More

    ಸಸಿಗಳ ಉತ್ಪಾದನೆ ಕುಸಿತ

    ವಿಜಯವಾಣಿ ವಿಶೇಷ ಶಿರಸಿ
    ಕಳೆದ ಬೇಸಿಗೆಯ ನೀರಿನ ಬರ ಅರಣ್ಯ ಇಲಾಖೆಯ ಮೇಲೂ ಪರಿಣಾಮ ಬೀರಿದೆ. ನೀರಿನ ಅಭಾವದಿಂದಾಗಿ ಈ ವರ್ಷ ನರ್ಸರಿಯಲ್ಲಿ ಶೇ. 40ರಷ್ಟು ಗಿಡಗಳನ್ನು ಉತ್ಪಾದಿಸಲಾಗಿದೆ.

    ಶಿರಸಿ, ಸಿದ್ದಾಪುರ ತಾಲೂಕಿನ 6 ವಲಯಗಳಲ್ಲಿ ಗಿಡ ನೆಡುವ ಸಲುವಾಗಿ ಒಟ್ಟು 10 ಕಡೆ ನರ್ಸರಿ ಮಾಡಲಾಗುತ್ತಿದೆ. ಅರಣ್ಯದಲ್ಲಿ ಸುಲಭವಾಗಿ ಬೆಳೆಯುವ ಗಿಡಗಳು, ವಿನಾಶದ ಅಂಚಿನಲ್ಲಿರುವ ಗಿಡಗಳನ್ನೂ ಒಳಗೊಂಡಂತೆ 30.10 ಲಕ್ಷ ಗಿಡಗಳನ್ನು ಪ್ರತಿ ವರ್ಷ ಉತ್ಪಾದಿಸಲಾಗಿತ್ತಿತ್ತು. ಇವುಗಳಲ್ಲಿ ಕೆಂಗ್ರೆ ಮತ್ತು ಅಮ್ಮಿನಳ್ಳಿ ನರ್ಸರಿಗಳಲ್ಲೇ ಜಾಸ್ತಿ ಗಿಡ ಬೆಳೆಯಲಾಗುತ್ತಿತ್ತು. ಕೆಂಗ್ರೆ ಹೊಳೆ ನೀರು ಮತ್ತು ಅಮ್ಮಿನಳ್ಳಿಯಲ್ಲಿ ಅಘನಾಶಿನಿ ನದಿ ನೀರು ಅಗತ್ಯ ಪ್ರಮಾಣದಲ್ಲಿ ಬಳಕೆ ಮಾಡಿ ಜೂನ್ ಆರಂಭಕ್ಕೆ ನಾಟಿಗೆ ಸಿದ್ಧಪಡಿಸಲಾಗುತ್ತಿತ್ತು. ಜೂ.5 ರ ವಿಶ್ವ ಪರಿಸರ ದಿನದಂದು ಗಿಡ ನೆಡಲು ಅರಣ್ಯ ಇಲಾಖೆ ಸಿಬ್ಬಂದಿ ಆರಂಭಿಸಿದರೆ ಮಾಸಾಂತ್ಯದೊಳಗೆ ಈ ಕೆಲಸ ಪೂರ್ಣಗೊಳ್ಳುತ್ತಿತ್ತು.

    ಆದರೆ, ಪ್ರಸಕ್ತ ಸಾಲಿನಲ್ಲಿ ಎದುರಾಗಿರುವ ನೀರಿನ ಕೊರತೆ ಅರಣ್ಯ ನರ್ಸರಿಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ಕಳೆದ ವರ್ಷಗಳಲ್ಲಿ ಬೆಳೆಸಿದ್ದ ಗಿಡಗಳ ಸಂಖ್ಯೆಯ ಅರ್ಧಕ್ಕಿಂತ ಕಡಿಮೆ ಗಿಡಗಳನ್ನು ಬೆಳೆಸಲಾಗುತ್ತಿದೆ.

    ಶಿರಸಿ ಅರಣ್ಯ ವಿಭಾಗವು ಶಿರಸಿ ಹಾಗೂ ಸಿದ್ದಾಪುರ ತಾಲೂಕು ಒಳಗೊಂಡಿದ್ದು ಒಟ್ಟು 1,71,828 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಈ ವರ್ಷ ಹೊಸ ಪ್ರದೇಶದಲ್ಲಿ ಗಿಡ ನೆಡುವಿಕೆ ಸಾಧ್ಯವಾಗುತ್ತಿಲ್ಲ. ಕಳೆದ ಡಿಸೆಂಬರ್ ವೇಳೆಯಲ್ಲಿಯೇ ನದಿಗಳಲ್ಲಿ ನೀರಿನ ಕೊರತೆ ಕಾಣಿಸಿದ್ದರಿಂದ ಗಿಡಗಳ ನಾಟಿ ಗುರಿಯನ್ನೇ ಅರಣ್ಯ ಇಲಾಖೆ ಕಡಿಮೆ ಮಾಡಿಕೊಂಡಿದೆ.

    2022-23ನೇ ಸಾಲಿನಲ್ಲಿ ಇಲಾಖೆ ಬಳಕೆಗೆ 29,80,574 ಸಸಿಗಳನ್ನು ಮತ್ತು ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳಿಗೆ ವಿತರಿಸಲು 45100 ಸಸಿಗಳನ್ನು ಬೆಳೆಸಲಾಗಿತ್ತು. ಮಾವು, ಹಲಸು, ನೇರಳೆ, ವಾಟೆ, ಉಪ್ಪಗೆ, ಮುರುಗಲು, ದಿಮ್ಮಿ ಆಧಾರಿತ ಸಸಿಗಳಾದ ಸಾಗವಾನಿ, ಸೀಸಂ, ಮತ್ತಿ, ನಂದಿ, ಕಿಂದಳ ಜಾತಿಯ ಸಸಿಗಳು ಹಾಗೂ ಅಳಿವಿನಂಚಿನಲ್ಲಿರುವ ಸಸ್ಯಗಳಾದ ಸರಾಕಾ, ಅಶೋಕಾ, ದೇವದಾರಾ ಮತ್ತಿತರ ಸಸಿಗಳನ್ನು ಬೆಳೆಸಲಾಗಿತ್ತು. ಆದರೆ, ಈ ವರ್ಷ ಅಂದಾಜು 10 ಲಕ್ಷ ಗಿಡಗಳನ್ನು ಮಾತ್ರ ಬೆಳೆಸಲಾಗಿದೆ. ಜತೆಗೆ ಅವುಗಳ ರಕ್ಷಣೆಗೂ ಹಲವು ಸವಾಲುಗಳನ್ನು ಎದುರಿಸುವಂತಾಗಿದೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಮಾತಾಗಿದೆ.

    ಪ್ರಸಕ್ತ ಸಾಲಿನಲ್ಲಿ ಜೀವಜಲ ಕೊರತೆ ವಿಪರೀತವಾಗಿದೆ. ನದಿ, ಹೊಳೆಗಳ ಪಕ್ಕದ ಅರಣ್ಯ ಇಲಾಖೆ ನರ್ಸರಿಗಳಿಗೆ ಆಯಾ ಭಾಗದ ನೈಸರ್ಗಿಕ ನೀರು ಲಭ್ಯವಿಲ್ಲದಂತಾಗಿದೆ. ಹೀಗಾಗಿ ನರ್ಸರಿಯಲ್ಲಿ ತುರ್ತು ಬಳಕೆಗೆ ಪೂರಕವಾಗಿರುವ ಕೊಳವೆಬಾವಿಗಳ ನೀರನ್ನು ಬಳಸಿಕೊಂಡು ಸಸ್ಯಗಳ ಪೋಷಣೆ ಮಾಡಲಾಗಿದೆ. ಆದರೆ, ಹೇರಳ ನೀರಿಲ್ಲದ ಪರಿಣಾಮ ಬೆಳೆಸಿರುವ ಗಿಡಗಳು ಬಾಡಿದ್ದವು. ಹೀಗಾಗಿ ಬಿಸಿಲಿನಿಂದ ರಕ್ಷಣೆಗೆ ನೆರಳಿನ ವ್ಯವಸ್ಥೆ ಕೂಡ ಮಾಡಲಾಗಿತ್ತು. ಕಳೆದ ಐದು ದಿನಗಳಿಂದ ಮಳೆಯಾಗಿದ್ದು, ಅಂತೂ ನರ್ಸರಿ ಮಾಡಿದ ಗಿಡಗಳು ಮತ್ತೆ ಜೀವ ಪಡೆಯತ್ತಿವೆ.

    ಕಳೆದ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಶೇ.40ರಷ್ಟು ಮಾತ್ರ ಗಿಡಗಳನ್ನು ಬೆಳೆಸಲಾಗಿದೆ. ಹುಲೇಕಲ್ ವಲಯಕ್ಕೆ 1.5 ಲಕ್ಷ ಗಿಡ ಮಾತ್ರ ನಾಟಿ ಗುರಿ ನೀಡಲಾಗಿದೆ.
    I ಉಷಾ ಅರವಿಂದ- ವಲಯಾರಣ್ಯಾಧಿಕಾರಿ, ಹುಲೇಕಲ್ , ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts