More

    ಕೊನೆಗೂ ಅಭಿವೃದ್ಧಿ ಕಂಡ ಕನ್ನಡಕುದ್ರು ಸಂಪರ್ಕ ರಸ್ತೆ : 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ : ಜನರ ಕನಸು ಈಡೇರಿಕೆ

    ಬಿ.ರಾಘವೇಂದ್ರ ಪೈ ಗಂಗೊಳ್ಳಿ

    ಬೈಂದೂರು ವಿಧಾನಸಭಾ ಕ್ಷೇತ್ರದ ಹೆಮ್ಮಾಡಿ ಗ್ರಾಪಂ ವ್ಯಾಪ್ತಿಯ ಕನ್ನಡಕುದ್ರುವಿಗೆ ಸೇತುವೆ ನಿರ್ಮಾಣಗೊಂಡಿದ್ದರೂ ಊರನ್ನು ಸಂಪರ್ಕಿಸಲು ಇರುವ ಒಂದೇ ಒಂದು ರಸ್ತೆಗೆ ಸೇತುವೆ ನಿರ್ಮಾಣದ 7 ವರ್ಷ ಬಳಿಕ ಅಭಿವೃದ್ಧಿ ಭಾಗ್ಯ ಕೂಡಿ ಬಂದಿದೆ. ಮಣ್ಣಿನ ರಸ್ತೆ ಸುಸಜ್ಜಿತ ಕಾಂಕ್ರೀಟ್ ರಸ್ತೆಯಾಗಿ ಬದಲಾಗಿದೆ.

    ಕನ್ನಡಕುದ್ರು ಹೋಗುವ ಸುಮಾರು 1 ಕಿ.ಮೀ. ಉದ್ದದ ಮಣ್ಣಿನ ರಸ್ತೆಯನ್ನು 2022-23ನೇ ಸಾಲಿನ 5054ರಡಿ ಗ್ರಾಮೀಣ ರಸ್ತೆ ಕಾಮಗಾರಿಗಳ ಅಭಿವೃದ್ಧಿ ಯೋಜನೆಯಡಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಕನ್ನಡಕುದ್ರುವಿನಿಂದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಂಪರ್ಕಿಸುವ ಮಣ್ಣಿನ ರಸ್ತೆ ಕೊನೆಗೂ ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿ ಹೊಂದಿದ್ದು, ಈ ಭಾಗದ ಜನರ ಕನಸು ಈಡೇರಿದಂತಾಗಿದೆ.
    ಕನ್ನಡಕುದ್ರು ಹೋಗುವ ಸುಮಾರು 1 ಕಿ.ಮೀ. ಉದ್ದದ ಮಣ್ಣಿನ ರಸ್ತೆ ಮಳೆಗೆ ರಾಡಿಯೆದ್ದು, ಗದ್ದೆಯಂತಾಗುತ್ತಿತ್ತು. ಕನ್ನಡಕುದ್ರುವಿನಿಂದ 6-7 ವರ್ಷಗಳ ಹಿಂದೆ ಹೆಮ್ಮಾಡಿ ಅಥವಾ ಕುಂದಾಪುರಕ್ಕೆ ಸಂಪರ್ಕ ಸಾಧ್ಯವಾಗಬೇಕಾದರೆ ದೋಣಿಯೇ ಆಧಾರವಾಗಿತ್ತು. ಬಹು ವರ್ಷಗಳ ಬೇಡಿಕೆ ಬಳಿಕ 2016ರಲ್ಲಿ ದ್ವೀಪವಾಸಿಗಳ ಸೇತುವೆಯ ಕನಸು ಈಡೇರಿತ್ತು. ಆದರೆ ಕನ್ನಡಕುದ್ರುವಿನಿಂದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಸಂಪರ್ಕಿಸುವ ಮಣ್ಣಿನ ರಸ್ತೆ ಹಲವು ವರ್ಷಗಳಿಂದ ಮಣ್ಣಿನ ರಸ್ತೆಯಾಗಿಯೇ ಉಳಿದಿತ್ತು.

    ನಿತ್ಯದ ಗೋಳು

    ಇಲ್ಲಿ ಯಾವುದೇ ಅಂಗಡಿ ಅಥವಾ ಇತರ ಸೌಕರ್ಯ ಇಲ್ಲದಿರುವುದರಿಂದ ಇಲ್ಲಿನ ನಿವಾಸಿಗರು ಎಲ್ಲದಕ್ಕೂ ಹೆಮ್ಮಾಡಿ ಪೇಟೆಯನ್ನೇ ಆಶ್ರಯಿಸಿದ್ದಾರೆ. ಪಂಚಾಯಿತಿ ಕಚೇರಿ, ಪಡಿತರ, ಇನ್ನಿತರ ಕೆಲಸ ಆಗಬೇಕಾದಲ್ಲಿ ಹೆಮ್ಮಾಡಿಗೆ ಬರಬೇಕು. ಬಸ್ ವ್ಯವಸ್ಥೆಯೂ ಇಲ್ಲ. ಒಂದೋ ಕನ್ನಡಕುದ್ರುವಿನಿಂದ ಮೂವತ್ತುಮುಡಿಯವರೆಗೆ ನಡೆದುಕೊಂಡು ಬಂದು ಹೆದ್ದಾರಿಯಲ್ಲಿ ಬಸ್ ಹತ್ತಬೇಕು. ಇಲ್ಲದಿದ್ದರೆ ಆಟೋ ಬಾಡಿಗೆ ಮಾಡಿಕೊಂಡು ಬರಬೇಕು. ರಸ್ತೆ ಸರಿಯಿದ್ದರೆ ಅನುಕೂಲವಾಗಲಿದೆ ಎಂಬುದು ಈ ಭಾಗದ ಜನರ ಆಗ್ರಹವಾಗಿತ್ತು.

    61 ಕುಟುಂಬಗಳು ನೆಲೆ

    ಕನ್ನಡಕುದ್ರುವಿನಿಂದ ರಾಷ್ಟ್ರೀಯ ಹೆದ್ದಾರಿಯ ಮೂವತ್ತುಮುಡಿಗೆ ಸಂಪರ್ಕ ಕಲ್ಪಿಸುವ 8.50 ಕೋಟಿ ರೂ. ವೆಚ್ಚದಲ್ಲಿ 200 ಮೀ. ಉದ್ದ ಹಾಗೂ 7.5 ಮೀಟರ್ ಅಗಲದ ಸೇತುವೆ ನಿರ್ಮಾಣಗೊಂಡಿತ್ತು. ಮೂವತ್ತುಮುಡಿ ಬಳಿಯ ಹೆದ್ದಾರಿಯಿಂದ ಕನ್ನಡಕುದ್ರುವಿನ ಕೊನೆಯಲ್ಲಿ ಇರುವ ಮನೆಗಳಿಗೆ ಸುಮಾರು 2 ಕಿ.ಮೀ. ದೂರವಿದೆ. ಈ ಪೈಕಿ ಹೆದ್ದಾರಿಯಿಂದ ಸೇತುವೆಯವರೆಗಿನ ರಸ್ತೆಗೆ ಈಗಾಗಲೇ ಡಾಂಬರು ಕಾಮಗಾರಿಯಾಗಿದೆ. ಅಲ್ಲಿಂದ ಮುಂದಕ್ಕೆ ಮಾತ್ರ ಮಣ್ಣಿನ ರಸ್ತೆಯಾಗಿಯೇ ಉಳಿದಿತ್ತು. ಸುಮಾರು 100 ಎಕರೆ ವಿಸ್ತೀರ್ಣವಿರುವ ಈ ಕನ್ನಡಕುದ್ರುವಿನಲ್ಲಿ 61 ಕುಟುಂಬ ನೆಲೆಸಿವೆ. ನಿತ್ಯ ನೂರಾರು ಮಂದಿ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಈ ಬಗ್ಗೆ ‘ವಿಜಯವಾಣಿ’ ವರದಿ ಪ್ರಕಟಿಸಿ ಜನರ ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನ ಸೆಳೆಯುವ ಪ್ರಯತ್ನ ನಡೆಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts