More

    ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

    ಮಂಡ್ಯ: ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳ ಕಡೆ ಗಮನಹರಿಸುವುದರ ಜತೆಗೆ ತುರ್ತಾಗಿ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕುಡಿಯುವ ನೀರಿನ ಸಂಬಂಧ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ವಿಪತ್ತು ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತಕ್ಕೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ಎಲ್ಲ ತಾಲೂಕು ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು ಪ್ರತಿದಿನ ಸಭೆ ನಡೆಸಬೇಕು. ಮಾತ್ರವಲ್ಲದೆ ತೀವ್ರ ತರ ಹಾಗೂ ಸಾಮಾನ್ಯ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಪಟ್ಟಿ ಮಾಡಿಕೊಂಡು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಬೇಕು. ಈ ರೀತಿ ನಿರಂತರ ಕ್ರಮವಾದಾಗ ಮಾತ್ರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯ ಎಂದರು.
    ಅನುದಾನದ ಕೊರತೆ ಇಲ್ಲ: ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅನುದಾನದ ಕೊರತೆ ಇಲ್ಲ. ಆದ್ದರಿಂದ ಸಮಸ್ಯೆಯನ್ನು ಸಮರ್ಪಕ ಹಾಗೂ ಸಮನ್ವಯವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಟ್ಯಾಂಕರ್ ಹಾಗೂ ಖಾಸಗಿ ಬೋರ್‌ವೆಲ್ಗಳಲ್ಲಿ ನೀರು ವೆಚ್ಚದ ಬಿಲ್ಲುಗಳನ್ನು ವಿಪತ್ತು ನಿರ್ವಹಣೆಯಡಿ ಪಾವತಿಸಲಾಗುವುದು. ಇದಲ್ಲದೇ ಪ್ರತಿ ತಾಲೂಕಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ(ಆರ್.ಡಿ.ಪಿ.ಆರ್)ಯಿಂದ ಈ ಹಿಂದೆ 20 ಲಕ್ಷ ರೂ, ಬಳಿಕ 25 ಲಕ್ಷ ರೂ ಬಿಡುಗಡೆ ಮಾಡಲಾಗಿದೆ. ಈ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ವರದಿ ಪಡೆದುಕೊಳ್ಳಬೇಕು. ಇದಲ್ಲದೇ ಇದರೊಂದಿಗೆ 45 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಯೋಜನೆ ಸಿದ್ಧಪಡಿಸಿ ಎಂದು ಸೂಚನೆ ನೀಡಿದರು.
    ಇನ್ನು ತಾಲೂಕು ಮಟ್ಟದಲ್ಲಿ ಯಾವ್ಯಾವ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಒದಗಿಸಲಾಗುತ್ತಿರುವ ಕುರಿತಂತೆ ಅವುಗಳನ್ನು ಟ್ಯಾಂಕರ್ ಮ್ಯಾನೇಜ್ಮೆಂಟ್ ಆ್ಯಪ್‌ನಲ್ಲಿ ದಾಖಲಿಸಬೇಕು. ಇಲ್ಲವಾದಲ್ಲಿ ಟ್ಯಾಂಕರ್ ಮಾಲೀಕರಿಗೆ ಹಣ ಪಾವತಿಸಲು ಸಾಧ್ಯವಾಗುವುದಿಲ್ಲ. ಇದರೊಟ್ಟಿಗೆ ಖಾಸಗಿ ಬೋರ್‌ವೆಲ್ಗಳಲ್ಲಿ ನೀರು ಪಡೆಯುತ್ತಿದ್ದರೆ, ಅವರೊಂದಿಗೆ ಒಪ್ಪಂದ ಮಾಡಿಕೊಂಡು ಕಾರ್ಯಾದೇಶ ನೀಡಿರುವ ಪ್ರತಿಯನ್ನು ತಪ್ಪದೇ ಸಲ್ಲಿಸಬೇಕು ಎಂದು ತಿಳಿಸಿದರು.
    ಪ್ರತಿ ವಾರಕ್ಕೊಮ್ಮೆ ತಹಸೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಪಿ.ಡಿ.ಒಗಳ ಜತೆ ಸಭೆ ನಡೆಸಬೇಕು. ಅಂತೆಯೇ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ತೊಂದರೆ ಇರುವ ಗ್ರಾಮಗಳ ವಿವರ ಪಡೆದುಕೊಂಡು ಕ್ರಮ ವಹಿಸಬೇಕು. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 120 ಖಾಸಗಿ ಬೋರ್‌ವೆಲ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ 29, ಮದ್ದೂರಿನಲ್ಲಿ 17, ಮಳವಳ್ಳಿಯಲ್ಲಿ 7, ಮಂಡ್ಯದಲ್ಲಿ 37, ನಾಗಮಂಗಲದಲ್ಲಿ 17, ಪಾಂಡವಪುರದಲ್ಲಿ 8 ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ 5 ಬೋರ್‌ವೆಲ್ಗಳಿಂದ ನೀರು ಪಡೆದುಕೊಂಡು ಸಾರ್ವಜನಿಕರಿಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.
    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಮಹೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎಂ.ಬಾಬು, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಎಸ್.ನಿರ್ಮಲಾ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಸುರೇಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts