಲ್ಲ. ಇದರಿಂದಾಗಿಯೇ ಆಗಾಗ್ಗೆ ಅಪಘಾತ ಸಂಭವಿಸುತ್ತಿದೆ ಎನ್ನುವುದಾಗಿ ಜನ ಆರೋಪಿಸಿದ್ದಾರೆ.

    ಬೀದಿದೀಪಗಳಿಲ್ಲ

    ಅಸಮರ್ಪಕ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಸುಗಮ ಹಾಗೂ ಸುರಕ್ಷತೆಯ ಸಂಚಾರ ಅತ್ಯಂತ ಸವಾಲಿನ ಕಾರ್ಯ. 4 ಕಡೆಗಳಿಂದ ವಾಹನಗಳು ಹಾದು ಹೋಗುವ ಜಂಕ್ಷನ್ ಇದಾಗಿದ್ದರೂ ಬೀದಿ ದೀಪಗಳಿಲ್ಲ. ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆಯೂ ನಿರ್ಮಿಸಿಲ್ಲ. ಯಾವುದೇ ಸೂಚನಾ ಫಲಕ, ಸಿಗ್ನಲ್‌ಲೈಟ್ ಅಳವಡಿಸಿಲ್ಲ. ಬಸ್ ನಿಲ್ದಾಣವಿಲ್ಲ. ಜನರು ಬಿಸಿಲಿನಲ್ಲಿಯೇ ಬಸ್‌ಗೆ ಕಾಯುವಂತಾಗಿದೆ. ಮುಳ್ಳಿಕಟ್ಟೆಯಿಂದ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ ಕೆಳ ಮಟ್ಟದಲ್ಲಿದೆ. ಆ ಕಡೆಯಿಂದ ಬರುವವರಿಗೆ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ವಾಹನಗಳು ತಿಳಿಯದಾಗಿದೆ. ಇದರಿಂದ ಆಲೂರು, ಹಕ್ಲಾಡಿ, ಹೊಸಾಡು ಕಡೆಗಳಿಂದ ಬರುವ ವಾಹನಗಳು ಗಂಗೊಳ್ಳಿ ಕಡೆಗೆ ತೆರಳಬೇಕಾದರೆ ದೊಡ್ಡ ಸಾಹಸವೇ ಮಾಡಬೇಕಾಗಿದೆ. ಹೆದ್ದಾರಿಯ ಎರಡು ಕಡೆಗಳಿಂದಲೂ ನಿರಂತರವಾಗಿ ವಾಹನಗಳು ಸಂಚರಿಸುತ್ತಲೇ ಇರುವುದರಿಂದ ಪಾದಚಾರಿಗಳಿಗೆ ರಸ್ತೆ ದಾಟುವುದೇ ಕಷ್ಟಕರವಾಗಿದೆ.

    ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಆಗುತ್ತಿರುವ ಅಪಘಾತಗಳ ಬಗ್ಗೆ ಗಮನಕ್ಕೆ ಬಂದಿದ್ದು, ಅಪಾಯಕಾರಿ ವಲಯ ಎಂದು ಪರಿಗಣಿಸಲಾಗಿದೆ. ಇಲ್ಲಿ ಆಗುತ್ತಿರುವ ಅಪಘಾತಗಳು, ತೊಂದರೆಗಳ ಬಗ್ಗೆ ಗಂಗೊಳ್ಳಿ ಠಾಣಾ ವತಿಯಿಂದ ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಗತ್ಯ ಸುರಕ್ಷತಾ ಕ್ರಮಕ್ಕೆ ಸೂಚನೆ ನೀಡಲಾಗುವುದು.
    – ಬೆಳ್ಳಿಯಪ್ಪ ಕೆ.ಯು.ಕುಂದಾಪುರ ಡಿವೈಎಸ್‌ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts