More

    ದುದ್ದ ಸೊಸೈಟಿ ಗದ್ದುಗೆ ಮೈತ್ರಿ ಪಕ್ಷದ ತೆಕ್ಕೆಗೆ: ಚೌಡೇಶ್ ಅಧ್ಯಕ್ಷ, ಇಂದ್ರಮ್ಮ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

    ಮಂಡ್ಯ: ತಾಲೂಕಿನ ದುದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಡಿ.ಬಿ.ಚೌಡೇಶ್ ಅಧ್ಯಕ್ಷರಾಗಿ ಹಾಗೂ ಇಂದ್ರಮ್ಮ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    11 ನಿರ್ದೇಶಕ ಬಲದ ಸೊಸೈಟಿಗೆ ಮಂಗಳವಾರ ಚುನಾವಣೆ ನಡೆಯಿತು. ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚೌಡೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದ್ರಮ್ಮ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸಹಕಾರ ಇಲಾಖೆಯ ಅಧಿಕಾರಿ ರವಿ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.
    ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನಗರದ ಬಂದೀಗೌಡ ಬಡಾವಣೆಯಲ್ಲಿ ನಿವಾಸದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಜೆಡಿಎಸ್ ಜತೆಗೆ ಬಿಜೆಪಿ ಪಕ್ಷದ ಕಾರ್ಯಕರ್ತರು ಮುಖಂಡರು ಶಿಸ್ತಿನ ಸಿಪಾಯಿಗಳ ರೀತಿ ತಮ್ಮ ಶಕ್ತಿ ಮೀರಿಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಆದ್ದರಿಂದ ಎರಡು ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಚ್‌ಡಿಕೆ ಅವರು ಜಾರಿ ಮಾಡಿದ್ದ ಜನಪ್ರಿಯ ಕಾರ್ಯಕ್ರಮಗಳನ್ನು ನೆನೆದು ಪಕ್ಷಾತೀತವಾಗಿ ವಿಶೇಷವಾಗಿ ಮಹಿಳೆಯರು ಆಶೀರ್ವಾದ ಮಾಡಿದ್ದಾರೆ ಎಂದರು.
    ಇನ್ನು ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖಾ ಸಂಸ್ಥೆಗೆ ನೀಡಿದೆ. ಸತ್ಯಾಸತ್ಯತೆ ಶೀಘ್ರದಲ್ಲೇ ಹೊರ ಬೀಳಲಿದೆ. ನಮ್ಮ ಪಕ್ಷ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕಾರ ನೀಡಲಿದೆ. ಅದರಂತೆ ಪ್ರಜ್ವಲ್ ರೇವಣ್ಣ ವಿರುದ್ಧ ಪಕ್ಷದ ವತಿಯಿಂದ ಶಿಸ್ತಿನ ಕ್ರಮ ತೆಗೆದುಕೊಂಡಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ಇನ್ನು ಹೆಣ್ಣು ಮಕ್ಕಳ ವಿಡಿಯೋ ಹರಿಬಿಟ್ಟವರ ಬಗ್ಗೆಯೂ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
    ಸೊಸೈಟಿ ನಿರ್ದೇಶಕರಾದ ಗುರುಪ್ರಸಾದ್, ಎನ್.ಬಿ.ರವಿ, ಡಿ.ಜೆ.ರಮೇಶ್, ಮಹದೇವಪ್ಪ , ಶಿವಮಾದಪ್ಪ, ಶಶಿಕಲಾ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್.ಎ.ಮಲ್ಲೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೇಯಶ್‌ಗೌಡ , ಮುಖಂಡರಾದ ಡಿ.ಮಹೇಶ್, ಮಂಜಯ್ಯ, ಲೋಕೇಶ್, ಬಸವಲಿಂಗಪ್ಪ, ಶ್ರೀನಿವಾಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts