More

  ಜೂನ್ 9 ರಂದು ಶ್ರೀರಾಮ ಸೇನೆಯಿಂದ ತ್ರಿಶೂಲ ದೀಕ್ಷೆ

  ದಾವಣಗೆರೆ : ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿಂದು ಸಹೋದರಿಯರ ರಕ್ಷಣೆಗಾಗಿ ಜೂನ್ 9 ರಂದು ಹುಬ್ಬಳ್ಳಿಯಲ್ಲಿ ತ್ರಿಶೂಲ ದೀಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳಲು, ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ಶ್ರೀರಾಮ ಸೇನೆಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಲಾಯಿತು.
   ಆತ್ಮರಕ್ಷಣೆ ಬಗ್ಗೆ 50 ಮಹಿಳೆಯರಿಗೆ ತರಬೇತಿ ಕೊಟ್ಟು, ನಂತರ ಅವರಿಗೆ ತ್ರಿಶೂಲ ದೀಕ್ಷೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
   ಹುಬ್ಬಳ್ಳಿಯಲ್ಲಿ ನಡೆದ ನೇಹಾ ಮತ್ತು ಅಂಜಲಿ ಹತ್ಯೆ ಪ್ರಕರಣಗಳ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹಿಂದು ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗುವುದನ್ನು ತಡೆಯಲು ಈ ಕಾರ್ಯಕ್ರಮ ರೂಪಿಸಲು ಸಭೆಯಲ್ಲಿ ಒಮ್ಮತಕ್ಕೆ ಬರಲಾಯಿತು. ಲವ್ ಜಿಹಾದ್ ಘಟನೆಗಳ ಬಗ್ಗೆ ಪುಸ್ತಕವೊಂದನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.
   ಲವ್ ಜಿಹಾದ್‌ನಿಂದ ತೊಂದರೆಗೆ ಒಳಗಾದವರ ನೆರವಿಗಾಗಿ ಹುಬ್ಬಳ್ಳಿಯಲ್ಲಿ ಸಹಾಯವಾಣಿ ಆರಂಭಿಸಲಾಗುವುದು. ಅಲ್ಲಿಗೆ ಬರುವ ಕರೆಗಳನ್ನು ಸಂಬಂಧಿಸಿದ ಜಿಲ್ಲೆಗಳಿಗೆ ವರ್ಗಾಯಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಮಟ್ಟದಲ್ಲಿ ಹಿರಿಯ ಸಲಹೆಗಾರರು, ಸ್ವಾಮೀಜಿ ಮತ್ತು ವಕೀಲರನ್ನು ಒಳಗೊಂಡ ರಕ್ಷಣಾ ಪಡೆಯನ್ನು ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
   ಜೂನ್ 21ರಿಂದ 23ರ ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಾಂತ ಅಭ್ಯಾಸ ವರ್ಗ ನಡೆಸಲು ತೀರ್ಮಾನಿಸಲಾಯಿತು.
   ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಪರಶುರಾಮ್ ನಡುಮನಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆನಂದ ಅಡ್ಡಿಯಾರ್, ಮಹಾಲಿಂಗಣ್ಣ ಗುಂಜಗಾವಿ, ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ್, ಎನ್. ಭಾಸ್ಕರ್, ಮಹೇಶ್ ರೋಕಡೆ, ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಇದ್ದರು.
   ರಾಜ್ಯದ ವಿವಿಧೆಡೆಯಿಂದ ಬಂದಿದ್ದ ವಿಭಾಗ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ರಾಜ್ಯ ಕಾರ್ಯಕಾರಿಣಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts