More

    ಮಡಿವಾಳ ಸಮಾಜದಿಂದ ಪ್ರತಿಭಟನೆ

    ದಾವಣಗೆರೆ : ಹುಬ್ಬಳ್ಳಿಯ ನೇಹಾ ಹಿರೇಮಠ್, ಅಂಜಲಿ ಅಂಬಿಗರ ಅವರ ಹಂತಕರು ಹಾಗೂ ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ದೇವನೂರಿನ ಅರ್ಜುನಪ್ಪ ಹಣಮಂತನ ಮೇಲೆ ಹಲ್ಲೆ ಮಾಡಿದವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಜಿಲ್ಲಾ ಮಡಿವಾಳ ಮಾಚಿದೇವ ಸಂಘ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
     ಸಂಘದ ಪದಾಧಿಕಾರಿಗಳು ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.
     ಈ ವೇಳೆ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಎಚ್.ಜಿ. ಉಮೇಶ್, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಬಾಲಕಿ ಅನುಶ್ರೀ ಮೇಲೆ ವಾಮಾಚಾರ ಮಾಡಿ, ಆಕೆಯ ಕತ್ತು ಕೊಯ್ದು ಅಮಾನುಷವಾಗಿ ಕೊಲೆ ಮಾಡಲಾಗಿದೆ. ಅದರಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ, ಹತ್ಯೆಗಳು ಹೆಚ್ಚುತ್ತಿದ್ದು, ಇಡೀ ರಾಜ್ಯವೇ ಭಯಪಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
     ಇದಲ್ಲದೇ, ಹುಬ್ಬಳ್ಳಿಯಲ್ಲಿ ವಿಶ್ವ ಎಂಬಾತ ಅಂಜಲಿ ಅಂಬಿಗರ ಎನ್ನುವ ಯುವತಿಯನ್ನು ಕೊಲೆಗೈದು ಪರಾರಿಯಾಗುವ ವೇಳೆ ದಾವಣಗೆರೆ ಸಮೀಪದ ಮಾಯಕೊಂಡ ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಮೇಲೆ ಹತ್ಯೆಗೆ ಯತ್ನಿಸಿ, ಪ್ರಯಾಣಿಕರ ಸಹಕಾರದಿಂದ ರೈಲ್ವೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಇದೀಗ ಪ್ರಕರಣದ ತನಿಖೆ ನಡೆಯುತ್ತಿದೆ.
     ಇದೇ ರೀತಿ ರಾಜ್ಯದಲ್ಲಿ ಹಲ್ಲೆ, ಅತ್ಯಾಚಾರ, ಹತ್ಯೆಯಂತಹ ಪ್ರಕರಣಗಳು ಪುನರಾವರ್ತನೆಯಾಗುತ್ತಿದ್ದರೂ ರಾಜ್ಯದ ಗೃಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
     ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು. ಈ ಎಲ್ಲ ಪ್ರಕರಣಗಳ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
     ಪ್ರತಿಭಟನೆಯಲ್ಲಿ ಹುಲಿಕಟ್ಟೆ ರಾಮಚಂದ್ರಪ್ಪ, ಎಂ.ವೈ. ಸತೀಸ್, ಜಿ. ಕಿಶೋರ್ ಕುಮಾರ, ಆರ್.ಎನ್. ಮಾರುತಿ, ಅಂಜಿನಪ್ಪ ಪೂಜಾರ್, ಜಿ. ವಿಜಯ ಕುಮಾರ್, ಹನುಮಂತಪ್ಪ, ಕಕ್ಕರಗೊಳ್ಳ ಮಂಜುನಾಥ, ಅಣಜಿ ಹನುಮಂತಪ್ಪ, ಐಗೂರು ಅಂಜಿನಪ್ಪ, ಅರಸೀಕೆರೆ ಬಸವರಾಜ್, ರವಿ ಚಿಕ್ಕಣ್ಣ, ಮಧುರಾ, ನಾಗಮ್ಮ, ಡೈಮಂಡ್ ಮಂಜುನಾಥ್, ಗೋಪಾಲ್, ಕೃಷ್ಣಮೂರ್ತಿ, ರವಿ, ಬಾತಿ ಶಂಕರ್, ಸುಭಾಷ್, ರಾಜಣ್ಣ, ಎಂ.ಕೆ. ಬಸವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts