More

  ಕೃತಕ ಬುದ್ಧಿಮತ್ತೆಯ ಸಾಧ್ಯತೆ ಸದುಪಯೋಗ ಅಗತ್ಯ

  ದಾವಣಗೆರೆ : ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನದ ಸಾಧ್ಯತೆಗಳನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುವ ಅಗತ್ಯವಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ.ಇ. ರಂಗಸ್ವಾಮಿ ಹೇಳಿದರು.
   ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್‌ನಲ್ಲಿ ಸೋಮವಾರ, ‘ಕೃತಕ ಬುದ್ಧಿಮತ್ತೆಯ ಸವಾಲುಗಳು ಮತ್ತು ಅವಕಾಶಗಳು’ ಕುರಿತು ಆಯೋಜಿಸಿದ್ದ ವಿದ್ಯಾರ್ಥಿಗಳ ರಾಜ್ಯಮಟ್ಟದ ವಿಚಾರ ಸಂಕಿರಣ ‘ಪ್ರಜ್ಞಾ’ ಉದ್ಘಾಟಿಸಿ ಮಾತನಾಡಿದರು.
   ಈ ಹಿಂದೆ ಸೂಪರ್ ಕಂಡಕ್ಟರ್, ನ್ಯಾನೋ ತಂತ್ರಜ್ಞಾನಗಳು ಬಂದಾಗ ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ನಾವು ವಿಫಲರಾದೆವು. ಈಗ ಕೃತಕ ಬುದ್ಧಿಮತ್ತೆ ವಿಚಾರದಲ್ಲಿ ಅಂಥ ನಿರ್ಲಕ್ಷೃ ಮಾಡಬಾರದು. ಜಗತ್ತಿನ ಇತರ ದೇಶಗಳ ಜತೆಗೆ ನಾವೂ ಸ್ಪರ್ಧಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
   ಕೃತಕ ಬುದ್ಧಿಮತ್ತೆಯು ಈಗ ಬಹು ಚರ್ಚಿತ ವಿಷಯವಾಗಿದೆ. ಜಗತ್ತಿನ ಮುಂದುವರಿದ ರಾಷ್ಟ್ರಗಳು ಈ ಕ್ಷೇತ್ರದಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡಿ ಮುಂಚೂಣಿಯಲ್ಲಿವೆ. ಭಾರತದಲ್ಲಿ 2027ರ ವೇಳೆಗೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ 17 ಬಿಲಿಯನ್ ರೂಪಾಯಿಗಳನ್ನು ಹೂಡಿಕೆ ಮಾಡುವ ಯೋಜನೆ ಇದೆ. ಜತೆಗೆ ಇಂಜಿನಿಯರ್‌ಗಳೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೊಸ ತಂತ್ರಜ್ಞಾನದ ಲಾಭ ಪಡೆಯಲು ಇದಕ್ಕಿಂತ ಸೂಕ್ತ ಸಮಯ ಇನ್ನೊಂದಿಲ್ಲ ಎಂದು ತಿಳಿಸಿದರು.
   ಕೃಷಿ, ಆರೋಗ್ಯ, ಶಿಕ್ಷಣ ಇನ್ನಿತರ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಮಹತ್ವದ ಪಾತ್ರ ವಹಿಸಲಿದೆ. ಹೊಸ ತಂತ್ರಜ್ಞಾನವು ಉದ್ಯೋಗಗಳನ್ನು ಕಸಿಯುವ ಆತಂಕವೂ ಇದೆ. ಡೇಟಾಗಳ ದುರ್ಬಳಕೆಯ ಸಾಧ್ಯತೆಯಿದೆ. ಎರಡನ್ನೂ ಸರಿದೂಗಿಸಿಕೊಂಡು ಮುಂದೆ ಸಾಗಬೇಕಿದೆ ಎಂದು ಸಲಹೆ ನೀಡಿದರು.
   ಕಾಲೇಜಿನ ನಿರ್ದೇಶಕ ಡಾ. ಎಚ್.ವಿ. ಸ್ವಾಮಿ ತ್ರಿಭುವಾನಂದ ಮಾತನಾಡಿ, ವಾಣಿಜ್ಯೋದ್ಯಮ, ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ ಅಳವಡಿಕೆ, ಅವಕಾಶದ ಕುರಿತು ವಿವರಿಸಿದರು. ಈ ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದ ವಿದ್ಯಾರ್ಥಿಗಳು 50ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದರು.
   ಪ್ರಾಚಾರ್ಯ ಡಾ.ಬಿ. ವೀರಪ್ಪ ಮಾತನಾಡಿ, ಗಣಿತದಲ್ಲೂ ಉತ್ತಮ ತಿಳಿವಳಿಕೆ ಇದ್ದಲ್ಲಿ ಮಾತ್ರ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಂಶೋಧನೆ ಸಾಧ್ಯ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.
   ಎಂ.ಕೆ. ಆದಿತ್ಯ, ವಿ.ಎನ್. ಸಂಜನಾ ನಿರೂಪಿಸಿದರು. ಎನ್.ಸಿ. ಪ್ರಜ್ಞಾ ಪ್ರಾರ್ಥಿಸಿದರು. ಬಿ.ಬಿ. ಮಂಜುನಾಥ್, ಬಿ.ವಿ. ಶ್ವೇತಾ, ಒ.ಎಚ್. ಲತಾ, ಎಂ.ಎಸ್. ನಾಗರಾಜ, ಜ್ಞಾನೇಶ್ವರ ಸುಳಕೆ, ಟಿ.ಎಸ್. ಕಾಂಚನಾ, ಡಿ.ಪಿ. ನಿಶಾರಾಣಿ, ಎ.ಎನ್. ಮಂಜುಳಾ, ಡಿ.ಆರ್. ನರೇಂದ್ರ ವಿಚಾರ ಸಂಕಿರಣದ ಸಂಯೋಜಕರಾಗಿದ್ದರು.
   ರಾಷ್ಟ್ರೀಯ ರಾಸಾಯನಿಕ ಮತ್ತು ರಸಗೊಬ್ಬರ ವಿಭಾಗದ ಶಿವಶಂಕರ ನಾಯಕ್, ಆಧುನಿಕ ನೀರಾವರಿ ವಿಧಾನದ ಬಗ್ಗೆ, ಸ್ತ್ರೀಶಕ್ತಿ ಸಂಘದ ಸುಜಾತಾ ಆವರಗೊಳ್ಳ ಕೃಷಿ, ತೋಟಗಾರಿಕೆಯಲ್ಲಿ ಡ್ರೋನ್ ಬಳಸಿ ಕೀಟನಾಶಕ ಸಿಂಪರಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
   …
   (ಕೋಟ್)
   ಬರುವ ವರ್ಷದ ವೇಳೆಗೆ ಕೃತಕ ಬುದ್ಧಿಮತ್ತೆಯು ಶಿಕ್ಷಣದಲ್ಲೂ ಪ್ರಧಾನ ವಿಷಯವಾಗಬಹುದು. ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಈ ಕ್ಷೇತ್ರದ ತಜ್ಞ ಇಂಜಿನಿಯರ್‌ಗಳ ಕೊರತೆಯಿದೆ. ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಅಲ್ಲದೆ ಸಾಮಾನ್ಯ ಪದವಿಯಲ್ಲೂ ಕೃತಕ ಬುದ್ಧಿಮತ್ತೆಯ ಶಿಕ್ಷಣದ ಅಗತ್ಯವಿದೆ.
    ಅಥಣಿ ಎಸ್. ವೀರಣ್ಣ, ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ಚೇರ್ಮನ್
   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts